ರಾಜ್ಯ ಸರ್ಕಾರವು ಒಳಮೀಸಲಾತಿ ವರ್ಗೀಕರಣವನ್ನು ವೈಜ್ಞಾನಿಕತೆಯ ಆಧಾರದ ಮೇಲೆ ಮಾಡಿರುವುದಿಲ್ಲ. ಇದು ಅವೈಜ್ಞಾಕ ಕಾನೂನು ಕ್ರಮವಾಗಿದೆ. ಇದರಿಂದ ಬಂಜಾರ, ಕೊರಮ, ಕೊರಚ ಹಾಗೂ ಬೋವಿ ಸಮುದಾಯಗಳಿಗೆ ಘೋರ ಅನ್ಯಾಯವಾಗಿದೆ ಎಂದು ಆರೋಪಿಸಿ ಬಂಜಾರ ಸಮುದಾಯ ಕೊಪ್ಪಳ ಜಿಲ್ಲೆ ಕುಕುನೂರುನಲ್ಲಿ ಪ್ರತಿಭಟಿಸಿದರು.
ಕುಕನೂರು ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಿಂದ ಶಿರೂರು ವೀರಭದ್ರಪ್ಪ ವೃತ್ತದವರೆಗೆ ಪ್ರತಿಭಟನೆ ನಡೆಸಿದ ಬಳಿಕ ಕುಕನೂರ ತಹಶೀಲ್ದಾರ್ ಹೆಚ್ ಪ್ರಾಣೇಶ್ ಅವರಿಗೆ ಮನವಿ ಸಲ್ಲಿಸಿದರು.
ಸಾಂಪ್ರದಾಯಿಕ ವೇಷ-ಭುಷಣ ತೊಟ್ಟು, ಕುಲ ಕಸುಬು ಕಟ್ಟಿಗೆ ಮಾರುವುದರೊಂದಿಗೆ ಹಾಗೂ ಯುವಕರು ತಲೆ ಬೋಳಿಸಿಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಗೋರ್ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಮಾತನಾಡಿ, “ಕೊಲಂಬೋ (ಕೊರಮ, ಕೊರಚ, ಲಂಬಾಣಿ, ಭೋವಿ) ಸಮುದಾಯಗಳ ಜನಸಂಖ್ಯೆಯು ಹೆಚ್ಚಾಗಿದ್ದು, ಈ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಹಾಗೂ ಔದ್ಯೋಗಿಕ ಸೌಲಭ್ಯಗಳಿಂದ ವಂಚಿತವಾಗಿದೆ. ಹೀಗಾಗಿ ನ್ಯಾ. ನಾಗಮೋಹನದಾಸ್ ಆಯೋಗವು ಪರಿಶಿಷ್ಠ ಜಾತಿಗಳ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಲಂಬಾಣಿ ಸಮುದಾಯದ ಜನರು ಗೋವಾ, ಕೇರಳ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಗೆ ಹೊಟ್ಟೆಪಾಡಿಗಾಗಿ ವಲಸೆ ಹೋಗಿದ್ದರು. ಹೀಗಾಗಿ ಅವರು ಈ ಸಮೀಕ್ಷೆಯಿಂದ ಹೊರ ಉಳಿದಿದ್ದಾರೆ” ಎಂದರು.
ಈ ಸಮೀಕ್ಷೆ ಮಾಡುವ ಸಂಧರ್ಭದಲ್ಲಿ ಉಪಜಾತಿ ಕಾಲಂನಲ್ಲಿ ಬಂಜಾರ, ಕೊರಮ, ಕೊರಚ, ಬೋವಿ ಸಮುದಾಯಗಳ ಜಾತಿಯನ್ನು ಸರಿಯಾಗಿ ನಮೂದಿಸಿರುವುದಿಲ್ಲ. ಕೊಲಂಬೋ ಸಮುದಾಯಗಳು ವಾಸಿಸುವ ಕೆಲವೊಂದು ಭಾಗಗಳಲ್ಲಿ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಎಂದು ತಪ್ಪಾಗಿ ನಮೂದಿಸಲಾಗಿದೆ. ಹೀಗೆ ವಿವಿಧ ರೀತಿಯ ಧೋರಣೆಗಳಿಂದ ಈ ಸಮೀಕ್ಷೆಯಲ್ಲಿ ನಮಗೆ ಅನ್ಯಾಯವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.


“ಈ ಹಿಂದಿನ ಸರ್ಕಾರವು (ಕೊಲಂಬೋ) ಶೇ. 4.5 ರಷ್ಟು ಒಳ ಮೀಸಲಾತಿಯನ್ನು ನೀಡುವುದಾಗಿ ತೀರ್ಮಾನಿಸಿತ್ತು. ಆದರೆ, ಅದನ್ನು ತಿರಸ್ಕರಿಸಿದೆವು. ಈಗ ನಾಗಮೋಹನ್ ದಾಸ್ ವರದಿಯು ಈ ಸಮುದಾಯಗಳಿಗೆ ಶೇ. 4 ರಷ್ಟು ಒಳಮೀಸಲಾತಿ ನೀಡಬೇಕೆಂದು ಹೇಳಿದೆ ಇದು ಯಾವ ನ್ಯಾಯ?” ಎಂದು ಪ್ರಶ್ನಿಸಿದರು.
“ಸರ್ಕಾರದ ಸಚಿವ ಸಂಪುಟದ ತೀರ್ಮಾನ, ಕರಡು ಅಧಿಸೂಚನೆ ಹಾಗೂ ನಾಗಮೋಹನದಾಸ ವರದಿ ಕೊಲಂಬೋ ಸಮುದಾಯಗಳಿಗೆ ಮಾರಕವಾಗಿವೆ .ಇಬ್ಬಗೆಯ ನೀತಿಯ ಮೂಲಕ ಒಳಮೀಸಲಾತಿ ಸೌಲಭ್ಯ ವರ್ಗೀಕರಣ ಮಾಡುವಲ್ಲಿ ತಾರತಮ್ಯ ಮಾಡಿರುತ್ತದೆ ಹಾಗಾಗಿ ಈ ನೀತಿಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ.
ಇದನ್ನೂ ಓದಿ: ಕೊಪ್ಪಳ | ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬ; AIDSO ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
“ಒಳಮೀಸಲಾತಿಯ ವೈಜ್ಞಾನಿಕ ವರ್ಗೀಕರಣ ಮಾಡುವುದಾದರೆ ಎಲ್ಲರಿಗೂ ಸಮಪಾಲು ನೀಡುವ ಮೂಲಕ ಕೊಲಂಬೋ ಸಮುದಾಯಗಳಿಗೆ ಶೇ. 5ರಷ್ಟು ಮೀಸಲಾತಿಯ ಪ್ರಮಾಣವನ್ನು ನೀಡಬೇಕು. ಬುಡಗ ಜಂಗಮ ಸೇರಿದಂತೆ ಅಲೆಮಾರಿ ಸಮುದಾಯಗಳ 59 ಜಾತಿಯ ಸಹೋದರ ಸಮುದಾಯಗಳನ್ನು ʼಸಿʼ ಗುಂಪಿನಿಂದ ತೆಗೆದು ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ನಮ್ಮ ಸಮುದಾಯದಕ್ಕೆ ಸಾಂವಿಧಾನಿಕವಾಗಿ ಮೀಸಲಾತಿಯ ನ್ಯಾಯ ನೀಡಬೇಕು. ಹೋರಾಟವನ್ನು ಕಡೆಗೆಣಸಿದರೇ, ಮುಂದಿನ ದಿನದಲ್ಲಿ ಉಗ್ರ ಹೋರಾಟಕ್ಕೂ ಸಿದ್ದ” ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಮೇಘರಾಜ್ ಬಳಗೇರಿ, ಬಸವರಾಜ ನಾಯ್ಕ್, ಜೀತು ನಾಯ್ಕ್, ಹಂಪಣ್ಣ ಕಟ್ಟಿಮನಿ, ಯಮನೂರಪ್ಪ ಕಟ್ಟಮನಿ, ಯಲ್ಲಪ್ಪ ಕಾರಭಾರಿ, ಯಮನೂರಪ್ಪ ಭಾನಾಪೂರ್, ಪರಸಪ್ಪ ಕಾರಭಾರಿ, ತುಕಾರಂ ಹೊನ್ನುಂಚಿ, ಸೋಮಪ್ಪ ಚಿಕೇನಕೊಪ್ಪ, ಕಳಕೇಶ್ ನಾಯ್ಕ್, ದೇವವ್ವ ಕಟ್ಟಿಮನಿ, ಶಿವವ್ವ ಭಾನಾಪುರ, ಲಕ್ಷ್ಮವ್ವ ಬಳಗೇರಿ, ಸೋನವ್ವ ಚಿಕೆನಕೊಪ್ಪ, ಶ್ರೀಕಾಂತ್ ಕಟ್ಟಿಮನಿ, ರಾಘವೇಂದ್ರ ಬಳಗೇರಿ, ಪ್ರಕಾಶ್ ಬಳಗೇರಿ , ಹೋಬಣ್ಣ ಚವ್ಹಾಣ, ಬಸುವರೆಡ್ದೆಪ್ಪ ಬಳಗೇರಿ, ಹನುಮಂತಪ್ಪ ಚವ್ಹಾಣ, ಕಲ್ಲಪ್ಪ ಕಟ್ಟಿಮನಿ, ತಿರುಪತಿ ಕಟ್ಟಿಮನಿ, ಕುಮಾರ್ ಬಳಗೇರಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.