ಬಡಜನರ ಪಾಲಿಗೆ ಆಶಾಕಿರಣವಾಗಬೇಕೆಂಬ ಆಶಯದೊಂದಿಗೆ ಮಂಗಳೂರಿನ ಡಾ. ಅಬ್ದುಲ್ ಬಶೀರ್ ಅವರ ಮಾಲಿಕತ್ವದ ʼಜನಪ್ರಿಯ ಆಸ್ಪತ್ರೆʼಯಲ್ಲಿ ವಿವಿಧ ಆರೋಗ್ಯ ಘಟಕಗಳನ್ನು ಉದ್ಘಾಟಿಸಲಾಗಿದ್ದು, ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ.
ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಘಲ್ ದುವಾ ನೆರವೇರಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ವೈದ್ಯರ ಸೇವಾಭಾವನೆ ಹಾಗೂ ದಾನಿಗಳ ಸಹಕಾರದಿಂದ ಡಯಾಲಿಸಿಸ್ ಯಂತ್ರ, ಭೌತ ಚಿಕಿತ್ಸಾ ವಿಭಾಗ, ದಂತ ಚಿಕಿತ್ಸಾ ಘಟಕ, ಸ್ವಲೀನತೆ (Autism) ಚಿಕಿತ್ಸೆ, ಜಠರ–ಕರುಳು–ಯಾಕೃತ ಸಂಬಂಧಿತ ಚಿಕಿತ್ಸಾ ವಿಭಾಗಗಳು ಬಡಜನರಿಗೆ ಲಭ್ಯವಾಗುತ್ತಿವೆ. ಇದು ಒಂದು ದೊಡ್ಡ ಸೇವೆಯಾಗಿದ್ದು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಸಹಾಯ ಹಸ್ತ ಚಾಚಿದ ದಾನಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆ. ಬರುವ ಪ್ರತಿಯೊಬ್ಬ ರೋಗಿಗೂ ಆರೋಗ್ಯ ಕರುಣಿಸಲಿ” ಎಂದರು.



ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ ಎಂ ಶಾಹಿದ್ ತೆಕ್ಕಿಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ಜನಪ್ರಿಯ ಆಸ್ಪತ್ರೆ ಕಳೆದ 11 ವರ್ಷಗಳಿಂದ ಹಾಸನ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಮತ್ತು ಸಾಮಾಜಿಕ ಸೇವೆ ಒದಗಿಸುತ್ತಿದ್ದು, ಇದೀಗ ಮಂಗಳೂರು ಭಾಗದಲ್ಲೂ ಗ್ರಾಮೀಣ ಜನತೆಗೆ ಆರೋಗ್ಯ ಸೇವೆ ನೀಡುತ್ತಿದೆ. ಡಾ. ಬಶೀರ್ ಹಾಗೂ ಅವರ ಕುಟುಂಬ ಆರೋಗ್ಯ ಕ್ಷೇತ್ರದಲ್ಲಿ ಮೂವತ್ತು ವರ್ಷಗಳಿಂದ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ದಿಶೆಯಲ್ಲಿ ಮುಂದಾಗಬೇಕು” ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮಂಗಳೂರು | ಎಸ್‌ಐಓದಿಂದ ‘ಮಾದರಿ ಶಿಕ್ಷಕ ಪೈಗಂಬರ್ ಮುಹಮ್ಮದ್ (ಸ)’ ಅಭಿಯಾನಕ್ಕೆ ಚಾಲನೆ
ಈ ಸಂದರ್ಭದಲ್ಲಿ ಡಾ. ಬಶೀರ್ ಅವರ ಪತ್ನಿ ತೆಕ್ಕಿಲ್ ನಸ್ರಿನ್ ಪಾದೂರ್, ಪುತ್ರ ಡಾ. ಶಾರುಖ್ ಮತ್ತು ಕುಟುಂಬಸ್ಥರು, ಶಾಹಿದ್ ತೆಕ್ಕಿಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇರ್ಷಾದ್ ದಾರಿಮಿ ಮಿತ್ತಬೈಲು, ಅಬ್ಬಾಸ್ ಫೈಝಿ ಪುತ್ತಿಗೆ, ಯು ಟಿ ಇಫ್ತಿಕಾರ್, ರಿಯಾಸ್ ಬಾವ, ಎಸ್ ಎಂ ಮುಸ್ತಫ, ಡಾ. ಸಚ್ಚಿದಾನಂದ ರೈ, ಹಸನಬ್ಬ ಚಾರ್ಮಾಡಿ, ಎನ್ ಎಸ್ ಕರೀಂ, ಇಸ್ಮಾಯಿಲ್ ನವಾಜ್, ಅಶ್ರಫ್ ಕಲ್ಲೇಗ, ಜಬ್ಬಾರ್ ಮಾರಿಪ್ಪಳ್ಳ, ಸಿರಾಜ್ ಮಾನಿಲ, ಡಾ. ಅಬ್ದುಲ್ ಬಶೀರ್, ಡಾ. ಕಿರಾಶ್ ಪರ್ತಿಪ್ಪಾಡಿ ಹಾಗೂ ಮೊದಲಾದವರು ಇದ್ದರು.