ಅಮೆರಿಕದ ಅವಳಿ ಗೋಪುರಗಳು ಭಯೋತ್ಪಾದಕ ದಾಳಿಗೆ ತುತ್ತಾಗಿ ಇಂದಿಗೆ 24 ವರ್ಷಗಳು. ಅಂದು ನಡೆದ ಘಟನೆ ಅಮೆರಿಕ ಮಾತ್ರವಲ್ಲದೆ ಇಡೀ ಜಗತ್ತು ಸರ್ವಕಾಲಕ್ಕೂ ನೆನೆದು ತಲ್ಲಣಗೊಳ್ಳುವ ಘಟನೆಯಾಗಿ ಗುರುತಾಯಿತು. 2001ರ ಸೆ.11 ಮಾನವ ಇತಿಹಾಸದಲ್ಲಿ ಮರೆಯಲಾಗದ ದಿನವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ವಿಶ್ವದ ದೊಡ್ಡಣ್ಣ ಎನಿಸಿಕೊಳ್ಳುವ ಅಮೆರಿಕದ ನ್ಯೂಯಾರ್ಕ್ ನಗರ ತನ್ನ ಸಾಮಾನ್ಯ ಚಟುವಟಿಕೆಗಳಲ್ಲಿ ಮಗ್ನವಾಗಿದ್ದಾಗ ಕೆಲವೇ ನಿಮಿಷಗಳಲ್ಲಿ ಆರ್ಥಿಕತೆಯ ಲಾಂಛನದಂತಿದ್ದ ಅವಳಿ ಗೋಪುರಗಳು (ಟ್ವಿನ್ ಟವರ್) ಹೊತ್ತಿ ಉರಿದು ನೆಲಸಮವಾದವು. ಅಂದು ಮಡಿದವರ ನೆನಪಿನಲ್ಲಿ ಅಮೆರಿಕ ಪ್ರತಿ ವರ್ಷ ಶೋಕಾಚರಣೆ ಮಾಡುತ್ತಿದೆ.
ಅಲ್ ಖೈದಾ ಉಗ್ರ ಸಂಘಟನೆಯ 19 ಭಯೋತ್ಪಾದಕರು ಅಮೆರಿಕದ ನಾಲ್ಕು ವಿಮಾನಗಳನ್ನು ಅಪಹರಿಸಿದರು. ಅವುಗಳಲ್ಲಿ ಎರಡು ವಿಮಾನಗಳನ್ನು ನ್ಯೂಯಾರ್ಕ್ ನಗರದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳಿಗೆ ಡಿಕ್ಕಿ ಹೊಡೆದರು. ಮತ್ತೊಂದು ವಿಮಾನವನ್ನು ವರ್ಜೀನಿಯಾದ ಅರ್ಲಿಂಗ್ಟನ್ನಲ್ಲಿರುವ ಪೆಂಟಗಾನ್ ಮೇಲೆ ಬಡಿದರು. ವಾಷಿಂಗ್ಟನ್ ಡಿ.ಸಿ.ಯಲ್ಲಿನ ಅಮೆರಿಕ ಸಂಸತ್ ಭವನದ ಕಡೆಗೆ ಪ್ರಯಾಣ ಬೆಳೆಸಿದ್ದ ನಾಲ್ಕನೇ ವಿಮಾನವು ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರತಿರೋಧದ ಪರಿಣಾಮ ಪೆನ್ಸಿಲ್ವೇನಿಯಾದ ಖಾಲಿ ಜಾಗದ ಮೇಲೆ ಅಪ್ಪಳಿಸಿತು.
ಈ ಘೋರ ವಿಧ್ವಸಂಕ್ಕೆ 90ಕ್ಕೂ ಹೆಚ್ಚು ದೇಶಗಳ ಸುಮಾರು 2977 ಮಂದಿ ಬಲಿಯಾದರು. ನ್ಯೂಯಾರ್ಕ್ನಲ್ಲಿ 2753, ಪೆಂಟಗಾನ್ನಲ್ಲಿ 184 ಮತ್ತು ಫ್ಲೈಟ್ 93ರಲ್ಲಿ 40 ಮಂದಿ ಮೃತರಾದರು. ಆ ಸಮಯದಲ್ಲಿ ವಿಶ್ವ ವಾಣಿಜ್ಯ ಕೇಂದ್ರ ಸಂಕೀರ್ಣದಲ್ಲಿ 16,400 ರಿಂದ 18,000 ಜನರಷ್ಟು ಜನ ಇದ್ದರು ಎಂದು ಅಂದಾಜಿಸಲಾಗಿದೆ. 1941ರಲ್ಲಿ ನಡೆದ ಪರ್ಲ್ ಹಾರ್ಬರ್ ದಾಳಿಯಲ್ಲಿ ಸುಮಾರು 2,400ಕ್ಕೂ ಹೆಚ್ಚು ಅಮೆರಿಕನ್ನರು ಸಾವಿಗೀಡಾಗಿದ್ದರು. ಪ್ರಕೃತಿ ವಿಕೋಪಗಳು ಅಥವಾ ಮಹಾಮಾರಿಗಳ ಹೊರತು, ಇಷ್ಟು ಜೀವಹಾನಿ ಅಮೆರಿಕದ ಇತಿಹಾಸದಲ್ಲಿ ಇಂದಿಗೂ ಸಂಭವಿಸಿಲ್ಲ. ಒಂದು ದೇಶದ ವಿಮಾನಗಳನ್ನು ಹೈಜಾಕ್ ಮಾಡಿ, ಅವುಗಳನ್ನೇ ಕ್ಷಿಪಣಿಗಳ ರೀತಿ ಬಳಸಿ, ಅದೇ ದೇಶದ ಕಟ್ಟಡಗಳಿಗೆ ಡಿಕ್ಕಿ ಹೊಡೆದು ದಾಳಿ ನಡೆಸಿದ್ದು ಅಮೆರಿಕ ಇತಿಹಾಸದಲ್ಲಿ ಅದೇ ಮೊದಲು ಎಂದು ಇತಿಹಾಸಕಾರರು ಹೇಳುತ್ತಾರೆ.

ಅಮೆರಿಕ ಮೇಲೆ ಇಷ್ಟು ದೊಡ್ಡ ಪ್ರಮಾಣದ ದಾಳಿ ನಡೆಯಲು ಕಾರಣಗಳು ಗೌಣವಾಗೇನೂ ಉಳಿದಿಲ್ಲ. ಅದು ಏಕಾಏಕಿ ದಾಳಿಯೂ ಆಗಿರಲಿಲ್ಲ. ಆ 19 ಅಪಹರಣಕಾರರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಹೊತ್ತಿದ್ದ ಒಸಾಮಾ ಬಿನ್ ಲಾಡೆನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ದಶಕದ ಗುದ್ದಾಟಗಳಿಗೆ ಮುಖಾಮುಖಿಯಾಗುವ ವೇದಿಕೆಯಾಗಿತ್ತು. 1998ರ ಫೆಬ್ರವರಿಯಲ್ಲಿ, ಅಲ್ ಖೈದಾ ನಾಯಕ ಲಾಡೆನ್ ತನ್ನ ವಾದವನ್ನು ಸಾರ್ವಜನಿಕವಾಗಿ ಮಂಡಿಸಿದ್ದನು. “ಯಹೂದಿಗಳು ಮತ್ತು ಕ್ರುಸೇಡರ್ಗಳ ವಿರುದ್ಧ ಜಿಹಾದ್ಗಾಗಿ ವಿಶ್ವ ಇಸ್ಲಾಮಿಕ್ ಫ್ರಂಟ್ನ ಘೋಷಣೆ” ಎಂಬ ಶೀರ್ಷಿಕೆಯ ಅಲ್-ಖುದ್ಸ್ ಅಲ್-ಅರಬಿಯಲ್ಲಿ ಪ್ರಕಟವಾದ ಶಾಸನವು ಬಿನ್ ಲಾಡೆನ್ ಅಮೆರಿಕವನ್ನು ಏಕೆ ಶತ್ರುವೆಂದು ನೋಡುತ್ತಾನೆ ಮತ್ತು ಆ ಶತ್ರುವನ್ನು ಎದುರಿಸಲು ಹೇಗೆ ಹವಣಿಸುತ್ತಾನೆ, ಪ್ರಯತ್ನಿಸುತ್ತಾನೆ ಎಂಬುದನ್ನು ಸ್ಪಷ್ಟಪಡಿಸಿತು.
ನೇವಲ್ ವಾರ್ ಕಾಲೇಜ್ ರಿವ್ಯೂ ಪ್ರಕಾರ, ಬಿನ್ ಲಾಡೆನ್ ಹೊರಡಿಸಿರುವ ಈ ಶಾಸನವು ‘ಫತ್ವಾ’ ಅಥವಾ ಅಂತಿಮ ತೀರ್ಪನ್ನು ಹೊಂದಿತ್ತು. “ಅಮೆರಿಕನ್ನರು ಮತ್ತು ಅವರ ಮಿತ್ರರಾಷ್ಟ್ರಗಳನ್ನು, ನಾಗರಿಕ ಮತ್ತು ಮಿಲಿಟರಿ ಎರಡನ್ನೂ ಕೊಲ್ಲುವುದು, ಇದು ಸಾಧ್ಯವಿರುವ ಯಾವುದೇ ದೇಶದಲ್ಲಿ, (ಜೆರುಸಲೆಮ್ನಲ್ಲಿರುವ) ಅಕ್ಸಾ ಮಸೀದಿ ಮತ್ತು (ಮೆಕ್ಕಾದಲ್ಲಿರುವ) ಹರಾಮ್ ಮಸೀದಿಯನ್ನು ಅವರ ಹಿಡಿತದಿಂದ ಮುಕ್ತಗೊಳಿಸುವವರೆಗೆ ಮತ್ತು ಅವರ ಸೈನ್ಯಗಳು ಛಿದ್ರಗೊಂಡು, ಯಾವುದೇ ಮುಸ್ಲಿಮರನ್ನು ಬೆದರಿಸಲು ಅಸಮರ್ಥವಾಗಿ ಇಸ್ಲಾಮಿನ ಎಲ್ಲಾ ಭೂಮಿಗಳಿಂದ ನಿರ್ಗಮಿಸುವವರೆಗೆ”
ಅಂತಹ ಕ್ರಮಗಳಿಗೆ ಅಲ್ ಖೈದಾ ಮೂರು ಕಾರಣಗಳನ್ನು ಸಹ ನೀಡಿತ್ತು. ಮೊದಲನೆಯದಾಗಿ, ಸೌದಿ ಅರೇಬಿಯಾದಲ್ಲಿ ಅಮೆರಿಕದ ಪಡೆಗಳು. ಎರಡನೆಯದಾಗಿ, ಇರಾಕ್ ಮೇಲಿನ ನಿರ್ಬಂಧಗಳು, (ಅದು ಒಂದು ಮಿಲಿಯನ್ಗಿಂತಲೂ ಹೆಚ್ಚು ಜನರನ್ನು ಕೊಂದಿದೆ ಎಂದು ಅದು ಹೇಳಿಕೊಂಡಿತ್ತು). ಮೂರನೆಯದಾಗಿ, ಇಸ್ರೇಲ್ಗೆ ಅಮೆರಿಕದ ಬೆಂಬಲ.

ಯುನೈಟೆಡ್ ಸ್ಟೇಟ್ಸ್ ಮೇಲಿನ ಭಯೋತ್ಪಾದಕ ದಾಳಿಗಳ ಕುರಿತಾದ ರಾಷ್ಟ್ರೀಯ ಆಯೋಗದ ಮೂರನೇ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಲಾಡೆನ್ ಹೇಳಿಕೆ ದಾಖಲಿಸಲಾಗುತ್ತದೆ. ಅಮೆರಿಕದ ಮಾಜಿ ರಾಯಭಾರಿ ಡೆನ್ನಿಸ್ ರಾಸ್ 2003ರಲ್ಲಿ ಆ ಹೇಳಿಕೆ ಕುರಿತು ಹೇಳಿದ್ದು ಹೀಗೆ… “ಬಿನ್ ಲಾಡೆನ್ ತನ್ನ ಸಂಘರ್ಷವನ್ನು ಕೇವಲ ಮಿಲಿಟರಿ ನೀತಿಯ ದೃಷ್ಟಿಯಿಂದ ರೂಪಿಸಲಿಲ್ಲ. ಎಂಬತ್ತು ವರ್ಷಗಳ ಅವಮಾನದ ಬಗ್ಗೆ ಮಾತನಾಡಿದ್ದಾನೆ. ಮೊದಲನೆಯ ಮಹಾಯುದ್ಧದ ನಂತರ ಮುರಿದ ಭರವಸೆಗಳು ಮತ್ತು ವಸಾಹತುಶಾಹಿ ಆಡಳಿತಗಳು ಮತ್ತು ಗಡಿಗಳ ಹೇರಿಕೆಯನ್ನು ಸೂಚ್ಯವಾಗಿ ಉಲ್ಲೇಖಿಸುತ್ತಾನೆ. ಅರಬ್ ಮಧ್ಯಪ್ರಾಚ್ಯದ ಮಾನಸಿಕ ಭೂದೃಶ್ಯವು ಮುಖ್ಯವಾಗಿ ಪಶ್ಚಿಮದಿಂದ ಅಗಾಧವಾದ ದ್ರೋಹ ಮತ್ತು ಅವಮಾನದ ಭಾವನೆಯಿಂದ ರೂಪುಗೊಂಡಿದೆ” ಎಂದು ಹೇಳಿದ್ದಾರೆ.
ʼಬಿನ್ ಲಾಡೆನ್, ಅಮೆರಿಕದ ವಿದೇಶಾಂಗ ನೀತಿಯನ್ನು ಮುಸ್ಲಿಮರ ಮೇಲಿನ ದಬ್ಬಾಳಿಕೆ ಎಂದು ಪರಿಗಣಿಸಿದ್ದರು ಎಂಬುದನ್ನು ದೃಢಪಡಿಸುತ್ತದೆʼ ಎಂಬ ಹಾಶಿಮ್ ಅವರ ವಿಮರ್ಶೆಯನ್ನೂ ಇಲ್ಲಿ ಸ್ಮರಿಸಬಹುದು. ಬಿನ್ ಲಾಡೆನ್ ಹೇಳಿಕೊಳ್ಳುವಂತೆ, ಅಮೆರಿಕ ದ್ವಂದ್ವ ನೀತಿಗಳು, ಅವೈಜ್ಞಾನಿಕ, ವಸಾಹತುಶಾಹಿ ಆಡಳಿತ, ಗಡಿ ಹೇರಿಕೆ, ಅಮಾನವೀಯ ಆರ್ಥಿಕ ನಿರ್ಬಂಧಗಳು ಹಾಗೂ ಇಸ್ಲಾಮಿಕ್ ದೇಶಗಳೆಡೆಗೆ ಅಮೆರಿಕದ ನಿಲುವು ಎಲ್ಲವೂ ಸೇರಿ ಅವನ ದ್ವೇಷಕ್ಕೆ ಕಾರಣಗಳಾಗಿದ್ದವು.

ಈ ದಾಳಿಯ ನಂತರ ಅಮೆರಿಕವೇನೂ ಸುಮ್ಮನೆ ಕೂರಲಿಲ್ಲ. ಭಯೋತ್ಪಾದಕರ ಮಟ್ಟಹಾಕಲು ಅಫ್ಘಾನಿಸ್ತಾನ ಮತ್ತು ಇರಾಕ್ ಮೇಲೆ ದಾಳಿ ನಡೆಸಿತು. ಈ ಪ್ರತಿದಾಳಿಯಿಂದಾಗಿ ಸುಮಾರು 45 ಲಕ್ಷ ಜನ ಹತರಾದರೆಂದು ಅಂದಾಜು ಮಾಡಲಾಗಿದೆ.
ಈ ಉಗ್ರ ದಾಳಿಯ ಪರಿಣಾಮವನ್ನು ಸಾಮಾನ್ಯವಾಗಿ ನಾವು ʼಟ್ವಿನ್ ಟವರ್ಸ್ ಕುಸಿತʼ ಎಂದು ಮಾತ್ರ ನೆನಪಿಸಿಕೊಳ್ಳಬಹುದು. ಆದರೆ, ಆ ದಾಳಿಯ ತೀವ್ರತೆ ಕೇವಲ ಅವಳಿ ಗೋಪುರಗಳ ಧ್ವಂಸಕ್ಕೆ ಸೀಮಿತವಾಗಿರಲಿಲ್ಲ. ವಿಶ್ವ ವಾಣಿಜ್ಯ ಕೇಂದ್ರವು ಏಳು ಕಟ್ಟಡಗಳ ಸಮುಚ್ಛಯವಾಗಿತ್ತು. ಆ ದಿನ ಅವಳಿ ಗೋಪುರಗಳೊಂದಿಗೆ ಸಂಪೂರ್ಣ ಸಮುಚ್ಛಯ ನಾಶವಾಯಿತು. ಗೋಪುರಗಳು ನೆಲಸಮವಾದ ಕ್ಷಣಾರ್ಧದಲ್ಲಿ ಅವುಗಳ ಸಮೀಪವಿದ್ದ ಕಟ್ಟಡಗಳು ಭಾರೀ ಹಾನಿಗೊಳಗಾಗಿ, ಮರಿಯಟ್ ಹೋಟೆಲ್, ಪ್ಲಾಜಾ ಕಟ್ಟಡಗಳು, ಕಚೇರಿ ಸಂಕೀರ್ಣಗಳು ಹಾಗೂ ಸಂಜೆ ವೇಳೆಗೆ ಕುಸಿದ ಏಳನೇ ಗೋಪುರ ಸೇರಿ ಎಲ್ಲವೂ ಅಮೆರಿಕದ ಹಣಕಾಸು ಹೃದಯಭಾಗವನ್ನು ಕಂಪಿಸಿಬಿಟ್ಟವು.
ಈ ದಾಳಿಗಳು ಅಮೆರಿಕ ಹೃದಯ ಭಾಗದಲ್ಲಿ ನಡೆದಿದ್ದರೂ, ಅದರ ಪ್ರತಿಧ್ವನಿ ದೂರದ ಭಾರತದಲ್ಲೂ ಸ್ಪಷ್ಟವಾಗಿ ಕೇಳಿಸಿತು. ಆ ದಾಳಿಯ ಭಸ್ಮಾವಶೇಷಗಳ ನಡುವೆ ಹುಟ್ಟಿದ ʼಭಯೋತ್ಪಾದನೆ ವಿರೋಧಿ ಯುದ್ಧʼವು ಜಗತ್ತಿನ ರಾಜಕೀಯ, ಆರ್ಥಿಕತೆ ಮತ್ತು ಭದ್ರತಾ ತಂತ್ರಗಳನ್ನು ಬದಲಾಯಿಸಿದಂತೆ, ಭಾರತದ ಸ್ಥಿತಿಗತಿಗಳಲ್ಲೂ ಹೊಸ ತಿರುವು ತಂದಿತು.
ಭಾರತವು ದಶಕಗಳ ಕಾಲ ಉಗ್ರರ ದಾಳಿಗಳನ್ನು ಎದುರಿಸುತ್ತಿದ್ದ ರಾಷ್ಟ್ರ. ವಿಶೇಷವಾಗಿ ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಆಗುತ್ತಿದ್ದ ಪ್ರಾಯೋಜಿತ ಹಿಂಸಾಚಾರದ ಬಗ್ಗೆ ಭಾರತ ಜಗತ್ತಿಗೆ ಎಷ್ಟೇ ಎಚ್ಚರಿಕೆ ನೀಡಿದರೂ, ಅವುಗಳಿಗೆ ಅಗತ್ಯವಾದ ತೂಕ ಸಿಕ್ಕಿರಲಿಲ್ಲ. ಆದರೆ ಅಮೆರಿಕಾದ ನೆಲವನ್ನೇ ಉಗ್ರರು ಅಲ್ಲಾಡಿಸಿದ ನಂತರ, ವಿಶ್ವದ ದೃಷ್ಟಿಯಲ್ಲಿ ಭಾರತದ ವಾದಗಳಿಗೆ ಮಾನ್ಯತೆ ದೊರೆಯಲಾರಂಭಿಸಿತು ಎಂಬುದು ಭಾರತೀಯರ ವಾದ.
ಆದರೆ ಪಾಕಿಸ್ತಾನದ ಸ್ಥಿತಿ ಈ ನಡುವೆ ವಿಭಿನ್ನವಾಗಿತ್ತು. ಅಲ್ ಖೈದಾ ಹಾಗೂ ತಾಲಿಬಾನ್ಗೆ ಆಶ್ರಯ ನೀಡಿದ ಪಾಕಿಸ್ತಾನವನ್ನು ಅಮೆರಿಕಾ ತನ್ನ ಅಫ್ಘಾನಿಸ್ತಾನ ಯುದ್ಧಕ್ಕೆ ಪ್ರಮುಖ ಸಹಚರನನ್ನಾಗಿ ಮಾಡಿಕೊಂಡಿತು. ಇದರಿಂದ ಭಾರತಕ್ಕೆ ಎರಡು ಪ್ರಮುಖ ಸವಾಲುಗಳು ಎದುರಾದವು. ಒಂದು ಕಡೆ, ಪಾಕಿಸ್ತಾನದ ದ್ವಂದ್ವ ನೀತಿಗಳು ಜಗತ್ತಿಗೆ ಬಯಲಾಗುತ್ತಿದ್ದರೆ, ಮತ್ತೊಂದೆಡೆ ಅಮೆರಿಕದಿಂದ ಪಾಕಿಸ್ತಾನಕ್ಕೆ ದೊರೆಯುತ್ತಿದ್ದ ಆರ್ಥಿಕ ಮತ್ತು ಸೈನಿಕ ನೆರವು ಭಾರತದ ಭದ್ರತೆಯ ಮೇಲೆ ಇನ್ನೊಂದು ಆತಂಕವನ್ನುಂಟುಮಾಡಿತು.

11/9 ನಂತರ ಅಮೆರಿಕದಲ್ಲಿ ವಾಸಿಸುತ್ತಿದ್ದ ಭಾರತೀಯ ವಲಸಿಗರ ಜೀವನದಲ್ಲಿ ಸಾಕಷ್ಟು ಪರಿಣಾಮಗಳಾದವು. ದಾಡಿ ಬಿಟ್ಟಿದ್ದ ಮತ್ತು ಪಗಡಿ (ತಲೆಗೆ ಧರಿಸುವ ರುಮಾಲು) ಧರಿಸಿದ್ದ ಸಿಖ್ ಸಮುದಾಯದವರನ್ನು ಹಲವರು ತಪ್ಪಾಗಿ ಉಗ್ರರಂತೆ ಗ್ರಹಿಸಿದರು. ಇದರಿಂದ ವಲಸೆ ಸಮುದಾಯದಲ್ಲಿ ಭಯ ಮತ್ತು ಅಸುರಕ್ಷತೆಯ ಭಾವನೆ ಆವರಿಸಿತು.
ನ್ಯೂಯಾರ್ಕ್ನ ವಿಶ್ವ ವಾಣಿಜ್ಯ ಕೇಂದ್ರ ಧ್ವಂಸವಾದ ಪರಿಣಾಮ ಜಾಗತಿಕ ಆರ್ಥಿಕತೆಯ ಮೇಲೆ ಬಿದ್ದ ಹೊಡೆತ ಭಾರತವನ್ನೂ ಬಿಟ್ಟಿರಲಿಲ್ಲ. ಔಟ್ಸೋರ್ಸಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ಅಸ್ಥಿರತೆ ಮೂಡಿತು. ಅಮೆರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ತಂತ್ರಜ್ಞಾನ ವೃತ್ತಿಪರರು ಭವಿಷ್ಯದ ಬಗ್ಗೆ ಚಿಂತೆಪಡಬೇಕಾಯಿತು. ಆದರೆ, ದೀರ್ಘಾವಧಿಯಲ್ಲಿ ಭಾರತದ ಐಟಿ ಕ್ಷೇತ್ರ ತನ್ನ ಶಕ್ತಿಯಿಂದ ಮತ್ತೆ ಚೇತರಿಸಿಕೊಂಡಿತು.
ಖ್ಯಾತ ವಿಜ್ಞಾನ ಬರಹಗಾರ, ಲೇಖಕ ನಾಗೇಶ ಹೆಗಡೆ ಅವರು ʼಪ್ರಜಾವಾಣಿʼಗೆ ಬರೆದ ಲೇಖನವೊಂದರಲ್ಲಿ ಹೀಗೆ ಉಲ್ಲೇಖಿಸುತ್ತಾರೆ… “ಅಂತೂ ಈ ಜೋಡಿ ಕಟ್ಟಡದ ಕುಸಿತದಿಂದ ತಂತ್ರಜ್ಞಾನ ಪುಟನೆಗೆಯಿತು. ಅದರ ಲಾಭ ಎಲ್ಲ ದೇಶಗಳಿಗೂ ಸಿಗುವಂತಾಯಿತು. ಭಾರತಕ್ಕೆ ಏನು ಬಂತು? ಕುಸಿದ ಆ ಕಟ್ಟಡಗಳ ಲೋಹದ 950 ಟನ್ ಅವಶೇಷಗಳು ಬಂದವು! ತುಸು ಭಾಗ ಚೀನಾಕ್ಕೂ ಬಂತು. ಅಮೆರಿಕದ ಯಾರೂ ಅದನ್ನು ಬಳಸಲು ಸಿದ್ಧವಿರಲಿಲ್ಲ. ಏಕೆಂದರೆ, 70ರ ದಶಕದ ಕಟ್ಟಡಗಳ ನಿರ್ಮಾಣದಲ್ಲಿ ಬಳಸಲಾಗಿದ್ದ ಸಾಮಗ್ರಿಗಳಲ್ಲಿ ಸೀಸ, ಕಲ್ನಾರು, ಕ್ಯಾಡ್ಮಿಯಂ, ಆರ್ಸೆನಿಕ್ ಮುಂತಾದ ನಂಜುಕಾರಕ ದ್ರವ್ಯಗಳಿದ್ದವು. ವಿಕಿರಣ ಸೂಸುವ ಸಲಕರಣೆಗಳಿದ್ದವು. ಡಿಕ್ಕಿಯಿಂದಾಗಿ ವಿಮಾನ ಗಳಲ್ಲಿದ್ದ ತಲಾ 90 ಸಾವಿರ ಲೀಟರ್ ಇಂಧನ ದ್ರವಪಾತ ಭುಗಿಲೆದ್ದು ಲಕ್ಷಾಂತರ ಎಲೆಕ್ಟ್ರಾನಿಕ್ ಮತ್ತು ಲೋಹದ ವಸ್ತು, ಪ್ಲಾಸ್ಟಿಕ್ ಬಿಡಿಭಾಗಗಳೆಲ್ಲ ಕರಗಿ ಕಲಸಿದ್ದವು. ಅಮೆರಿಕದ ಯಾವ ರಾಜ್ಯದಲ್ಲೂ ಅಂಥ ವಿಷಪೂರಿತ, ವಿಕಿರಣಪೂರಿತ ತ್ಯಾಜ್ಯಗಳ ವಿಲೇವಾರಿಗೆ ಅವಕಾಶ ಇರಲಿಲ್ಲ. ಗುಜರಿ ವಸ್ತುಗಳಮಟ್ಟಿಗೆ ನಮ್ಮ ದೇಶ ‘ಜಾಗತಿಕ ಸುರಿಹೊಂಡ’ ಎನ್ನಿಸಿದೆ. ದೇಶ–ವಿದೇಶಗಳಿಂದ ನಾನಾ ಬಗೆಯ ತ್ಯಾಜ್ಯಗಳನ್ನು ತರಿಸಿಕೊಂಡು ಸಂಸ್ಕರಿಸಿ ವಿಲೇವಾರಿ ಮಾಡುವ ವ್ಯಾಪಕ ವ್ಯವಸ್ಥೆ ನಮ್ಮಲ್ಲಿದೆ. ಗುಜರಿ ಮರುಬಳಕೆಯ ಬಹು ಕೋಟ್ಯಧೀಶ ಉದ್ಯಮಿಗಳಿದ್ದಾರೆ. ಅಫ್ಘಾನಿಸ್ತಾನ, ಟರ್ಕಿ, ಇರಾಕ್ ಮತ್ತು ನಮ್ಮದೇ ಗಡಿಭಾಗಗಳಲ್ಲಿ ಶೆಲ್ ದಾಳಿ ನಡೆದಾಗ ಸಿಡಿದ ಅಥವಾ ಸಿಡಿಯದೇ ಇದ್ದ ಲೋಹಗಳೂ ಕದ್ದುಮುಚ್ಚಿ ನಮ್ಮ ಕುಲುಮೆಗಳಿಗೇ ಬರುತ್ತಿವೆ. ಶ್ರೀಮಂತ ದೇಶಗಳ ಪ್ಲಾಸ್ಟಿಕ್ ತ್ಯಾಜ್ಯಗಳು ಹಡಗನ್ನೇರಿ ಇಲ್ಲಿಗೆ ಬರುತ್ತವೆ. ಅದಕ್ಕೆ ನಿಷೇಧ ಹಾಕಲಾಗಿದೆಯಾದರೂ, ಕಳೆದ ವರ್ಷ 1,984 ಹಡಗು ಭರ್ತಿ ಪ್ಲಾಸ್ಟಿಕ್ ಬಂದಿದೆ. ಹಳೇ ಹಡಗುಗಳಂತೂ ಬರುತ್ತಲೇ ಇವೆ. ರಿಪೇರಿ ಸಾಧ್ಯವೇ ಇಲ್ಲ ಎಂಬಂಥ ಹಡಗುಗಳು ಸಪ್ತ ಸಾಗರಗಳಲ್ಲಿ ಎಲ್ಲೇ ನಿಂತಿದ್ದರೂ, ಅವುಗಳ ಅಂತಿಮ ಸಂಸ್ಕಾರ ಗುಜರಾತಿನ ಅಲಂಗ್ ಬಂದರಿನಲ್ಲೇ ಆಗುತ್ತದೆ (ಅಂಥ ಹಳೇ ಹಡಗುಗಳಲ್ಲಿ ನಂಜುಕಾರಕ ಸಾಮಗ್ರಿಗಳು, ಕೊಳೆತೈಲಗಳೂ ಇರುವುದರಿಂದ ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ ಅವನ್ನು ಸಮುದ್ರದಲ್ಲೇ ಮುಳುಗಿಸುವಂತಿಲ್ಲ). ಅಲಂಗ್ ಬಂದರನ್ನು ‘ಮುದಿ ಹಡಗುಗಳ ಜಾಗತಿಕ ಕಸಾಯಿಖಾನೆ’ ಎಂದೇ ಕರೆಯಲಾಗುತ್ತದೆ”
ಇದನ್ನೂ ಓದಿ: ಈ ದಿನ ಸಂಪಾದಕೀಯ | ಮೋದಿಯವರ ತಾಯಿ ಮಾತ್ರ ಹೆಣ್ಣೇ! ಸೋನಿಯಾರನ್ನು ಅವಮಾನಿಸುವುದು ಸರಿಯೇ?
ಇಲ್ಲಿ ಪ್ರಶ್ನೆ ಕೇವಲ ತ್ಯಾಜ್ಯ ನಿರ್ವಹಣೆಯ ಕುರಿತದ್ದಲ್ಲ. ಇದು ಜಾಗತಿಕ ಅಸಮತೋಲನ ಮತ್ತು ಆರ್ಥಿಕ ಶೋಷಣೆಯದ್ದು.
ಶ್ರೀಮಂತ ರಾಷ್ಟ್ರಗಳು ತಾವು ಸೃಷ್ಟಿಸಿದ ತ್ಯಾಜ್ಯವನ್ನು ʼಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳʼ ಮೇಲೆ ಹಾಕಿಬಿಡುತ್ತವೆ. ಇದರಿಂದ ಯಾರಿಗೆ ಲಾಭ ಎಂದರೆ, ಸಾವಿರ ಕೋಟಿ ಹೂಡಿ ಸಾವಿರ ಕೋಟಿ ಲಾಭ ಪಡೆಯುವ ದೊಡ್ಡ ಕಂಪನಿಗಳ ಓನರ್ಗಳಿಗೆ. ಆದರೆ ವಿಷ ವಾಯು, ಮಣ್ಣು ಮತ್ತು ನೀರಿನ ಮಾಲಿನ್ಯ, ಆರೋಗ್ಯ ಹಾನಿ ಎಲ್ಲವೂ ಬಡ ಕಾರ್ಮಿಕರು ಮತ್ತು ಸಾಮಾನ್ಯ ಜನರ ಪಾಲಿಗೆ. ಗುಜರಾತ್ನ ಅಲಂಗ್ ಬಂದರು ಇದಕ್ಕೆ ಸ್ಪಷ್ಟ ಉದಾಹರಣೆ. ಅದು ವಿಶ್ವದ ಅತಿ ದೊಡ್ಡ ಹಡಗು ಒಡೆಯುವ ಯಾರ್ಡ್. ಅದನ್ನು ʼಮುದಿ ಹಡಗುಗಳ ಜಾಗತಿಕ ಕಸಾಯಿಖಾನೆʼ, ʼಹಡಗು ಸ್ಮಶಾನʼ ಎಂದೂ ಕರೆಯಲಾಗುತ್ತದೆ. ಅಲ್ಲಿ ಹಡಗುಗಳ ಜೊತೆಗೆ ಕಾರ್ಮಿಕರ ಆರೋಗ್ಯ, ಭಾರತದ ಪರಿಸರ, ಭವಿಷ್ಯದ ಪೀಳಿಗೆಯ ಹಕ್ಕುಗಳೂ ಮುರಿದುಬೀಳುತ್ತವೆ ಎಂದರೆ ತಪ್ಪಾಗುವುದಿಲ್ಲ.
ಸೆಪ್ಟೆಂಬರ್ 11ರ ದಾಳಿ ಅಮೆರಿಕದಂತಹ ದೈತ್ಯ ದೇಶಗಳು ಭಾರತದಂತಹ ಬೆಳೆಯುತ್ತಿರುವ ರಾಷ್ಟ್ರಗಳನ್ನು ಯಾವ ದೃಷ್ಟಿಕೋನದಲ್ಲಿ ನೋಡುತ್ತವೆ ಎನ್ನುವುದನ್ನು ತೋರಿಸಿಕೊಟ್ಟಿತು. ಅಮೆರಿಕದ ಆರ್ಥಿಕ ತಾರತಮ್ಯ ನೀತಿಯನ್ನು ತ್ಯಾಜ್ಯ ಮರುಬಳಕೆ ಹೆಸರಿನಲ್ಲಿ ಭಾರತ ತನ್ನ ಹೆಗಲಿಗೆ ತಾನೇ ಹೊತ್ತುಕೊಂಡಿತು. ಇದು ಕೇವಲ ಗುಜರಿ ವ್ಯಾಪಾರವಲ್ಲ ಎಂಬುದನ್ನು ಸೂಕ್ಷ್ಮವಾಗಿ ಅರಿತುಕೊಳ್ಳುವ ಜರೂರತ್ತು ಖಂಡಿತ ಇದೆ. ಪ್ರಶ್ನೆ ಒಂದೇ: ಭಾರತ ಇನ್ನೂ ಜಗತ್ತಿನ ಮುಂದೆ ಕಸದ ಗುಂಡಿಯೇ? ಅಥವಾ ತನ್ನ ಭವಿಷ್ಯವನ್ನು ತಾನೇ ಕಟ್ಟಿಕೊಳ್ಳುವ ಸಮರ್ಥ ರಾಷ್ಟ್ರವೇ? 11/9ರ ಶೋಕಾಚರಣೆಯ ಜೊತೆಗೂಡಿ, ಈ ಪ್ರಶ್ನೆಯ ಉತ್ತರ ಹುಡುಕುವುದು ಭಾರತದ ಮುಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ.