ಭಾರೀ ಪ್ರತಿಭಟನೆ, ಹಿಂಸಾಚಾರ ಹಾಗೂ 19 ಜನರ ಸಾವು ಸಂಭವಿಸಿದ ನಂತರ ನೇಪಾಳ ಸರ್ಕಾರ ಸಾಮಾಜಿಕ ಜಾಲತಾಣದ ಮೇಲಿನ ನಿಷೇಧವನ್ನು ಹಿಂಪಡೆದ ನಂತರವೂ ಮಂಗಳವಾರ ಹಿಂಸಾಚಾರ ಮುಂದುವರಿದಿದೆ.
ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡುವಂತೆ ಹಾಗೂ ಭ್ರಷ್ಟಾಚಾರ ನಿಯಂತ್ರಿಸುವಂತೆ ಆಗ್ರಹಿಸಿ ಕಂಡು ಸೇರಿದಂತೆ ನೇಪಾಳದ ವಿವಿಧೆಡೆ ಯುವಕರು ಮಂಗಳವಾರವೂ ಪ್ರತಿಭಟಿಸಿದ್ದಾರೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ದೇಶದ ಹಲವೆಡೆ ಕರ್ಪೂ ಜಾರಿಗೊಳಿಸಲಾಗಿದೆ.
ಉದ್ರಿಕ್ತ ಪ್ರತಿಭಟನಾಕಾರರು ನೇಪಾಳ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಿಪಿಎನ್-ಎಂಸಿ ಅಧ್ಯಕ್ಷೆ ಪುಷ್ಪಾ ಕಮಲ್ ದಹಾಲ್, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪೃಥ್ವಿ ಸುಬ್ಬಾ ಗುರುಂಗ್, ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಸೇರಿದಂತೆ ಇತರರ ಮನೆಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಕಮ್ಯೂನಿಸ್ಟ್ (ಮಾರ್ಕಿಸ್ಟ್ & ಲೆನಿನಿಸ್ಟ್) ಮತ್ತು ಕಾಂಗ್ರೆಸ್ ಮೈತ್ರಿಕೂಟ ಆಡಳಿತದ ಪ್ರಧಾನಿ ಕೆ.ಪಿ. ಒಲಿ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಲ್ಲುತೂರಾಟ ನಡೆಸಿದ್ದು, ಮುಂಜಾಗ್ರತಾ ಕ್ರಮವಾಗಿ ರಾಜಧಾನಿ ಕಠ್ಮಂಡು ಸೇರಿದಂತೆ ಹಲವೆಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ವರದಿಯಾಗಿದೆ.