ಮಾಜಿ ಸಚಿವ, ಔರಾದ್ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬರು ವಾಟ್ಸ್‌ಆ್ಯಪ್ ಸಂಖ್ಯೆಗೆ ಸಂದೇಶ ಕಳುಹಿಸಿ ₹30 ಸಾವಿರ ಹಣದ ಬೇಡಿಕೆ ಇಟ್ಟು, ಹಣ ಹಾಕದಿದ್ದರೆ ವಿಡಿಯೊ ಶೇರ್ ಮಾಡುವೆ ಎಂದು ಬೆದರಿಕೆ ಹಾಕಿದ ಘಟನೆ ನಡೆದಿದೆ.
ಈ ಕುರಿತು ಶಾಸಕ ಪ್ರಭು ಚವ್ಹಾಣ ಅವರ ಸಂಬಂಧಿ ಮುರುಳಿಧರ ಪವಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಔರಾದ್ ತಾಲ್ಲೂಕಿನ ಹೊಕ್ರಣಾ ಪೊಲೀಸ್ ಠಾಣೆಯಲ್ಲಿ ಸೆ.8 ರಂದು ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಶಾಸಕ ಪ್ರಭು ಚವ್ಹಾಣ ಅವರ ವಾಟ್ಸ್‌ಆ್ಯಪ್ ಸಂಖ್ಯೆಗೆ ಅಪರಿಚಿತ ವ್ಯಕ್ತಿ ʼನನಗೆ ₹30 ಸಾವಿರ ಹಣ ಹಾಕಿ ಸಾಹೇಬ್ರೆ, ನನ್ನ ಮೇಲೆ ಭರವಸೆ ಇಟ್ಟು ಸಹಾಯ ಮಾಡಿ, ಹಣ ಹಾಕದಿದ್ದರೆ ಯೂಟ್ಯೂಬ್‌ನಲ್ಲಿ ವಿಡಿಯೊ ಶೇರ್ ಮಾಡುವೆʼ ಎಂದು ಸಂದೇಶ ಕಳುಹಿಸಿದ್ದರು. ಶಾಸಕರು ಅದನ್ನು ನೋಡಿ ಸುಮ್ಮನಾಗಿದ್ದರು.
ʼಸೆ.7ರಂದು ಸಂಜೆ ಎರಡು ಬಾರಿ ಬೇರೆ ಬೇರೆ ವಾಟ್ಸ್‌ಆ್ಯಪ್ ಸಂಖ್ಯೆಯಿಂದ ಶಾಸಕ ಪ್ರಭು ಚವ್ಹಾಣ ಹಾಗೂ ಪ್ರಿಯಾಂಕಾ ಗಾಂಧಿ ಅವರ ಭಾವಚಿತ್ರ, ಮತ್ತು ಶಾಸಕರ ಭಾವಚಿತ್ರಕ್ಕೆ ಟೆಕ್ನಿಕಲ್ ಬಳಸಿ ಹುಡುಗಿಯೊಂದಿಗೆ ಇರುವ ಪಾಡ್‌ಕಾಸ್ಟ್ ಫೈಲ್ ವಿಡಿಯೊ ಶಾಸಕ ಪ್ರಭು ಚವ್ಹಾಣ ಅವರ ವಾಟ್ಸ್‌ಆ್ಯಪ್ ಸಂಖ್ಯೆಗೆ ಕಳುಹಿಸಿದ್ದರುʼ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಾಸಕ ಪ್ರಭು ಚವ್ಹಾಣ ಅವರ ಹೆಸರು ಕೆಡಿಸುವ ಉದ್ದೇಶದಿಂದ ಅಪರಿಚಿತ ವ್ಯಕ್ತಿ ಬೇರೆ ಬೇರೆ ಮೂರು ವಾಟ್ಸ್‌ಆ್ಯಪ್ ಸಂಖ್ಯೆಗಳಿಂದ ವಿಡಿಯೊ ಹಾಗೂ ಸಂದೇಶ ಕಳುಹಿಸಿ ₹30 ಸಾವಿರ ಹಣದ ಬೇಡಿಕೆ ಇಟ್ಟು, ಕೊಡದಿದ್ದರೆ ವಿಡಿಯೊ ಶೇರ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಕೊಪ್ಪಳ | ಪ್ರೌಢ ಶಾಲೆ ವಿದ್ಯಾರ್ಥಿನಿ ಗರ್ಭಿಣಿ : ಪೋಕ್ಸೊ ದಾಖಲು, ಯುವಕನ ಬಂಧನ
ಈ ಸಂಬಂಧ ಅಪರಿಚಿತ ವ್ಯಕ್ತಿ ವಿರುದ್ಧ 308 ಬಿಎನ್‌ಎಸ್ ಹಾಗೂ 66(D) ಐಟಿ ಎಕ್ಟ್ ಅಡಿಯಲ್ಲಿ ದೂರು ದಾಖಲಿಸಿಕೊಂಡ ಹೊಕ್ರಣಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.