ಬಲಾಢ್ಯ ಜಾತಿಯವರ ನಿರಂತರ ಕಿರುಕುಳಕ್ಕೆ ಬೇಸತ್ತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ದಲಿತ ಕುಟುಂಬವೊಂದು ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿರುವ ಸಂಗತಿ ಬೆಳಕಿಗೆ ಬಂದಿದೆ.
“ಕೆಳ ವರ್ಗಕ್ಕೆ ಸೇರಿದ ಕಾರಣ ನನ್ನ ಕುಟುಂಬದ ಮೇಲೆ ಮೇಲ್ಜಾತಿಯವರು ತುಂಬಾ ದೌರ್ಜನ್ಯ ನಡೆಸುತ್ತಿದ್ದಾರೆ. ಬೇಸತ್ತು ಹೋಗಿದ್ದೇನೆ. ಹಾಗಾಗಿ, ನನಗೆ ಹಾಗೂ ನನ್ನ ಕುಟುಂಬದವರಿಗೆ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ರಾಷ್ಟ್ರಪತಿಗೆ ಪತ್ರದ ಮೂಲಕ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡಿನ ಬಿಸನಪಲ್ಲಿ ಗ್ರಾಮದ ದಲಿತ ನಿವಾಸಿ ನರಸಿಂಹಪ್ಪ ಕೋರಿದ್ದಾರೆ.
“ನಾನು ಮದುವೆಯಾದ ನಂತರ ನನ್ನ ಹೆಂಡತಿಗೆ ಯಾರ ಮನೆಯಲ್ಲೂ ಕೆಲಸಕ್ಕೆ ಕಳಿಸದೆ ಮಕ್ಕಳನ್ನು ಚೆನ್ನಾಗಿ ಪೋಷಣೆ ಮಾಡಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವ ಪ್ರಯತ್ನ ಮಾಡಿದೆ. ಆದರೆ ಇದನ್ನು ಸಹಿಸದ ಗ್ರಾಮದ ನಿವಾಸಿಗಳಾದ ರಾಜಾರೆಡ್ಡಿ, ಪೆಂಕಟರಾಮಣ್ಣ, ರಾಮಲಕ್ಷ್ಮಮ್ಮ, ಸುರೇಂದ್ರ ರೆಡ್ಡಿ ಇವರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ನನಗೆ ಸೇರಿದ ಜೇನು, ಶ್ರಿಗಂಧ, ಮಾವು, ಇತ್ಯಾದಿ ಕೃಷಿ ಬೆಳೆಗಳಿಗೆ ಬೆಂಕಿ ಹಚ್ಚಿ ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ನನ್ನ ಮನೆಗೆ ಬರುತ್ತಿದ್ದ ನೀರಿನ ಸಂಪರ್ಕವನ್ನು ಕಡಿತಮಾಡಿ ಕೊಳಚೆ ನೀರನ್ನು ಬಿಟ್ಟಿದ್ದಾರೆ ಹಾಗೂ ಮನೆಯ ಹೊರಗೆ ಕೊಳಚೆ ನೀರು ನಿಲ್ಲುವಂತೆ ಮಾಡಿ ಬಗೆಬಗೆಯ ತೊಂದರೆಗಳನ್ನು ನಮಗೆ ನೀಡುತ್ತಿದ್ದಾರೆ ಎಂದು ದಯಾ ಮರಣ ಅರ್ಜಿಯಲ್ಲಿ ವಿವರಗಳನ್ನು ನೀಡಿದ್ದಾರೆ.
ಒಂದು ದಿನ ರಾಜಿ ಮಾಡಕ್ಕೆ ನನಗೆ ಕರೆದು ಮತ್ತೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ನಾನು ಬೆಂಗಳೂರಿಗೆ ಹೋಗಿದ್ದ ಸಮಯ ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದರು ಹಾಗೂ ರೇಪ್ ಮಾಡಲು ಸಹ ಪ್ರಯತ್ನ ಪಟ್ಟರು ಎಂದು ನರಸಿಂಹಯ್ಯ ಈ ದಿನ ಡಾಟ್ ಕಾಮ್ ಜೊತೆಗೆ ಮಾತನಾಡುತ್ತಾ ತಮ್ಮ ನೋವನ್ನು ತಿಳಿಸಿದ್ದಾರೆ.

ನಾನು ರಾಜ್ಯದ ಮುಖ್ಯಮಂತ್ರಿಗಳಿಗೆ, ಡಿ.ಜಿ, ಜಿಲ್ಲಾಧಿಕಾರಿಗೆ, ಪೋಲಿಸ್ ಇಲಾಖೆ ನನಗೆ ರಕ್ಷಣೆ ನೀಡಬೇಕು ಎಂದು ಮನವಿ ಸಹ ಸಲ್ಲಿಸಿದ್ದೇನೆ. ಯಾರೂ ಕೂಡ ಸಕಾರಾತ್ಮಕವಾಗಿ ಸ್ಪಂದನೆ ಮಾಡಿಲ್ಲ. ನಾನು ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದ್ದು, ಜಾತಿ ನಿಂದನೆ ದೂರು ಹಿಂಪಡೆಯಿರಿ ಎಂದು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಮನೆ ಬಿಟ್ಟು ಹೋಗಿ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
“ನಮ್ಮ ಮೇಲೆ ಇಷ್ಟು ದೌರ್ಜನ್ಯ ನಡೆಯುತ್ತಿದ್ದರು ಸರಿಯಾದ ರೀತಿಯಲ್ಲಿ ರಕ್ಷಣೆ ಸಿಗದ ಹಿನ್ನೆಲೆಯಲ್ಲಿ ಬೇಸತ್ತು ದಯಾ ಮರಣ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದೇವೆ” ಎಂದು ನರಸಿಂಹಯ್ಯ ತಿಳಿಸಿದ್ದಾರೆ.