ಜಾತ್ಯತೀತ ಮತ್ತು ಬಹುತ್ವ ಸಮಾಜಕ್ಕೆ ಹೆಸರುವಾಸಿಯಾದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಮತ್ತು ಸಂಘಪರಿವಾರದವರು ಕೋಮುವಾದದ ಪ್ರಯೋಗವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚು ಮಾಡುತ್ತಿದ್ದಾರೆ. ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದಿರುವುದು ಕೋಮುವಾದದ ಭಾಗ ಎನ್ನುತ್ತಿದ್ದಾರೆ ಸ್ಥಳೀಯರು.
ದಶಕಗಳಿಂದ ಕೋಮು ಹಿಂಸಾಚಾರದಿಂದ ಮುಕ್ತವಾಗಿದ್ದ ಈ ಪ್ರದೇಶದಲ್ಲಿ ವೇಗವಾಗಿ ಕೋಮುದ್ವೇಷ ಹರಡಿ ಪರಿಸ್ಥಿತಿ ಹದಗೆಡುತ್ತಿದೆ. ನಾಗಮಂಗಲ, ಕೆರೆಗೋಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ.
ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಬುಧವಾರ ಮದ್ದೂರಿಗೆ ಆಗಮಿಸಿ ಕೋಮುದ್ವೇಷದ ಭಾಷಣಗಳನ್ನು ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಮತ್ತು ಸಂಘಪರಿವಾರದ ಹಾರ್ಡ್‌ಕೋರ್ ನಾಯಕ ಸಿ ಟಿ ರವಿ ಅವರು ಉದ್ದೇಶಪೂರ್ವಕವಾಗಿ ಅನ್ಯ ಕೋಮಿನ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ಮದ್ದೂರಿನಲ್ಲಿ ಸಿ ಟಿ ರವಿ ಮಾತನಾಡುತ್ತಾ, “ಟಿಪ್ಪು ಮತ್ತು ಅವರ ಅಪ್ಪನನ್ನೇ ಬಿಟ್ಟಿಲ್ಲ ನಾವು. ಇನ್ನು ನಿಮ್ಮನ್ನು ಬಿಡುತ್ತೀವಾ? ನಮಗೆ ತೊಡೆ ತಟ್ಟುವ ಕೆಲಸ ಮಾಡಬೇಡಿ. ಅಗತ್ಯ ಬಿದ್ದರೆ ನಾವು ತೊಡೆನೂ ತಟ್ಟುತ್ತೇವೆ, ತಲೆನೂ ತೆಗೆಯುತ್ತೇವೆ” ಎಂದು ದ್ವೇಷ ಭಾಷಣ ಮಾಡಿದ್ದಾರೆ.
“ನಾವು ಜಗತ್ತಿಗೆ ಸರ್ವೇ ಜನ ಸುಖಿನೋ ಭವಂತು ಅಂತ ಹೇಳುವ ಜನ. ನೀವು ನಮ್ಮನ್ನು ಕಾಫಿರರು ಅಂತ ನೋಡ್ತೀರಿ? ನಮ್ಮ ವಿಚಾರಗಳನ್ನು ಧ್ವಂಸ ಮಾಡುತ್ತೀರಿ? ಇಸ್ಲಾಂ ಹುಟ್ಟಿದ್ದು 1600 ವರ್ಷಗಳ ಹಿಂದೆ. ಹಿಂದೂ ಧರ್ಮ ಹುಟ್ಟಿರುವುದು 16 ಸಾವಿರ ವರ್ಷಗಳ ಹಿಂದೆ. ಎಲ್ಲ ಬಿಟ್ಟು ನೆಮ್ಮದಿಯಿಂದ ನೀವೂ ಇರಿ. ನಾವೂ ಇರುತ್ತೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಹುಲ್ ಹೇಳಿದ್ದನ್ನೆಲ್ಲ ಮೋದಿ ಮಾಡುತ್ತಿದ್ದಾರಲ್ಲ?
“ಅಣ್ಣ ಅಂದ್ರೆ ತಲೆ ತಗ್ಗಿಸುತ್ತೇವೆ. ಏನ್ಲಾ ಅಂದ್ರೆ ಯಾವನಲೇ ಅನ್ನೋ ತಾಕತ್ತು ಹಿಂದೂ ಸಮಾಜಕ್ಕೆ ಇದೆ. ಮುಖ್ಯಮಂತ್ರಿಗಳಿಗೆ, ಕಾಂಗ್ರೆಸ್ ಸರ್ಕಾರಕ್ಕೆ ಒಂದು ವಿನಂತಿ; ಬರೀ ಸಾಬರಿಂದಲೇ ಸರ್ಕಾರ ನಡೆಸುತ್ತಿದ್ದೀರಾ? ಹಿಂದೂಗಳು ಯಾರೂ ನಿಮಗೆ ಮತ ಹಾಕಿಲ್ವಾ? ಹಿಂದೂಗಳು ಹಾಳಾಗಿ ಹೋಗಲಿ, ಸಾಬರಿಗೆ ಏನೂ ಆಗಬಾರದು ಎನ್ನುವ ನಿಮ್ಮ ಮಾನಸಿಕತೆಯಿಂದ ಹೊರಬನ್ನಿ” ಎಂದು ಹೇಳಿದರು.
“ನಾವು ಮದ್ದೂರಿಗೆ ರಾಜಕಾರಣ ಮಾಡಲು ಬಂದಿಲ್ಲ, ಹಿಂದೂ ಸಮಾಜದ ಕೇಸರಿ ಶಾಲು ಹಾಕಿಕೊಂಡು ಬಂದಿದ್ದೇವೆ. ಹಿಂದೂ ವಿಷಯದಲ್ಲಿ ರಾಜಕಾರಣವಿಲ್ಲ. ನೀವೇನು ಮಾಡುತ್ತೀರಿ ಎನ್ನುವುದು ನಮಗೆ ಗೊತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ನಮ್ಮವರು ಎನ್ನುತ್ತೀರಿ. ಪಾಕಿಸ್ತಾನ ಮೇಲೆ ನಿಮಗೆ ಪ್ರೀತಿ ಇದ್ದರೆ ಅಲ್ಲಿಗೆ ಗಂಟು ಮೂಟೆ ಕಟ್ಟಿ ನಡೆಯಿರಿ” ಎಂದು ಹರಿಹಾಯ್ದರು.