ಇಂದಿರಾ ಕ್ಯಾಂಟೀನ್ ಬಡವರ ಹಸಿವನ್ನು ತಣಿಸಲು ರಾಜ್ಯದಲ್ಲಿ ಆರಂಭವಾದ ಮಹತ್ವದ ಯೋಜನೆ. ಕೂಲಿ ಕಾರ್ಮಿಕರು, ರೈತರು, ನಿರ್ಗತಿಕರಿಗೆ ಕಡಿಮೆ ದರದಲ್ಲಿ ಉಪಹಾರ ಮತ್ತು ಊಟ ಒದಗಿಸುವ ಮೂಲಕ ಈ ಯೋಜನೆ ರಾಜ್ಯಾದ್ಯಂತ ಜನಪ್ರಿಯತೆ ಗಳಿಸಿದೆ. ಬಹುತೇಕ ಕೂಲಿ ಕಾರ್ಮಿಕರು ನೆಮ್ಮದಿಯಾಗಿ ಎರಡು ಹೊತ್ತಿನ ಊಟ ಮಾಡುತ್ತಿರುವುದು ಇದೇ ಇಂದಿರಾ ಕ್ಯಾಂಟೀನ್‌ನಲ್ಲಿ. ಆದರೆ, ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಸ್ಥಾಪಿಸಲಾದ ಇಂದಿರಾ ಕ್ಯಾಂಟೀನ್‌ವೊಂದು ಈ ಯೋಜನೆಯ ಉದ್ದೇಶವನ್ನೇ ತಲೆಕೆಳಗು ಮಾಡುವಂತೆ ಕಾಣುತ್ತಿದೆ.
ಇಲ್ಲಿ ದಿನಕ್ಕೆ ಕೇವಲ 300 ಪ್ಲೇಟ್ ಉಪಹಾರ ಮತ್ತು ಊಟ ಮಾತ್ರ ಸಿದ್ಧಪಡಿಸಲಾಗುತ್ತಿದೆ. ಬೆಳಗ್ಗೆ 10 ಗಂಟೆಯಷ್ಟರಲ್ಲಿ ಉಪಹಾರ ಖಾಲಿಯಾಗುವುದು ಸಾಮಾನ್ಯವಾಗಿದೆ. ಹತ್ತಿರದಲ್ಲೇ ಇರುವ ಎಪಿಎಂಸಿ ಮಾರುಕಟ್ಟೆಗೆ ಬರುವ ರೈತರು, ಹಮಾಲರು ಹಾಗೂ ಸ್ಥಳೀಯ ಕೂಲಿ ಕಾರ್ಮಿಕರು ನಿರಾಶೆಯಿಂದ ಹಸಿದ ಹೊಟ್ಟೆಯೊಂದಿಗೆ ಮರಳಬೇಕಾಗುತ್ತದೆ. ಈ ಸ್ಥಿತಿ ಸರ್ಕಾರ ರೂಪಿಸಿರುವ ಯೋಜನೆಯ ಉದ್ದೇಶಕ್ಕೆ ವಿರುದ್ಧವಾಗಿದೆ.
ಅಸಲಿಗೆ, ಬಡವರ ಹಿತವನ್ನು ಕಾಳಜಿಯಾಗಿ ನೋಡಬೇಕಾದ ಈ ಯೋಜನೆ ರಾಮದುರ್ಗದಲ್ಲಿ ಅರ್ಧಕಾಲಿಕ ಸೇವೆಯಂತಾಗಿದೆ. 300 ಪ್ಲೇಟ್ ಊಟದ ಮಿತಿ ನಿಯಮವು ಬೇಡಿಕೆಗೆ ತಕ್ಕಷ್ಟು ಸಾಲುತ್ತಿಲ್ಲ. ನಿರ್ವಹಣೆ ಸಂಪೂರ್ಣವಾಗಿ ಟೆಂಡರ್‌ದಾರರ ಕೈಯಲ್ಲಿದ್ದು, ಅಡುಗೆ ಸಿಬ್ಬಂದಿ ತಾವು ಮಾಡುತ್ತಿರುವುದಕ್ಕಿಂತ ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ ಎಂಬ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.


ಸ್ಥಳೀಯ ಶಾಸಕ ಅಶೋಕ ಪಟ್ಟಣ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದರೂ, ನಂತರದ ನಿರ್ವಹಣೆಯ ಬಗ್ಗೆ ಗಮನ ಹರಿಸಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಸಿದ ಕೂಲಿ ಕಾರ್ಮಿಕರ ಕಷ್ಟವನ್ನು ಅರಿಯದಿರುವುದು ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ತೋರುತ್ತದೆ.
ಈ ಕುರಿತು ಕೂಲಿ ಕೆಲಸ ಮಾಡುವ ಈಶ್ವರ ಮಾತನಾಡಿ, “ನಾನು ಇಲ್ಲಿ 9.30ಕ್ಕೆ ಉಪಹಾರಕ್ಕೆಂದು ಬಂದರೆ ಉಪಹಾರ ಸಿಗುವುದಿಲ್ಲ. ಅಷ್ಟು ಬೇಗನೆ ಖಾಲಿಯಾಗಿರುತ್ತದೆ. ಈ ಕುರಿತು ಇಲ್ಲಿಯ ಅಡುಗೆ ಸಿಬ್ಬಂದಿಗಳನ್ನು ಯಾರು ಕೂಡ ಪ್ರಶ್ನೆ ಮಾಡುವ ಹಾಗಿಲ್ಲ. ಅಂತಹ ಪರಿಸ್ಥಿತಿ ಇಲ್ಲಿದೆ. ಸರ್ಕಾರ ಜಾರಿಗೆ ತಂದಿರುವ ಯೋಜನೆ ಇಲ್ಲಿ ಸರಿಯಾಗಿ ಅನುಷ್ಠಾನಗೂಂಡಿಲ್ಲ” ಎಂದು ಬೇಸರ ವ್ಯಕ್ತ ಪಡಿಸಿದರು.
“ನಾನು ಇಲ್ಲಿ ದಿನ ನಿತ್ಯ ಬರುತ್ತೇನೆ. 5 -10 ರೂಪಾಯಿಗಳಿಗೆ ಮುಂಜಾನೆಯ ಉಪಹಾರ ಮತ್ತು ಊಟ ಸಿಗುತ್ತದೆ. ಆದರೆ ಅದು ಸರಿಯಾದ ಪ್ರಮಾಣದಲ್ಲಿ ಸಿಗುವುದಿಲ್ಲ. ಕೆಲವು ಸಾರಿ ಬೇಗನೆ ಊಟ ಉಪಹಾರ ಖಾಲಿಯಾಗಿರುತ್ತದೆ. ಈ ಸಂದರ್ಭದಲ್ಲಿ ಹಸಿದ ಹೊಟ್ಟೆಯಿಂದ ಮರಳಿ ಹೋಗಬೇಕಾಗುತ್ತದೆ. ಶಾಸಕ ಅಶೋಕ ಪಟ್ಟಣ ಇಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿ ಹೋಗಿದ್ದಾರೆ. ಆದರೆ ಇಲ್ಲಿ ಇಂದಿರಾ ಕ್ಯಾಂಟೀನ್ ಯಾವ ರೀತಿಯಲ್ಲಿ ನಡೆಸುತ್ತಿದ್ದಾರೆ ಎಂದು ತಿರುಗಿಯೂ ನೋಡಿಲ್ಲ. ಅವರು ದೊಡ್ಡ ಜನ ಅವರಿಗೆ ಹಸಿದವರ ಕಷ್ಟ ಹೇಗೆ ಅರ್ಥ ಆಗುತ್ತದೆ” ಎಂದು ದುಂಡಪ್ಪ ಆಕ್ರೋಶ ವ್ಯಕ್ತಪಡಿಸಿದರು.
ರೈತ ಲಕ್ಷ್ಮಣ ಮಾತನಾಡಿ, “ಇಲ್ಲಿ 300 ಪ್ಲೇಟ್ ಮಾತ್ರ ಊಟ-ಉಪಹಾರವನ್ನು ಸೀಮಿತಗೊಳಿಸಿದ್ದಾರೆ. ಇದರಿಂದ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಯೂ ಮಾಡದಂತಾಗಿದೆ. ಆದಷ್ಟು ಬೇಗನೆ ಶಾಸಕರು ಈ ಕುರಿತು ಗಮನಹರಿಸಬೇಕು. 500 ಪ್ಲೇಟ್ ವರಗೆ ಆದರೂ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಬೇಕು” ಎಂದು ಮನವಿ ಮಾಡಿದರು.

ಇಂದಿರಾ ಕ್ಯಾಂಟೀನಲ್ಲಿ ಕೆಲಸ ಮಾಡುವ ಸಿಬ್ಬಂದಿ ರಾಜೇಶ್ವರಿ ಈದಿನ. ಕಾಮ್ ಜತೆ ಮಾತನಾಡಿ, “ನಾವು 300 ಜನರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡುತ್ತೇವೆ. ಕೆಲವು ಸಾರಿ 300ಕ್ಕಿಂತ ಹೆಚ್ಚು ಜನರು ಊಟ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಊಟ ಬೇಗ ಖಾಲಿಯಾಗುತ್ತದೆ. ಈ ಕುರಿತು ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಟೆಂಡರ್ ಪಡೆದವರನ್ನು ಕೇಳಬೇಕು. ಹೇಳಿದಕ್ಕಿಂತ ಹೆಚ್ಚಿಗೆ ಅಡುಗೆ ಮಾಡುವುದು ನಮ್ಮ ಕೈಲಿಲ್ಲ” ಎಂದರು.
ಈ ಸಮಸ್ಯೆಗೆ ಪರಿಹಾರವಾಗಿ ಕನಿಷ್ಠ 500 ಪ್ಲೇಟ್‌ಗಳವರೆಗೆ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಬೇಕಾಗಿದೆ. ಜೊತೆಗೆ ನಿರ್ವಹಣೆಯ ಮೇಲೆ ಸರಿಯಾದ ಮಾನಿಟರಿಂಗ್ ಇರಬೇಕಾಗಿದೆ. ಜನಸಂಖ್ಯೆ ಮತ್ತು ಬೇಡಿಕೆಗೆ ಅನುಗುಣವಾಗಿ ಪ್ಲೇಟ್‌ಗಳ ಸಂಖ್ಯೆಯನ್ನು ಸ್ಥಳೀಯ ಮಟ್ಟದಲ್ಲಿ ಪರಿಷ್ಕರಿಸುವ ಕ್ರಮ ಜಾರಿಯಾಗಬೇಕು. ಇಂದಿರಾ ಕ್ಯಾಂಟೀನ್ ಯೋಜನೆ ಅರ್ಧಕಾಲಿಕ ಸೇವೆಯಾಗಿ ಮಾಡುವುದರಿಂದ ಸರ್ಕಾರದ ಯೋಜನೆಗೆ ಮಾಡುವ ಅವಮಾನವಾಗುತ್ತದೆ. ರಾಮದುರ್ಗದ ಇಂದಿರಾ ಕ್ಯಾಂಟಿನ್ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಯೋಜನೆಯ ಗೌರವವನ್ನು ಉಳಿಸುವುದು ಈ ಕ್ಷೇತ್ರದ ಶಾಸಕರ ಕರ್ತವ್ಯವಾಗಿದೆ.
ಇಂದಿರಾ ಕ್ಯಾಂಟೀನ್ ಯೋಜನೆ ರಾಜ್ಯದ ಬಡವರ, ಕೂಲಿ ಕಾರ್ಮಿಕರ, ರೈತರ ಹೊಟ್ಟೆ ತುಂಬಲು ಜಾರಿಗೆ ಬಂದ ಕ್ರಾಂತಿಕಾರಿ ಯೋಜನೆ. ಆದರೆ ರಾಮದುರ್ಗದಲ್ಲಿ ಕೇವಲ 300 ಪ್ಲೇಟ್ ಮಿತಿಯ ಕಾರಣದಿಂದ ಹಸಿದವರ ನಿರೀಕ್ಷೆ ನೆರವೇರದೆ ಹೋಗುತ್ತಿದೆ. ಹಸಿದ ಹೊಟ್ಟೆಯಿಂದ ಮರಳುವ ಪರಿಸ್ಥಿತಿ ಯೋಜನೆಯ ಗೌರವಕ್ಕೆ ಧಕ್ಕೆಯಾಗಿದೆ.
ಇದನ್ನೂ ಓದಿ: ಬೆಳಗಾವಿ | ಗ್ರಾಮ ಪಂಚಾಯತಿ ಅಧ್ಯಕ್ಷನ ವಿರುದ್ಧ 15 ವರ್ಷದ ಅಪ್ರಾಪ್ತೆಯನ್ನು ಬಾಲ್ಯವಿವಾಹವಾದ ಆರೋಪ
ಆದ್ದರಿಂದ ಈ ಸಮಸ್ಯೆಯನ್ನು ಸರ್ಕಾರ ಹಾಗೂ ಸ್ಥಳೀಯ ಶಾಸಕರು ತಕ್ಷಣ ಗಂಭೀರವಾಗಿ ಪರಿಗಣಿಸಿ ಕನಿಷ್ಠ 500 ಪ್ಲೇಟ್ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡುವುದು ಕಾಲದ ಅವಶ್ಯಕತೆ. ಜೊತೆಗೆ ನಿರ್ವಹಣೆಯ ಮೇಲೆ ಪರಿಣಾಮಕಾರಿ ಮಾನಿಟರಿಂಗ್ ಜಾರಿಗೊಂಡಾಗ ಮಾತ್ರ ಬಡವರ ಹಿತಕ್ಕಾಗಿ ಹುಟ್ಟಿದ ಈ ಯೋಜನೆ ನಿಜವಾದ ಅರ್ಥದಲ್ಲಿ ಯಶಸ್ವಿಯಾಗಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು