ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.
ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕಾ ಸಮಿತಿ ನೇತೃತ್ವದಲ್ಲಿ ಶಹಾಪುರ ತಹಸೀಲ್ದಾರ್ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಸಾಗರ್, ತಾಲೂಕು ಕಾರ್ಯದರ್ಶಿ ಭೀಮರಾಯ ಪೂಜಾರಿ ಮಾತನಾಡಿ, ʼಅತಿವೃಷ್ಟಿಯಿಂದ ರೈತರು ಬೆಳೆದಿದ್ದ ಹತ್ತಿ, ತೊಗರಿ, ಹೆಸರು, ಸೂರ್ಯಕಾಂತಿ, ಶೇಂಗಾ ಹಾಗೂ ತೋಟಗಾರಿಕೆ ಬೆಳೆಗಳಾದ ವಿವಿಧ ತರಕಾರಿ, ಹಣ್ಣು, ಹೂ ಬೆಳೆ ಸಂಪೂರ್ಣ ಹಾಳಾಗಿದ್ದು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆʼ ಎಂದು ತಿಳಿಸಿದರು
ರೈತರು ಮುಂಗಾರು ಬಿತ್ತನೆಗೆ ದುಬಾರಿ ಬೆಲೆಯ ಬೀಜ, ರಸಗೊಬ್ಬರ, ಕೀಮಿನಾಶಕ್ಕಾಗಿ ಪ್ರತಿ ಎಕರೆಗೆ ₹35 ಸಾವಿರ ಖರ್ಚು ಮಾಡಿದ್ದಾರೆ. ಇದೀಗ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಹಿನ್ನೆಲೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ರೈತರ ಆತ್ಮಹತ್ಯೆ ತಡೆಗಟ್ಟಲು ಸಂಪೂರ್ಣ ಸಾಲ ಮನ್ನಾ ಮಾಡಬೇಕುʼ ಎಂದು ಒತ್ತಾಯಿಸಿದರು.
‘ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಹಾನಿಯಾದ ಸಂಪೂರ್ಣ ಬೆಳೆಯ ಸಮೀಕ್ಷೆ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಪ್ರತಿ ಎಕರೆ ₹50 ಸಾವಿರ ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು’ ಎಂದು ಬೇಡಿಕೆ ಇಟ್ಟರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಕಲಬುರಗಿಯಲ್ಲಿ ರೈತರ ಬೆಳೆ ನಷ್ಟ ಪರಿಹಾರ ವಿಚಾರದಲ್ಲಿ ಕೀಳುಮಟ್ಟದಿಂದ ಮಾತನಾಡಿರುವುದು ಖಂಡನೀಯ. ಕೂಡಲೇ ರೈತರಿಗೆ ಕ್ಷಮೆಯಾಚಿಸಬೇಕು ಮತ್ತು ರೈತರ ಬೆಳೆ ಪರಿಹಾರಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇವನಹಳ್ಳಿ ರೈತರ ಭೂಸ್ವಾಧೀನ ಬಗ್ಗೆ ಉಡಾಫೆ ಮಾತಾಡಿರುವ ಬಗ್ಗೆ ಕ್ಷಮೆಯಾಚಿಸಬೇಕು. ಮುಂಗಾರು ಬಿತ್ತನೆಗೆ ಅನುಕೂಲವಾಗುವಂತೆ ರೈತರಿಗೆ ಬ್ಯಾಂಕ್ ಸಾಲ ಒದಗಿಸಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಅರ್ಥಪೂರ್ಣ ʼಕಲ್ಯಾಣ ಕರ್ನಾಟಕ ಉತ್ಸವʼ ಆಚರಣೆಗೆ ನಿರ್ಧಾರ : ಡಿಸಿ ಶಿಲ್ಪಾ ಶರ್ಮಾ
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪ್ರಮುಖರಾದ ಭೀಮಣ್ಣ ತಪ್ಪಿದಾರ, ಭೀಮರಾಯ ಪೂಜಾರಿ, ತಮ್ಮಣ್ಣ ಜಾಗಿರದಾರ್, ಕಾರ್ಮಿಕ ಮುಖಂಡ ದೇವೇಂದ್ರ ಕುಮಾರ್, ವಿಜಯಕುಮಾರ್ ದೊಡ್ಡಮನಿ, ತಿಪ್ಪಣ್ಣ ಬೆನಕನಹಳ್ಳಿ, ಯಲ್ಲಪ್ಪ ನಾಯ್ಕೋಡಿ, ಮಲ್ಲಮ್ಮ ಬನ್ನಟ್ಟಿ, ಯಂಕಮ್ಮ ನಾಯ್ಕೋಡಿ ಇನ್ನಿತರರು ಭಾಗವಹಿಸಿದರು.