ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿಷೇಧಿಸಿದ್ದ ನೇಪಾಳ ಸರ್ಕಾರ ಕೊನೆಗೆ ಯುವ ಸಮೂಹದ ಭಾರಿ ಪ್ರತಿಭಟನೆ ಬಳಿಕ ಸೋಮವಾರ ರಾತ್ರಿ ತನ್ನ ನಿರ್ಧಾರವನ್ನು ವಾಪಸ್ ಪಡೆದಿದೆ.
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಸಾಮಾಜಿಕ ಜಾಲತಾಣಗಳ ನಿಷೇಧ ಹಾಗೂ ಭ್ರಷ್ಟಾಚಾರದ ವಿರುದ್ಧ ಜನ್‌ಝೆಡ್ ಪೀಳಿಗೆಯ ಪ್ರತಿಭಟನಾಕಾರರು ನಡೆಸಿದ ಗಲಭೆಯಲ್ಲಿ ಕನಿಷ್ಠ 19 ಮಂದಿ ಮೃತಪಟ್ಟು, 100ಕ್ಕೂ ಅಧಿಕ ಜನ ಗಾಯಗೊಂಡಿದ್ದರು.
ಸರ್ಕಾರವು ಫೇಸ್‌ಬುಕ್, ಯೂಟ್ಯೂಬ್, ಎಕ್ಸ್ ಸೇರಿದಂತೆ 26 ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ನಂತರ ಈ ಗಲಭೆ ಭುಗಿಲೆದ್ದಿತ್ತು. ಪ್ರತಿಭಟನಾಕಾರರು ಕರ್ಫ್ಯೂ ಉಲ್ಲಂಘಿಸಿ ಸಂಸತ್ ಭವನದ ಸುತ್ತಮುತ್ತಲಿನ ನಿಷೇಧಿತ ವಲಯಕ್ಕೆ ನುಗ್ಗಿ ಪ್ರತಿಭಟಿಸಿದ್ದರು.
ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಜಲ ಫಿರಂಗಿ, ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಬಳಸಿದರು. ಕೆಲವು ಪ್ರತಿಭಟನಾಕಾರರು ಸಂಸತ್ ಆವರಣಕ್ಕೆ ನುಗ್ಗಿದ್ದು, ಪರಿಸ್ಥಿತಿಯನ್ನು ತೀವ್ರಗೊಳಿಸಿತ್ತು. ಕಠ್ಮಂಡು ಜಿಲ್ಲಾಡಳಿತವು ಬಾನೇಶ್ವರ್‌ನಿಂದ ಹಿಡಿದು ರಾಷ್ಟ್ರಪತಿ ಭವನ, ಉಪರಾಷ್ಟ್ರಪತಿ ನಿವಾಸ, ಪ್ರಧಾನಮಂತ್ರಿ ನಿವಾಸ ಮತ್ತು ಸಿಂಗದುರ್ಬಾರ್‌ನಂತಹ ಉನ್ನತ ಭದ್ರತಾ ವಲಯಗಳಲ್ಲಿ ಕರ್ಫ್ಯೂ ವಿಸ್ತರಿಸಲಾಗಿತ್ತು.
ಸಾಮಾಜಿಕ ಜಾಲತಾಣ ವೇದಿಕೆಗಳನ್ನು ನಿಷೇಧಿಸುವ ತನ್ನ ನಿರ್ಧಾರವನ್ನು ಹಿಂತೆಗೆದುಕೊಂಡಿರುವುದಾಗಿ ನೇಪಾಳ ಸರ್ಕಾರ ಸೋಮವಾರ ತಡರಾತ್ರಿ ಘೋಷಿಸಿದೆ. ನಿಷೇಧ ತೆರವುಗೊಳಿಸುವಂತೆ ಆಗ್ರಹಿಸಿ ಭಾರಿ ಪ್ರತಿಭಟನೆ ನಡೆದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದೆ.