ಕುಡಿಯುವ ನೀರಿನ ವಿಚಾರಕ್ಕೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಜೊತೆ ಜಗಳ ಮಾಡಿದ್ದ ವ್ಯಕ್ತಿಯನ್ನು ಬಿಲ್ ಕಲೆಕ್ಟರ್ನ ಮಗ ಕೊಲೆಗೈದಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪೋಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಪೋಲೇನಹಳ್ಳಿ ಗ್ರಾಮದ ನಿವಾಸಿ ಆನಂದ(55) ಎಂದು ಗುರುತಿಸಲಾಗಿದೆ. ಗ್ರಾ.ಪಂ ಬಿಲ್ ಕಲೆಕ್ಟರ್ ರಾಮಕೃಷ್ಣ ಎಂಬುವವರ ಮಗ ನಾಗೇಶ್ ಎಂಬಾತ ಈ ಕೃತ್ಯ ಎಸಗಿದವ ಎಂದು ತಿಳಿದುಬಂದಿದೆ.
ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ರಾಮಕೃಷ್ಣ ಎಂಬುವವರ ಮಗ ಆರೋಪಿ ನಾಗೇಶ್, ತನ್ನ ಪಿಕಪ್ ವಾಹನದಲ್ಲಿ ಡಿಕ್ಕಿ ಹೊಡೆದು ಆನಂದ್ನನ್ನು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಕೊಲೆಗೀಡಾದ ಆನಂದ್ ಹಾಗೂ ಗ್ರಾ.ಪಂ ಬಿಲ್ ಕಲೆಕ್ಟರ್ ರಾಮಕೃಷ್ಣ ನಡುವೆ ಬುಧವಾರ ಬೆಳಗ್ಗೆ ‘ಮನೆ ಮುಂದಿನ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಆದರು ಬಿಲ್ ಕಲೆಕ್ಟ್ ಮಾಡಲು ಬರುತ್ತಿದ್ದಾರೆ’ ಎಂಬ ವಿಚಾರವಾಗಿ ಜಗಳ ನಡೆದಿತ್ತು. ಆ ಬಳಿಕ ಮಧ್ಯಾಹ್ನ 1.30ರ ಸುಮಾರಿಗೆ ಆನಂದ್ ಅವರು, ರಾಮಕೃಷ್ಣ ಅವರ ಪತ್ನಿ ನಾಗಮಣಿಯೊಂದಿಗೆ, ʼನಿನ್ನ ಪತಿ ನನ್ನನ್ನು ಬೈದʼನೆಂದು ದೂರು ಹೇಳುತ್ತಿದ್ದುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಶ್ರೀನಿವಾಸಪುರ | ಬಲಾಢ್ಯರಿಂದ ನಿರಂತರ ಕಿರುಕುಳ: ದಯಾಮರಣಕ್ಕೆ ಅರ್ಜಿ ಹಾಕಿದ ದಲಿತ ಕುಟುಂಬ!
ಈ ಎಲ್ಲ ವಿಚಾರವನ್ನು ತಿಳಿದಿದ್ದ ರಾಮಕೃಷ್ಣನವರ ಮಗ ಆರೋಪಿ ನಾಗೇಶ್, ತನ್ನ ಪಿಕಪ್ ವಾಹನದಲ್ಲಿ ವೇಗವಾಗಿ ಹೋಗಿ ಗುದ್ದಿ ಆನಂದನ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೇ, ಘಟನಾ ಸ್ಥಳದಲ್ಲಿ ಮಚ್ಚು ಕೂಡ ಪತ್ತೆಯಾಗಿದ್ದು, ಪೊಲೀಸರು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಸಂಬಂಧ ಆರೋಪಿ ನಾಗೇಶ್ನನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
