ಕರ್ನಾಟಕದ ನಾಡ ಹಬ್ಬ ಎಂದೇ ಜಗದ್ವಿಖ್ಯಾತವಾಗಿರುವ ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಈ ಬಾರಿ ಕನ್ನಡದ ಹೆಸರಾಂತ ಸಾಹಿತಿ, ಅಂತಾರಾಷ್ಟ್ರೀಯ ಬೂಕರ್ ಬಹುಮಾನ ವಿಜೇತ ಲೇಖಕಿ ಬಾನು ಮುಷ್ತಾಕ್ ರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಡೆ ಸ್ವಾಗತಾರ್ಹ. ಆದರೆ ಅವರ ವಿರುದ್ಧ ಮಾಡುತ್ತಿರುವ ಮಾತಿನ ದಾಳಿ, ನಿಂದನೆ ಖಂಡನಾರ್ಹ. ದಸರಾ ಉದ್ಘಾಟನೆಯ ದಿನ ಅಹಿತಕರ ಘಟನೆ ನಡೆದರೆ ಅದಕ್ಕೆ ಕೋಮುವಾದಿ ಸಂಘಟನೆಗಳು, ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವವರೇ ಕಾರಣ. ಸರ್ಕಾರ ಬಾನು ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ವಿವಿಧ ಮಹಿಳಾ ಸಂಘಟನೆಗಳ ಮುಖಂಡರಿರುವ ʼನಾವೆದ್ದು ನಿಲ್ಲದಿದ್ದರೆʼ ಸಂಘಟನೆ ಒತ್ತಾಯಿಸಿದೆ.
ಗುರುವಾರ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಹೋರಾಟಗಾರರು, “ಬಾನು ಅವರ ಆಯ್ಕೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿರುವುದು ಹಾಸ್ಯಾಸ್ಪದ. ರಾಜ್ಯದಲ್ಲಿ ನೂರಾರು ಮಹಿಳೆಯರ ಮತ್ತು ಬಾಲಕಿಯರ ಅತ್ಯಾಚಾರ-ಹತ್ಯೆ ನಡೆದಿರುವಾಗ ಅವುಗಳಿಗೆ ಕಾರಣ ಯಾರೆಂದು ಪ್ರಶ್ನಿಸುವ ಬದಲು. ಕನ್ನಡ ನಾಡಿಗೆ ಹೆಮ್ಮೆಯನ್ನು ತಂದುಕೊಟ್ಟಿರುವ ಕನ್ನಡತಿಯನ್ನು ನಮ್ಮ ನಾಡ ಹಬ್ಬದ ಉದ್ಘಾಟನೆಗೆ ಆಯ್ಕೆ ಮಾಡಿರುವುದರ ವಿರುದ್ಧ ಪಿಐಎಲ್ ಹೂಡಿರುವುದು ಅವರ ಬೇಜವಾಬ್ದಾರಿತನವನ್ನೂ, ಆದ್ಯತೆಯನ್ನೂ ತೋರಿಸುತ್ತದೆ! ಮಹಿಳಾಪರ, ಜನಪರ ಹೋರಾಟಗಾರ್ತಿ ಮತ್ತು ಲೇಖಕಿ ಶ್ರೀಮತಿ ಬಾನು ಮುಪ್ತಾಕ್‌ರನ್ನು ಆಹ್ವಾನಿಸಿರುವುದರ ಕುರಿತು ಪ್ರಶಂಸೆ ಸೂಚಿಸುವುದರ ಬದಲು ಇದನ್ನೇ ಬಳಸಿ ಸಮಾಜದಲ್ಲಿ ಕೋಮುದ್ವೇಷ ಬಿತ್ತಲು ಮತೀಯ ಮೂಲಭೂತವಾದಿಗಳು ಹೊರಟಿರುವುದು ವಿಷಾದನೀಯ, ರಚನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕಿದ್ದ ರಾಜ್ಯದ ವಿರೋಧಪಕ್ಷವು ನಾಡ ಹಬ್ಬದ ಸಂಭ್ರಮದಲ್ಲೂ ಮತೀಯ ರಾಜಕಾರಣ ಮಾಡುತ್ತ ಸಮಾಜವನ್ನು ಧ್ರುವೀಕರಿಸಲು ಯತ್ನಿಸುತ್ತಿರುವುದನ್ನು ನಾವು ರಾಜ್ಯದ ಮಹಿಳೆಯರು ತಿರಸ್ಕರಿಸುತ್ತೇವೆ” ಎಂದರು.
ಹಿರಿಯ ಸಾಹಿತಿ ಡಾ ವಸುಂಧರಾ ಭೂಪತಿ, “ಸರ್ಕಾರದ ಆಯ್ಕೆಯನ್ನು ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ. ಹಿಂದೆ ನಿಸಾರ್ ಅಹಮದ್ ಅವರು ಉದ್ಘಾಟನೆ ಮಾಡಿದಾಗ ವಿರೋಧ ವ್ಯಕ್ತವಾಗಿರಲಿಲ್ಲ. ಈಗ ಬಾನು ಮುಷ್ತಾಕ್ ಅವರಿಗೆ ವಿರೋಧಿಸುತ್ತಿರುವುದು ಅವರು ಮಹಿಳೆ ಎಂಬ ಕಾರಣಕ್ಕಾ?” ಎಂದು ಪ್ರಶ್ನಿಸಿದರು.
“ಮಿರ್ಜಾ ಇಸ್ಮಾಯಿಲ್ ಕೂಡಾ ಅಂಬಾರಿಯಲ್ಲಿ ಕುಳಿತು ದಸರಾದಲ್ಲಿ ಪಾಲ್ಗೊಂಡಿದ್ದರು. ಹಿಂದೆ ಬರಗೂರು ರಾಮಚಂದ್ರಪ್ಪ ಅವರೂ ಉದ್ಘಾಟಕರಾಗಿದ್ದರು. ಅವರೂ ಉದ್ಘಾಟನೆಯಷ್ಟೇ ಮಾಡಿದ್ದರು. ಪೂಜೆ -ಧಾರ್ಮಿಕ ಆಚರಣೆ ಮಾಡಿರಲಿಲ್ಲ. ಅದು ಅವರವರ ಇಷ್ಟ. ಬಾನು ಅವರ ಒಂದು ಭಾಷಣದ ತುಣುಕನ್ನು ಇಟ್ಟುಕೊಂಡು ವಿರೋಧಿಸಲಾಗುತ್ತಿದೆ. ಆ ಮಾತನ್ನು ಅವರು ಆಡಿರುವುದಕ್ಕೆ ಒಂದು ಹಿನ್ನೆಲೆಯಿದೆ. ಆಗ ಹಾವೇರಿಯಲ್ಲಿ 2023ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿತ್ತು. ಅಲ್ಪಸಂಖ್ಯಾತರನ್ನು ಗೋಷ್ಠಿ, ಉದ್ಘಾಟನೆ, ಸಮಾರೋಪ ಈ ಎಲ್ಲದರಿಂದ ಆಚೆ ಇಡಲಾಗಿತ್ತು. ಇದನ್ನು ನಾವೆಲ್ಲ ಪ್ರಶ್ನೆ ಮಾಡಿದ್ದೆವು. ಆಗ ಪರ್ಯಾಯವಾಗಿ ಜನ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿತ್ತು. ಅಲ್ಲಿ ಬಾನು ಅವರು ಭಾಷಣ ಮಾಡುವಾಗ ಯಾಕೆ ನಮ್ಮನ್ನು ಹೊರಗಿಟ್ಟಿದ್ದೀರಿ ಎಂದು ಪ್ರಶ್ನೆ ಮಾಡುತ್ತಾ ಆ ಮಾತು ಹೇಳಿದ್ದರು. ಅವರು ಕನ್ನಡದಲ್ಲಿಯೇ ಬರೆದವರು. ಅವರೇ ಹೇಳಿಕೊಂಡಂತೆ ಉರ್ದು ಮಾತ್ರ ಗೊತ್ತಿದ್ದ ಅವರನ್ನು ಕನ್ನಡ ಶಾಲೆಗೆ ಸೇರಿಸಿದಾಗ, ಆರು ತಿಂಗಳೊಳಗೆ ಕನ್ನಡ ಕಲಿತರೆ ಮಾತ್ರ ಮುಂದುವರಿಸುವುದಾಗಿ ಶಾಲೆಯ ಮೇಷ್ಟ್ರು ಹೇಳಿದಾಗ, ಬಾನು ಅವರು ಮೂರೇ ತಿಂಗಳಲ್ಲಿ ಕನ್ನಡ ಬರೆಯುವುದು ಓದುವುದು ಕಲಿತಿದ್ದರಂತೆ. ಅವರಿಗೆ ಕನ್ನಡದ ಮೇಲೆ ಪ್ರೀತಿ, ಗೌರವ ಇದೆ. ಕನ್ನಡದಲ್ಲೇ ಕತೆಗಳನ್ನು ಬರೆದ ಅವರನ್ನು ಅವಮಾನಿಸುವುದು ಸರಿಯಲ್ಲ. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ” ಎಂದರು.
ಹಿರಿಯ ಲೇಖಕಿ ಡಾ ಆರ್ ಸುನಂದಮ್ಮ ಮಾತನಾಡಿ, “ಸಂವಿಧಾನದ ಆರ್ಟಿಕಲ್ 15ರಲ್ಲಿ ಲಿಂಗ, ಜಾತಿ, ಧರ್ಮ, ಪ್ರದೇಶ, ವರ್ಗ ಭಾಷೆಯಿಂದ ಈ ಎಲ್ಲ ತಾರತಮ್ಯಗಳಿಂದ ಮುಕ್ತವಾಗಿರಬೇಕು ಎಂದು ಹೇಳಿದ್ದಾರೆ. ಆದರೆ ಬಾನು ಅವರು ಧರ್ಮದಿಂದ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಲಿಂಗದ ಕಾರಣಕ್ಕಾಗಿ ಹಿಂಸೆಗೆ, ಮಾತಿನ ದಾಳಿಗೆ ಒಳಗಾಗುತ್ತಿದ್ದಾರೆ. ಅಂದ್ರೆ ನಾವು ಎರಡೆರಡು ಪಟ್ಟು ಹಿಂಸೆಯನ್ನು ಅವರ ಮೇಲೆ ಹೇರುತ್ತಿದ್ದೇವೆ. ಇದನ್ನು ನಾವು ವಿರೋಧಿಸಬೇಕಾಗುತ್ತದೆ. ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಗೆ ಪಾತಿನಿಧ್ಯವನ್ನು ನೀಡಬೇಕು. ಅದರಲ್ಲೂ ಅಲ್ಪಸಂಖ್ಯಾತ ಹೆಣ್ಣುಮಗಳಿಗೆ ಭೇದ ಭಾವ ಮಾಡದೇ ಅವಕಾಶ ನೀಡಬೇಕಾಗುತ್ತದೆ. ಇದು ಸಂವಿಧಾನಾತ್ಮಕವಾಗಿ ಸಿಗುವ ಮರ್ಯಾದೆ ಮತ್ತು ನಾವು ಕೊಡುವ ಮರ್ಯಾದೆ” ಎಂದರು.
ಹಿರಿಯ ಪತ್ರಕರ್ತೆ ಡಾ ಆರ್ ಪೂರ್ಣಿಮಾ ಮಾತನಾಡಿ, “ಮೊದಲಿಗೆ ನಾವು ನೆನಪಿಸಿಕೊಳ್ಳಬೇಕಿರುವುದು ಕರ್ನಾಟಕದ ಒಂದು ಸದ್ಭಾವನೆಯ ಪರಂಪರೆಯಲ್ಲೇ ಬೆಳೆದುಬಂದಿದೆ. ಜನ ಸಾಮಾನ್ಯರ ಜೀವನದಲ್ಲಿಯೂ ನಾವು ಗುರುತಿಸುತ್ತೇವೆ. ನಮ್ಮ ತಂದೆ ಸಂಪ್ರದಾಯಸ್ಥರಾಗಿದ್ರೂ ಮಕ್ಕಳಿಗೆ ಜ್ವರ ಬಂದ್ರೆ ಬಳೆಪೇಟೆಯಲ್ಲಿರುವ ಮಸ್ತಾನ್ ಸಾಬರ ದರ್ಗಾಕ್ಕೆ ಸಕ್ಕರೆ ಒದಗಿಸುತ್ತಿದ್ದರು. ಜ್ವರ ಕಡಿಮೆ ಆದ್ಮೇಲೆ ನಮ್ಮನ್ನೆಲ್ಲ ಅಲ್ಲಿಗೆ ಕರ್ಕೊಂಡು ಹೋಗ್ತಿದ್ರು. ಜನಜೀವನದಲ್ಲಿ ಸಾಮರಸ್ಯ ಅಷ್ಟು ಹಾಸು ಹೊಕ್ಕಾಗಿದೆ. ರಾಜಕಾರಣ, ಅಧಿಕಾರ ಶಾಹಿಯಲ್ಲಿ ಇರೋದು ಬೇರೆ. ಬಾನು ಕನ್ನಡತಿ, ಕನ್ನಡದ ಲೇಖಕಿ ಆಕೆಯನ್ನು ಯಾಕೆ ವಿರೋಧಿಸಬೇಕು” ಎಂದು ಪ್ರಶ್ನಿಸಿದರು.
ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಮಾತನಾಡಿ, “ಹಿಂದುತ್ವವಾದಿಗಳು, ಕೋಮುವಾದಿಗಳು ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುತ್ತಿರುವುದನ್ನು ವಿರೋಧಿಸುತ್ತಿದ್ದಾರೆ. ಇದನ್ನು ನಾವು ಕಟುವಾಗಿ ಖಂಡಿಸುತ್ತೇವೆ. ಸಂವಿಧಾನದ ಆಶಯದಲ್ಲಿ, ಸರ್ವಜನಾಂಗದ ಶಾಂತಿಯ ತೋಟ ಎಂಬ ವ್ಯವಸ್ಥೆಯಲ್ಲಿ ಬಾನು ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಅವರೇ ಉದ್ಘಾಟನೆ ಮಾಡಬೇಕು. ಇದು ಅವರ ಮನೆ ಹಬ್ಬ ಅಲ್ಲ, ನಾಡ ಹಬ್ಬ. ಕೆಲವರು ಅವರು ಕುಂಕುಮ ಇಡಬೇಕು, ಅರಿಶಿಣ ಹಚ್ಚಬೇಕು ಎಂದು ಹೇಳುತ್ತಿದ್ದಾರೆ. ಈಗಾಗಲೇ ಮತಾಂತರದ ವಿರುದ್ಧ ಕಾನೂನು ತಂದಿದ್ದಾರೆ. ಈಗ ಬಾನು ಅವರಿಗೆ ಬಲವಂತವಾಗಿ ಕುಂಕುಮ ಇಡಲು ಹೇಳುವವರಿಗೆ ಯಾವ ಕಾನೂನು ತರುವುದು ಎಂದು ಪ್ರಶ್ನಿಸಿದರು. ಅವರಿಗೆ ಕರ್ನಾಟಕದಲ್ಲಿ ಶಾಂತಿ ಕದಡುವುದೇ ಉದ್ದೇಶ. ಹಲವಾರು ಹಿಂದುತ್ವವಾದಿ ಸಂಘಟನೆಗಳು ಬಾನು ಅವರ ಮನೆಗೆ ಹೋಗಿ ಉದ್ಘಾಟನೆಗೆ ಒಪ್ಪಿಕೊಳ್ಳದಂತೆ ಒತ್ತಡ ಹೇರುತ್ತಿವೆ. ಸರ್ಕಾರ ಕೂಡಲೇ ಅವರಿಗೆ ಉನ್ನತ ಮಟ್ಟದ ಭದ್ರತೆ ಕೊಡಬೇಕು” ಎಂದು ಒತ್ತಾಯಿಸಿದರು.
ಜನವಾದಿ ಸಂಘಟನೆಯ ಗೌರಮ್ಮ ಮಾತನಾಡಿ, “ನಾಡ ಹಬ್ಬವನ್ನು ನಾಡಹಬ್ಬವನ್ನಾಗಿ ನಡೆಯಲು ಬಿಡಬೇಕು. ಬಾನು ಅವರು ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ, ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾದವರು. ಧರ್ಮ ಜಾತಿ ನೋಡಿಲ್ಲ. ತಮ್ಮ ಧರ್ಮದ ವಿರುದ್ಧವೂ ಕಟುವಾಗಿ ವಿಮರ್ಶೆ ಮಾಡಿದ್ದಾರೆ. ಹೆಣ್ಣುಮಕ್ಕಳ ಮೇಲೆ ಇಷ್ಟೊಂದು ದೌರ್ಜನ್ಯ ನಡೆಯುತ್ತಿದೆ. ಅದರ ಬಗ್ಗೆ ಮಾತನಾಡದ ಜನ ಬಾನು ಅವರು ವಿರುದ್ಧ ಮಾತನಾಡುತ್ತಾರೆ. ರಾಜ್ಯದಲ್ಲಿ ಆಗುತ್ತಿರುವ ಅಹಿತಕರ ಘಟನೆ ವಿರುದ್ಧ ಹೋರಾಟ ಮಾಡಬೇಕಾಗಿತ್ತು. ಆದರೆ ಗಲಭೆ ಸೃಷ್ಟಿಗೆ ಯತ್ನಿಸುತ್ತಿದ್ದಾರೆ. ಬಾನು ಅವರಿಗೆ ಏನಾದರೂ ಸಮಸ್ಯೆಯಾದರೆ ವಿರೋಧ ವ್ಯಕ್ತಪಡಿಸುತ್ತಿರುವವರೇ ಕಾರಣ ಎಂದು ಸರ್ಕಾರ ಗಮನಿಸಬೇಕು. ಧರ್ಮಸ್ಥಳದಲ್ಲಿ ಅಷ್ಟೊಂದು ಅಸಹಜ ಸಾವುಗಳಾಗಿವೆ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಅದರ ಬಗ್ಗೆ ಮಾತನಾಡದ ಸಚಿವೆ ಶೋಭಾ ಅವರು, ಬಾನು ಅವರು ಚಾಮುಂಡಿ ಬೆಟ್ಟ ಹತ್ತಬಾರದು ಎನ್ನಲು ಚಾಮುಂಡಿ ಬೆಟ್ಟವನ್ನು ಅವರು ಗುತ್ತಿಗೆ ತೆಗೆದುಕೊಂಡಿದ್ದಾರಾ ಎಂದು ಪ್ರಶ್ನೆ ಮಾಡಿದರು.
ಸಾಮಾಜಿಕ ಹೋರಾಟಗಾರರಾದ ಮಮತಾ ಯಜಮಾನ್, ಮಲ್ಲಿಗೆ ಸಿರಿಮನೆ, ಮಧು ಭೂಷಣ್ ಉಪಸ್ಥಿತರಿದ್ದರು.