ಕರ್ತವ್ಯಲೋಪ ಹಾಗೂ ಹಣಕಾಸು ದುರಪಯೋಗ ಆರೋಪದ ಮೇಲೆ ಕಲಘಟಗಿ ತಾಲೂಕಿನ ತಂಬೂರು ಗ್ರಾಪಂ ಹಾಗೂ ಹೆಚ್ಚುವರಿ ಪ್ರಭಾರ ಮುಕ್ಕಲ ಗ್ರಾಪಂ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗರಾಜಕುಮಾರ ಎಸ್. ಬಿದರಳ್ಳಿ ಅವರನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅಮಾನತ್ತುಗೊಳಿಸಿ, ಆದೇಶ ಹೊರಡಿಸಿದ್ದಾರೆ.
ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗರಾಜಕುಮಾರ ಬಿದರಳ್ಳಿ ತಂಬೂರ ಹಾಗೂ ಮುಕ್ಕಲ ಗ್ರಾಮ ಪಂಚಾಯತಗಳಲ್ಲಿ ಎಸ್ಕೋ ಬ್ಯಾಂಕ್ ಖಾತೆಯಿಂದ ಖಾಸಗಿ ವ್ಯಕ್ತಿಗಳಿಗೆ ಹಣ ಸಂದಾಯ ಮಾಡಿರುವುದು ಕಂಡುಬಂದಿದೆ. ತಂಬೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 2024-25 ನೇ ಸಾಲಿನಲ್ಲಿ ರೂ. 5,10,000 ಮತ್ತು 2025-26 ನೇ ಸಾಲಿನಲ್ಲಿ ರೂ. 2,28,000 ಹಾಗೂ ಹೆಚ್ಚುವರಿ ಪ್ರಭಾರ ವಹಿಸಿಕೊಂಡಿರುವ ಮುಕ್ಕಲ ಗ್ರಾಮ ಪಂಚಾಯತಿಯಲ್ಲಿ 2024-25 ನೇ ಸಾಲಿನಲ್ಲಿ ರೂ. 4,20,000 ಮತ್ತು 2025-26 ನೇ ಸಾಲಿನಲ್ಲಿ ರೂ. 1,30,000 ಮೊತ್ತವನ್ನು ಎಸ್ಕೋ ಬ್ಯಾಂಕ್ ಖಾತೆಯಿಂದ ಖಾಸಗಿ ವ್ಯಕ್ತಿಗಳಿಗೆ ಹಣ ಸಂದಾಯ ಮಾಡಿ, ಸರ್ಕಾರ ನಿಯಮಗಳನ್ನು ಮತ್ತು ಇಲಾಖಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಕರ್ತವ್ಯ ಲೋಪ ಮಾಡಿ ಹಣಕಾಸಿನ ದುರಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗ್ರಾಮ ಪಂಚಾಯತಿಯ ಎಸ್ಕೋ ಖಾತೆಗಳಲ್ಲಿ ಉಳಿದಿರುವ ಅನುದಾನವನ್ನು ಕಡ್ಡಾಯವಾಗಿ ಹೆಸ್ಕಾಂ ಕಂಪನಿಗಳಿಗೆ ಪಾವತಿಸುವುದು ಹಾಗೂ ಶಾಸನಬದ್ಧ ಅನುದಾನದಡಿ ಗ್ರಾಮ ಪಂಚಾಯತಿಯ ಎಸ್ಕೋ ಖಾತೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಕಡ್ಡಾಯವಾಗಿ ಹಿಂದಿನ ವರ್ಷಗಳಿಗೆ ಬಾಕಿ ಇರುವ ವಿದ್ಯುಚ್ಛಕ್ತಿ ಬಿಲ್‍ನ್ನು ಪ್ರತಿ ಆರ್.ಆರ್. ಸಂಖ್ಯೆ ಅನುಸಾರ ಹೊಂದಾಣಿಕೆ ಮಾಡಿಕೊಳ್ಳದಿದ್ದರೂ ಸಹ ಮುಂಗಡವಾಗಿ ಹೆಸ್ಕಾಂ ಕಂಪನಿಗಳಿಗೆ ಪಾವತಿಸಲು ಸೂಚಿಸಲಾಗಿದ್ದರೂ ಸಹ ಸರ್ಕಾರದ ನಿಯಮಗಳನ್ನು ಪಾಲಿಸಿದೆ ಇಲಾಖಾ ಮಾರ್ಗಸೂಚಿ ಉಲ್ಲಂಘಿಸಿ, ಕರ್ತವ್ಯ ಲೋಪ ಮಾಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ ನಾಗರೀಕ ಸೇವಾ ನಿಯಮಗಳು (ವರ್ಗಿಕರಣ ನಿಯಂತ್ರಣ ಮತ್ತು ಅಪೀಲು) 1957 ರ ನಿಯಮ 10 (1) ಡ ಪ್ರಕಾರ ಗ್ರಾಮಪಂಚಾಯತ ಪಿಡಿಓ ನಾಗರಾಜಕುಮಾರ ಎಸ್. ಬಿದರಳ್ಳಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ಅಮಾನತ್ತುಗೋಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.