ಗ್ರಾಮದ ರಸ್ತೆ ಹಾಗೂ ಒಂದೂರಿನಿಂದ ಮತ್ತೊಂದೂರಿಗೆ ಸಂಪರ್ಕದ ಸೇತುವೆ ಅಗಬೇಕಾದ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಬೇಕಾದ್ದು ಸರ್ಕಾರ ಹಾಗೂ ಜನರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳ ಜವಾಬ್ದಾರಿ. ಆದರೆ ಕೊಪ್ಪಳ ಜಿಲ್ಲೆ ಹಾಗೂ ತಾಲೂಕಿನ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ತಮ್ಮ ಕರ್ತವ್ಯ ಏನೆಂಬುದನ್ನೇ ಮರೆತು ನಿದ್ದೆ ಮಾಡುತ್ತಿರುವಂತಿದೆ.
ಕೊಪ್ಪಳ ತಾಲೂಕಿನ ಮುದ್ಲಾಪುರ ಪುಟ್ಟ ಗ್ರಾಮ ಕೊಪ್ಪಳ ತಾಲೂಕಿಗೆ ಸೇರಿದ್ದರೂ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟಿದೆ ಹಾಗೂ ಮಾದಿನೂರು ಗ್ರಾಮ ಪಂಚಾಯತಿ ಆಡಳಿತ ವ್ಯಾಪ್ತಿಗೆ ಬರುತ್ತದೆ. 15 ವರ್ಷಗಳಿಂದ ಗ್ರಾಮದ ರಸ್ತೆ ಹದಗೆಟ್ಟು ಗುಂಡಿಗಳಿಂದ ತುಂಬಿದ್ದರೂ ಜನಪ್ರತಿನಿಧಿಗಳ ಕಣ್ಣಿಗೆ ಮಾತ್ರ ಕಂಡಿಲ್ಲ. ಅದೇ ರಸ್ತೆಯಲ್ಲಿ ನಾಲ್ಕಾರು ಬಾರಿ ಓಡಾಡಿದ್ದರೂ, ರಸ್ತೆ ಹದಗೆಟ್ಟಿರುವ ದೂರುಗಳು ಕೇಳಿಬರುತ್ತಿದ್ದರೂ ಜಾಣ ಕಿವುಡರಂತೆ ಸುಮ್ಮನಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಕೊಪ್ಪಳಕ್ಕೆ 14 ಕಿ.ಮೀ ದೂರ, ಕಿನ್ನಾಳಕ್ಕೆ 5 ಕಿ.ಮೀ ದೂರವಿರುವ ಮುದ್ಲಾಪುರ ಗ್ರಾಮದ ರಸ್ತೆ ಡಾಂಬರ್ ಕಿತ್ತು ಒಂದೂವರೆ ದಶಕ ಕಳೆದರೂ, ರಸ್ತೆಗೆ ಡಾಂಬರ್ ಅಲ್ಲ ಗುಂಡಿ ಬಿದ್ದಿರುವ ಜಾಗ ಹಿಡಿ ಮಣ್ಣನ್ನೂ ಕಂಡಿಲ್ಲ. ಸ್ವತಃ ಗ್ರಾಮಸ್ಥರೇ ತಮ್ಮೂರ ದೇವಸ್ಥಾನದಲ್ಲಿ ಸಭೆ ಸೇರಿ ಆರ್ಥಿಕವಾಗಿ ಸಬಲವಿರುವ ಮನೆಗಳಿಗೆ ಅಥವಾ ಕುಟುಂಬಗಳ ನೆರವಿನಿಂದ ಸಾವಿರಾರು ರೂಪಾಯಿ ಸಂಗ್ರಹಿಸಿ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಲು ಮುಂದಾಗಿದ್ದಾರೆ. ಇದನ್ನು ನೋಡಿಯಾದರೂ ಜನಪ್ರತಿನಿಧಿಗಳು ನಮ್ಮ ಗ್ರಾಮದ ರಸ್ತೆಯನ್ನು ಸಿಸಿ ಅಥವಾ ಡಾಂಬರೀಕರಣ ಮಾಡಲಿ ಎನ್ನುವುದು ಅವರ ಉದ್ದೇಶ.

ಮುದ್ಲಾಪುರ ಗ್ರಾಮದ ರಸ್ತೆ ಮೇಲೆ ಬಾಯ್ತೆರೆದು ಕುಳಿತ ಗುಂಡಿಗಳಿಗೆ ಈಗಾಗಲೇ ಹಲವು ಬಾರಿ ದ್ವಿಚಕ್ರ ವಾಹನಗಳು ಬಿದ್ದು ಅಪಘಾತ ಸುದ್ದಿಗಳೂ ವರದಿಯಾಗಿವೆ. ಆದರೂ ರಸ್ತೆಯ ಸ್ಥಿತಿ ಮಾತ್ರ ಬದಲಾಗಿಲ್ಲ. ಗ್ರಾಮದ ಅಥವಾ ಬೇರೆ ಸ್ಥಳದ ವಾಹನ ಗ್ರಾಮಕ್ಕೆ ಪ್ರವೇಶ ಮಾಡಿದೊಡನೆ ತಾವೀಗ ಸುಸಜ್ಜಿತವಲ್ಲದ ಮುದ್ಲಾಪುರ ಗ್ರಾಮದಲ್ಲಿ ಇದ್ದೇವೆ ಎನ್ನುವುದನ್ನು ನೆನಪಿಸಿಬಿಡುತ್ತವೆ. ಗುಂಡಿಬಿದ್ದ ರಸ್ತೆಗಳೇ ಅವರನ್ನು ಸ್ವಾಗತಿಸುವುದರಿಂದ ಗ್ರಾಮಕ್ಕೆ ಬೈಗುಳ ತಪ್ಪಲ್ಲ. ಇದರಿಂದ ಇಲ್ಲಿಗೆ ವೈವಾಹಿಕ ಸಂಬಂಧ ಬೆಳೆಸುವವರು ಹಿಂದೆ ಮುಂದೆ ನೋಡುವಂತಾಗಿದೆ.
ಇತ್ತೀಚೆಗೆ ಸತತವಾಗಿ 2 ತಿಂಗಳಿಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಕೊಪ್ಪಳದಿಂದ ಮುದ್ಲಾಪುರ ಹಾಗೂ ಮುದ್ಲಾಪುರದಿಂದ ಕಿನ್ನಾಳ ಗ್ರಾಮದ ರಸ್ತೆಗಳೆಲ್ಲಾ ಮಿನಿ ಕೆರೆಗಳೇ ಆಗಿಹೋಗಿವೆ. ಹೂಳೆತ್ತುವವರು ಬರಬೇಕಷ್ಟೇ! ಎಂದು ವಾಹನ ಸವಾರರು ಅಸಹಾಯಕತೆಯಿಂದ ಹೇಳುತ್ತಾರೆ.
ಬರೋಬ್ಬರಿ 15 ವರ್ಷಗಳಿಂದಲೂ ರಸ್ತೆಗಳದ್ದು ಇದೇ ಪರಿಸ್ಥಿತಿ. ಇತ್ತೀಚೆಗೆ ಗುಂಡಿಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಪ್ರತಿ ಮನೆಗೆ ಇಂತಿಷ್ಟು ಎಂದು ಹಣ ಸಂಗ್ರಹಿಸಿ, ಟ್ರಾಕ್ಟರ್ ಮಾಲೀಕರು ಹಾಗೂ ಹಿಟಾಚಿ ಮಾಲೀಕರ ಜೊತೆ ಚರ್ಚಿಸಿ ತಮ್ಮ ಗ್ರಾಮದ ರಸ್ತೆಯನ್ನು ತಾವೇ ದುರಸ್ತಿಗೊಳಿಸಿಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಬಂದರು. ಬಳಿಕ ಗುಂಡಿ ಬಿದ್ದ ರಸ್ತೆಯನ್ನು 10 ಹಿಟಾಚಿ ಹಾಗೂ 8 ಡೋಜರ್ ಟ್ರಾಕ್ಟರ್‌ಗಳ ಮೂಲಕ ಗ್ರಾಮದ ಚರಂಡಿ ಹೂಳೆತ್ತಿ ರಸ್ತೆ ಗುಂಡಿ ಮುಚ್ಚುತ್ತಿದ್ದಾರೆ. ಮುದ್ಲಾಪುರ ಗ್ರಾಮದಿಂದ ಕಿನ್ನಾಳ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ಅಕ್ಕಪಕ್ಕ ಬೆಳೆದಿರುವ ಮುಳ್ಳು ಕಂಟೆ ಸ್ವಚ್ಛ ಮಾಡುತ್ತ ರಸ್ತೆಯಲ್ಲಿ ಗುಂಡಿಗಳಿಗೆ ಮಣ್ಣು ಹಾಕಿ ಸಮತಟ್ಟು ಮಾಡುತ್ತಿದ್ದಾರೆ.
ಈ ಪರಿ ಸಮಸ್ಯೆಗಳು ತಲೆದೋರಿದರೂ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳದೆ ಇನ್ನೂ ನಿದ್ರಾವಸ್ಥೆಯಲ್ಲಿದೆ. ಗ್ರಾಮ ಪಂಚಾಯತಿ ಸದಸ್ಯರಾಗಲಿ, ಅಧಿಕಾರಿಗಳಾಗಲಿ ರಸ್ತೆ ನಿರ್ಮಾಣಕ್ಕೆ ಮುಂದಾಗದೇ ಇರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಗ್ರಾಮದಲ್ಲಿ ಯೆರೆಹಳ್ಳದ ಆಣೆಕಟ್ಟು ಇದ್ದು, ಅದನ್ನು ವೀಕ್ಷಿಸಲು ಅನೇಕ ಪ್ರವಾಸಿಗರು ಬರುತ್ತಾರೆ. ಎಲ್ಲ ಅಧಿಕಾರಿ, ಜನಪ್ರತಿನಿಧಿಗಳು ಬಂದು ಹೋಗುತ್ತಾರೆ. ಆದರೆ, ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಮುಂದಾಗುವ ಅನಾಹುತ ತಪ್ಪಿಸಲು ಸಂಬಂಧಿತರು ಕ್ರಮಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಅಹವಾಲು.
ಈ ಕುರಿತು ಗ್ರಾಮದ ವಿರೂಪಾಕ್ಷಪ್ಪ ಬಾರಕೇರ ಈದಿನ.ಕಾಮ್ನೊಂದಿಗೆ ಮಾತನಾಡಿ, “ಸುಮಾರು 15-20 ವರ್ಷಗಳಿಂದ ಮುದ್ಲಾಪುರದಿಂದ ಕೊಪ್ಪಳ ಹಾಗೂ ಕಿನ್ನಾಳ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಗುಂಡಿ ಬಿದ್ದಿವೆ. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಗ್ರಾಮದ ಅಭಿವೃದ್ಧಿ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ಗ್ರಾಮದಿಂದ ಕಿನ್ನಾಳ ಹಾಗೂ ಕೊಪ್ಪಳಕ್ಕೆ ಅನಾರೋಗಿತರು ಚಿಕಿತ್ಸೆ ಹೋಗಬೇಕೆಂದರೆ ತುಂಬಾ ಕಷ್ಟ ಆಗಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಸರಿಯಾದ ರಸ್ತೆ ಇಲ್ಲದ ಕಾರಣದಿಂದ ವಾಹನಗಳ ಕೊರತೆ ಇದೆ. ಆ ಕಾರಣದಿಂದ ಗ್ರಾಮಸ್ಥರೇ ಪಟ್ಟಿ ಎತ್ತಿ ಹಣ ಸಂಗ್ರಹಿಸಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿಸುತ್ತಿದ್ದೇವೆ. ಶಾಸಕರು ಮತ್ತು ಸಂಸದರು ಇನ್ಮೇಲಾದರೂ ನಾಚಿಕೆ ಬಂದು ಎಚ್ಚೆತ್ತು ನಮ್ಮ ಗ್ರಾಮಕ್ಕೆ ಸಿಸಿ ಅಥವಾ ಡಾಂಬರ್ ರಸ್ತೆ ನಿರ್ಮಿಸಿ ಕೊಡುವ ಕೆಲಸ ಮಾಡಲೆಂದು ವಿನಂತಿಸಿಕೊಳ್ಳುತ್ತೇವೆ” ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ | ಅಪ್ರಾಪ್ತ ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣ; ಅಪರಾಧಿಗೆ 20 ವರ್ಷ ಜೈಲು
ಅನೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಅನೇಕರು ಗಾಯಗೊಂಡಿದ್ದಾರೆ. ಆದರೂ ಮುಚ್ಚಲು ಯಾರೂ ಬಂದಿಲ್ಲ. ಗ್ರಾಮಸ್ಥರೇ ತಾತ್ಕಾಲಿಕವಾಗಿ ಕಲ್ಲು ಹಾಕಿ ಮುಚ್ಚಲೆತ್ತಿಸಿದ್ದಾರೆ. ಆದರೆ, ಗುಂಡಿ ಮುಚ್ಚಿಲ್ಲ. ಸಂಬಂಧಿಸಿದ ಅಧಿಕಾರಿಗಳು ಗುಂಡಿ ಮುಚ್ಚಿ ಶಾಶ್ವತ ಪರಿಹಾರ ನೀಡಬೇಕಿದೆ.
ಸ್ಥಳೀಯರು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಾಕಷ್ಟು ಗುಂಡಿಗಳು ನಿರ್ಮಾಣವಾಗಿವೆ. ಜಿಲ್ಲೆಯ ನಗರ ಗ್ರಾಮಗಳ ರಸ್ತೆಗಳ ಡಾಂಬರು ತೇಪೆ ಕಿತ್ತು ಹೋಗಿವೆ. ರಸ್ತೆಗಳಲ್ಲಿ ಮತ್ತೆ ಗುಂಡಿಗಳ ದರ್ಬಾರ್ ಹೆಚ್ಚಾಗಿದ್ದು ಶಾಸಕ, ಸಂಸದ ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗ ಇಲಾಖೆ ಅಧಿಕಾರಿಗಳು ಅದ್ಯಾವಾಗ ಜಾಗೃತಗೊಳ್ಳುತ್ತಾರೋ ಗೊತ್ತಿಲ್ಲ. ಇನ್ಮುಂದಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಕೊಪ್ಪಳ ಜಿಲ್ಲೆಯ ರಸ್ತೆಗಳನ್ನ ಅಭಿವೃದ್ಧಿಗೊಳಿಸುವರೋ ಎಂದು ಕಾದು ನೋಡಬೇಕಿದೆ.