ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಚಾಲುಕ್ಯ ಉತ್ಸವವನ್ನು ಇದೇ ನವೆಂಬರ್ ಮಾಹೆಯಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ತಿಳಿಸಿದರು.
ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಚಾಲುಕ್ಯ ಉತ್ಸವ ಕಾರ್ಯಕ್ರಮ ಆಯೋಜನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಜಿಲ್ಲೆಯ ಐತಿಹಾಸಿಕ ನಗರಗಳಾದ ಬಾದಾಮಿ, ಪಟ್ಟದಕಲ್ಲ ಹಾಗೂ ಐಹೊಳೆಯಲ್ಲಿ ತಲಾ ಒಂದು ದಿನ ಸೇರಿ ಒಟ್ಟು ಮೂರು ದಿನಗಳ ಕಾಲ ಉತ್ಸವ ನಡೆಯಲಿದ್ದು, ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿಗಳು ಗೊತ್ತುಪಡಿಸಿದ ದಿನಾಂಕಗಳಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.
ರೂಪುರೇಷೆಗಳನ್ನು ಹಾಕಿಕೊಳ್ಳಲು ತಿಳಿಸಿದ ಅವರು, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲು ಸೂಚಿಸಿದರು. “ಉತ್ಸವದಲ್ಲಿ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಸ್ಥಳೀಯ ಕಲಾವಿದರಿಗೆ ಶೇ.50 ಹಾಗೂ ಬೇರೆ ರಾಜ್ಯ, ರಾಷ್ಟ್ರದ ಕಲಾವಿದ-ರಿಗೆ ತಲಾ ಶೇ.50 ರಷ್ಟು ಅವಕಾಶ ಕಲ್ಪಿಸುವ ರೀತಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕು” ಎಂದರು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಮೋದಿಯವರ ತಾಯಿ ಮಾತ್ರ ಹೆಣ್ಣೇ! ಸೋನಿಯಾರನ್ನು ಅವಮಾನಿಸುವುದು ಸರಿಯೇ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತವಿರುವ ಚಾಲುಕ್ಯರ ಐತಿಹಾಸಿಕ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮೆಲಕು ಹಾಕುವ ಈ ಮೂರು ದಿನಗಳ ಸಂಗೀತ ನೃತ್ಯೋತ್ಸವದಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು, ಸಂಗೀತಗಾರರು, ನೃತ್ಯ ತಂಡಗಳನ್ನು ಆಹ್ವಾನಿಸುವುದಲ್ಲದೇ ಚಾಲುಕ್ಯರ ನಾಡಿನ ಐತಿಹಾಸಿಕ ಪರಂಪರೆ ಕುರಿತ ವಿಚಾರಗೋಷ್ಠಿ, ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲು ಸೂಚಿಸಿದರು. ಅಲ್ಲದೇ ಮೂರು ಕಡೆಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸಲು ಅಧಿಕಾರಿಗಳಿಗೆ ತಿಳಿಸಿದರು.