ದ.ಕ.ಜಿಲ್ಲೆಯನ್ನು ಸಂಪೂರ್ಣ ಸಾಕ್ಷರತಾ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ. ಸಾರ್ವಜನಿಕರಲ್ಲಿ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಆಚರಿಸಲಾಗುತ್ತದೆ. ಸ್ಥಳೀಯ ಸಮುದಾಯಗಳಲ್ಲಿ ಅನಕ್ಷರತೆ ಎಂಬ ಸಾಮಾಜಿಕ ಪಿಡುಗನ್ನು ತೊಡೆದು ಹಾಕಬೇಕು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಹೇಳಿದರು.
ಅವರು ಸೋಮವಾರ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಲೋಕ ಶಿಕ್ಷಣ ನಿರ್ದೇಶನಾಲಯ, ಜಿಲ್ಲಾ ಪಂಚಾಯತ್, ಜಿಲ್ಲಾ ಸಾಕ್ಷರತಾ ಸಮಿತಿ, ಜನ ಶಿಕ್ಷಣ ಟ್ರಸ್ಟ್, ನವಸಾಕ್ಷರರ ಗ್ರಾಮ ವಿಕಾಸ ಕೇಂದ್ರಗಳ ಸಹಭಾಗಿತ್ವದಲ್ಲಿ ದ.ಕ.ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ಮಂಗಳೂರು | ಮಹಿಳೆಯರಿಗೆ ಕೀಟಲೆ ಮಾಡುತ್ತಿದ್ದ ಅಪರಿಚಿತ ವ್ಯಕ್ತಿ ಖಾಕಿ ವಶಕ್ಕೆ
ಪ್ರತಿಯೊಬ್ಬ ವ್ಯಕ್ತಿಯು ಮುಖ್ಯವಾಹಿನಿಗೆ ಬರಲು ಅಕ್ಷರ ಜ್ಞಾನವೆಂಬುದು ಮುಖ್ಯ ಪಾತ್ರ ವಹಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಮಂದಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಗತ್ಯವಿದ್ದವರಿಗೆ ಓದಲು, ಬರೆಯಲು ಕಲಿಸಿ ಅವರನ್ನು ಸಾಕ್ಷರರನ್ನಾಗಿ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ನಿಟ್ಟಿನಲ್ಲಿ ಸಾಕ್ಷರತಾ ಸಂಸ್ಥೆಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಮಾತನಾಡಿ, ಅಕ್ಷರ ಜ್ಞಾನ ಹೊಂದಿದ್ದರೆ ಪ್ರತಿಯೊಬ್ಬ ಮನುಷ್ಯನು ಕೂಡ ಉತ್ತಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಬಹುದು. ಜಿಲ್ಲೆಯಲ್ಲಿ ಅನೇಕರು ಅಕ್ಷರ ಜ್ಞಾನದಿಂದ ವಂಚಿತರಾಗಿದ್ದಾರೆ. ಅವರ ಕಲಿಕೆಗೆ ಪ್ರೋತ್ಸಾಹಿಸಬೇಕು. ಅನಕ್ಷರಸ್ಥರು ಅಕ್ಷರಸ್ಥರಾದರೆ ದೇಶದ ಪ್ರಗತಿಗೆ ಕೊಡುಗೆ ನೀಡಿದಂತಾಗುತ್ತದೆ ಹಾಗೂ ಅರ್ಥಪೂರ್ಣ ಸಮಾಜ ನಿರ್ಮಾಣ ಮಾಡಬಹುದು ಎಂದು ಅವರು ಹೇಳಿದರು. ʼಮನೆ ಮನೆಗೆ ಪೋಲೀಸ್ʼ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸಾಕ್ಷರತಾ ಅಭಿಯಾನದ ಬಗ್ಗೆ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಪೊಲೀಸ್ ಇಲಾಖೆಯ ವತಿಯಿಂದ ಮಾಡುತ್ತೇವೆ ಎಂದು ಹೇಳಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಫಾತಿಮಾಬಿ ಟಿ.ಐ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ಕಾರ್ಯನಿರ್ವಹಣಾಧಿಕಾರಿ ಜಯಲಕ್ಷ್ಮಿ, ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್, ಮೂಡಬಿದ್ರೆ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಅಕ್ಷರ ದಾಸೋಹ ನಿರ್ದೇಶಕ ಜ್ಞಾನೇಶ್ ಮತ್ತಿತರರು ಉಪಸ್ಥಿತರಿದ್ದರು.