ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವನ್ನು ಹಿಂದಿನಂತೆ ಮುಂದುವರಿಸುವ ಬಗ್ಗೆ ಇಬ್ಬರು ನಾಯಕರು ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ಭಾರತ ಮತ್ತು ಅಮೆರಿಕ ದೇಶಗಳು ವ್ಯಾಪಾರ ಮಾತುಕತೆ ಕುರಿತು ಶೀಘ್ರವಾಗಿ ಅಂತಿಮ ತೀರ್ಮಾನಕ್ಕೆ ಬರಲಿವೆ. ಮುಂಬರುವ ವಾರಗಳಲ್ಲಿ ಉತ್ತಮ ಸ್ನೇಹಿತರಾಗಿರುವ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲು ಎದುರು ನೋಡುತ್ತಿದ್ದೇನೆ” ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಹೇಳಿಕೆ ಉಲ್ಲೇಖಿಸಿ ಪ್ರಧಾನಿ ಮೋದಿ ಸಹ ಟ್ವೀಟ್ ಮಾಡಿ, “ಭಾರತ-ಅಮೇರಿಕಾ ಆಪ್ತ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಿಮ್ಮೊಂದಿಗೆ ಮಾತನಾಡಲು ನಾನೂ ಉತ್ಸುಕನಾಗಿದ್ದೇನೆ” ಎಂದಿದ್ದಾರೆ.
ಟ್ರಂಪ್ ಹೇಳಿದ್ದೇನು?
ಟ್ರುತ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಟ್ರಂಪ್, “ನಮ್ಮ ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳನ್ನು ಪರಿಹರಿಸಲು ಭಾರತ ಮತ್ತು ಅಮೆರಿಕ ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ಘೋಷಿಸಲು ಸಂತೋಷವಾಗಿದೆ. ಮುಂಬರುವ ವಾರಗಳಲ್ಲಿ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಮೋದಿ ಪ್ರತ್ಯುತ್ತರ ಏನು?
“ಭಾರತ-ಅಮೇರಿಕಾ ಆಪ್ತ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಮ್ಮ ವ್ಯಾಪಾರ ಮಾತುಕತೆಗಳು ಭಾರತ-ಅಮೆರಿಕ ಪಾಲುದಾರಿಕೆಯ ಅಪರಿಮಿತ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚು ಮಾಡಲು ದಾರಿ ಮಾಡಿಕೊಡುತ್ತವೆ ಎಂಬ ವಿಶ್ವಾಸ ನನಗಿದೆ. ಈ ಚರ್ಚೆಗಳನ್ನು ಆದಷ್ಟು ಬೇಗ ಮುಗಿಸಲು ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ನಾನೂ ಉತ್ಸುಕನಾಗಿದ್ದೇನೆ. ಉಭಯ ರಾಷ್ಟ್ರಗಳ ಜನರಿಗೆ ಉಜ್ವಲ, ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ತಮ್ಮ ಪೋಸ್ಟ್ ಅನ್ನು ಡೊನಾಲ್ಡ್ ಟ್ರಂಪ್ ಮತ್ತು POTUS (ಯುಎಸ್ ಅಧ್ಯಕ್ಷ)ಗೆ ಟ್ಯಾಗ್ ಮಾಡಿದ್ದಾರೆ.
ರಷ್ಯಾದಿಂದ ತೈಲ ಖರೀದಿ ಮತ್ತು ಶೇ.50ರಷ್ಟು ತೆರಿಗೆ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತದ ನಡುವಿನ 20 ವರ್ಷಗಳ ಆತ್ಮೀಯ ಸಂಬಂಧ ಬಹುತೇಕ ಹದಗೆಟ್ಟಿದೆ. ಆ ಬಳಿಕ ಭಾರತವು ಚೀನಾ ಜತೆಗಿನ ವಿವಾದ ಪರಿಹಾರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಅಲ್ಲದೆ, ಅಮೆರಿಕ ಬೆದರಿಕೆ ಹೊರತಾಗಿಯೂ ರಷ್ಯಾ ಜತೆಗಿನ ಸಂಬಂಧ ಕಡಿದುಕೊಳ್ಳದೇ ಇರಲು ನಿರ್ಧರಿಸಿದೆ.
India and the US are close friends and natural partners. I am confident that our trade negotiations will pave the way for unlocking the limitless potential of the India-US partnership. Our teams are working to conclude these discussions at the earliest. I am also looking forward… pic.twitter.com/3K9hlJxWcl
— Narendra Modi (@narendramodi) September 10, 2025
