ಮದ್ದೂರು ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಗಣೇಶನ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲು ಪಿತೂರಿ ನಡೆಸಿದವರನ್ನು ಕಂಡುಹಿಡಿದು ಶಿಕ್ಷಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಮಂಡ್ಯ ಜಿಲ್ಲಾ ಸಮಿತಿ, ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಮದ್ದೂರು ಗಲಭೆ ಕುರಿತಂತೆ ಸಿಪಿಐಎಂ ಕಾರ್ಯಕರ್ತರು ಪತ್ರಿಕಾಗೋಷ್ಟಿ ಬಿಡುಗಡೆ ಮಾಡಿದ್ದು, ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಬಲಿಯಾಗದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರದ ಗಮನ ಸೆಳೆದಿದ್ದಾರೆ.
“ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ಮೇಲೆ ಕಲ್ಲು ತೂರಿದ ಘಟನೆಯಿಂದ ಉಂಟಾಗಿರುವ ಉದ್ವಿಗ್ನ ಸ್ಥಿತಿಯನ್ನು ತನ್ನ ಕೋಮುವಾದಿ ರಾಜಕೀಯಕ್ಕೆ ಬಳಸಿಕೊಳ್ಳುವ ಬಿಜೆಪಿಯ ಹುನ್ನಾರಗಳನ್ನು ಜಿಲ್ಲೆಯ ಜನತೆ ಅರ್ಥ ಮಾಡಿಕೊಂಡು, ಕೋಮುವಾದಕ್ಕೆ ಬಲಿಯಾಗದೆ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಬೇಕು. ಉದ್ವಿಗ್ನತೆಯಿಂದ ಸೌಹಾರ್ದತೆಗೆ ದಕ್ಕೆ ಉಂಟುಮಾಡಿದೆ. ಇಂತಹ ಉದ್ವಿಗ್ನತೆಯನ್ನು ಶಮನ ಮಾಡಿ ಸೌಹಾರ್ದ ಮೂಡಿಸದೆ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲವು ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿನ್ನೆಯ ಪ್ರತಿಭಟನೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಭಾವನೆಗಳು ಮತ್ತು ಚಿಹ್ನೆಗಳಿಗೆ ಹಾನಿಯುಂಟು ಮಾಡಿದ ವ್ಯಕ್ತಿ ಹಾಗೂ ಶಕ್ತಿಗಳ ವಿರುದ್ಧವೂ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು” ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ ಎಲ್ ಕೃಷ್ಣಗೌಡ ಒತ್ತಾಯಿಸಿದ್ದಾರೆ.
“ಇಡೀ ಜಿಲ್ಲೆಯಲ್ಲಿ ಈ ಬಾರಿ ಯಾವುದೇ ಗಲಬೆಯಾಗದಂತೆ ಕ್ರಮ ವಹಿಸಿದ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಮದ್ದೂರಿನಲ್ಲಿ ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿದೆ. ಸಣ್ಣ ನಿರ್ಲಕ್ಷ್ಯವನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಶಕ್ತಿಗಳ ವಿರುದ್ಧ ಎಚ್ಚರಿಕೆ ವಹಿಸಬೇಕು. ಅಲ್ಲದೆ ನಿರ್ಲಕ್ಷ್ಯ ತಾಳಿದ ಅಧಿಕಾರಿಗಳನ್ನು ಘಟನೆಗೆ ಹೊಣೆಮಾಡಬೇಕು” ಎಂದು ಆಗ್ರಹಿಸಿದರು.
“ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ನೆಲೆಯೂರಲು ಶತಾಯ ಗತಾಯ ಪ್ರಯತ್ನಗಳನ್ನು ನಡೆಸುತ್ತಿದೆ. ದಯಮಾಡಿ ಜಿಲ್ಲೆಯ ಜನ ಬಿಜೆಪಿಯ ಕೋಮುವಾದಿ ರಾಜಕೀಯಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು. ಕಳೆದ ವರ್ಷ ನಾಗಮಂಗಲ, ಈಗ ಮದ್ದೂರು, ಹಿಂದೆ ಶ್ರೀರಂಗಪಟ್ಟಣ, ಕೆರೆಗೋಡು ಹೀಗೆ ಗಲಬೆ ಮತ್ತು ಉದ್ವಿಗ್ನತೆ ಸೃಷ್ಟಿಸಿ ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಹಾಗಾಗಿ ಜಿಲ್ಲೆಯ ಪ್ರಜ್ಞಾವಂತ ಜನತೆ ಇಂತಹ ಕ್ಷುಲ್ಲಕ ರಾಜಕಾರಣಕ್ಕೆ ಬಲಿಯಾಗಬಾರದು, ಜನತೆಯ ಬದುಕಿನ ಪ್ರಶ್ನೆಗಳಿಗೆ ಯಾವಾಗಲೂ ಕಿವುಡಾಗಿರುವ ಬಿಜೆಪಿ ಗಲಬೆ ಸಂದರ್ಭಗಳಲ್ಲಿ ರಣಹದ್ದಿನಂತೆ ಮುಗಿಬೀಳುತ್ತದೆ. ಬಿಜೆಪಿಯ ಸಾವಿನ ಮನೆಯ ರಾಜಕಾರಣವನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ. ನಿನ್ನೆಯ ಮದ್ದೂರಿನ ಬಂದ್ ಮತ್ತು ಪ್ರತಿಭಟನೆಯೂ ಕೂಡಾ ಮುಂದಿನ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡಿರುವ ಬಿಜೆಪಿ ನಾಯಕನ ಪ್ರಾಯೋಜನೆ ಎಂಬುದನ್ನು ಜನತೆ ಅರ್ಥ ಮಾಡಿಕೊಂಡು ಸೌಹಾರ್ದತೆ ಉಳಿಸಲು ಶ್ರಮಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿದ್ದೀರಾ? ಕಾಡುಹಂದಿ, ಕರಡಿಗಳ ಹಾವಳಿಗೆ ಅಪಾರ ಬೆಳೆನಾಶ: ಮುಗಿಲು ಮುಟ್ಟಿದ ರೈತರ ರೋಧನೆ, ಕೈಕಟ್ಟಿ ಕುಳಿತ ಅರಣ್ಯ ಇಲಾಖೆ
ನಿರ್ನಾಮದತ್ತ ಜೆಡಿಎಸ್: ಕೋಮುವಾದಿ ಶಕ್ತಿಗಳ ಜತೆ ರಾಜಕೀಯ ಆಟ ಆಡುತ್ತಿರುವ ಜೆಡಿಎಸ್ ತಾನು ನಿರ್ನಾಮವಾಗುವುದಲ್ಲದೆ, ಜಿಲ್ಲೆಯನ್ನೂ ನಿರ್ನಾಮ ಮಾಡಲು ಹೊರಟಿದೆ. ಬಿಜೆಪಿ ಜತೆಗಿನ ಆತ್ಮಹತ್ಯಾ ರಾಜಕಾರಣವನ್ನು ಜಿಡಿಎಸ್ ಕೈ ಬಿಡಬೇಕೆಂಬುದು ಸಿಪಿಐಎಂನ ಆಗ್ರಹ. ಬಿಜೆಪಿ ಸಹವಾಸದಿಂದ ಜೆಡಿಎಸ್ ನಿರ್ನಾಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ʼಜಾತ್ಯತೀತʼವೆಂದು ಹೇಳಿಕೊಳ್ಳುತ್ತಿದ್ದ ಜೆಡಿಎಸ್ ಸನಾತನಿಗಳಿಗಿಂತಲೂ ಕೀಳು ಭಾಷೆಯಲ್ಲಿ ಮಾತನಾಡುತ್ತಿದೆ. ಬಿಜೆಪಿ ಎಂಬ ಘಟಸರ್ಪದ ಜತೆಗೆ ಹೋದ ಯಾವುದೇ ಪ್ರಾದೇಶಿಕ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಂಡಿಲ್ಲ ಎಂಬುದನ್ನು ಜೆಡಿಎಸ್ ಮನಗಾಣಬೇಕು” ಎಂದರು.
“ಹಳ್ಳಿಗಳಲ್ಲಿನ ಜಿಡಿಎಸ್ ಕಾರ್ಯಕರ್ತರು ಕೇಸರಿ ಶಾಲು ಹೊದ್ದು ಸಂಘ ಪರಿವಾರದ ಕಾಲಾಳುಗಳಾಗುತ್ತಿದ್ದಾರೆ. ಮುಂದೆ ಜೆಡಿಎಸ್ ಪಶ್ಚಾತ್ತಾಪ ಪಟ್ಟು ಬಿಜೆಪಿ ತೊರೆದರೂ ಜೆಡಿಎಸ್ ಕಾರ್ಯಕರ್ತರು ಸಂಘ ಪರಿವಾರದಲ್ಲೇ ಉಳಿಯುತ್ತಾರೆ. ಆದಷ್ಟು ಬೇಗ ಈ ಅಪಾಯವನ್ನು ಜೆಡಿಎಸ್ ಅರ್ಥ ಮಾಡಿಕೊಳ್ಳುತ್ತದೆ ಎಂಬುದು ಸಿಪಿಐಎಂ ಆಶಯವಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎನ್ ಎಲ್ ಭರತ್‌ರಾಜ್, ಸಿ. ಕುಮಾರಿ, ಬಿ. ಹನುಮೇಶ್, ಸುಶೀಲಾ ಇದ್ದರು.