ಸರ್ಕಾರದಿಂದ ಕಾರ್ಮಿಕರಿಗೆ ಉಚಿತವಾಗಿ ನೀಡಬೇಕಾಗಿದ್ದ ಟೂಲ್ ಕಿಟ್ ಮತ್ತು ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಕಾರ್ಮಿಕರಿಗೆ ವಿತರಿಸದೆ ಕಚೇರಿಯಲ್ಲಿ ದಾಸ್ತಾನು ಮಾಡಿಕೊಂಡಿದ್ದಾರೆ ಹಾಗೂ ರಾಜಸ್ಥಾನ ಮೂಲದವರಿಗೆ ನಕಲಿ ಕಾರ್ಮಿಕ ಕಾರ್ಡ್ ವಿತರಣೆ ಮಾಡಿದ್ದಾರೆ ಎಂದು ಶಿರಸಿ ಕಾರ್ಮಿಕ ಇಲಾಖೆ ವಿರುದ್ಧ ಭೀಮ ಘರ್ಜನೆ ಸಂಘಟನೆ ಗಂಭೀರ ಆರೋಪ ಮಾಡಿದೆ.
ಈ ಆರೋಪದ ಹಿನ್ನೆಲೆ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಅಮಿತ್ ಕುಮಾರ್ ನಾಗರಾಜ ಜೋಗಳೇಕರ ಹಾಗೂ ಸಂಘಟನೆಯ ಪ್ರಮುಖರು ಸೇರಿ, ಶಿರಸಿ ಕಾರ್ಮಿಕ ಇಲಾಖೆ ಕಚೇರಿಯ ಅಧಿಕಾರಿಗಳ ಆಲಸ್ಯ ಹಾಗೂ ಬೇಜವಾಬ್ದಾರಿತನವನ್ನು ವಿಡಿಯೋ ಮಾಡಿ ಸಾಕ್ಷಿ ಸಮೇತ ಹೊರ ಹಾಕಿದ್ದಾರೆ.
ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಅರ್ಹ ಕಾರ್ಮಿಕರಿಗೆ ನೀಡಬೇಕಿದ್ದ ಟೂಲ್ ಕಿಟ್ ಹಾಗೂ ಪೌಷ್ಟಿಕ ಆಹಾರದ ಸಾಮಗ್ರಿಗಳನ್ನು ಕಚೇರಿಯಲ್ಲೇ ಇಟ್ಟುಕೊಂಡಿರುವುದನ್ನು ಪತ್ತೆಹಚ್ಚಲಾಗಿದೆ. ಸರ್ಕಾರದಿಂದ ಕಾರ್ಮಿಕರಿಗೆ ನೀಡಬೇಕಾಗಿದ್ದ ಕಿಟ್ಗಳನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಸುಮಾರು ₹10 ಲಕ್ಷ ಮೌಲ್ಯದ ಈ ಸಾಮಾಗ್ರಿಗಳು ಒಟ್ಟು 622 ಕಾರ್ಮಿಕರಿಗೆ ತಲುಪಬೇಕಾಗಿತ್ತು. ಆದರೆ ಕೇವಲ 150 ಕಾರ್ಮಿಕರಿಗೆ ಮಾತ್ರ ವಿತರಿಸಿದ್ದಾರೆ. ಮೊದಲು ಎಲ್ಲ ಕಿಟ್ಗಳನ್ನು ವಿತರಿಸಿದ್ದೇವೆ ಎಂದು ಸುಳ್ಳು ಹೇಳಿ, ನಂತರ ಇದು ಹಳೆಯ ಅಧಿಕಾರಿಯ ಅವಧಿಯಲ್ಲಿ ಮಂಜೂರಾದ ವಸ್ತುಗಳು ಎಂದು ತಪ್ಪಿಸಿಕೊಳ್ಳಲು ಯತ್ನಿಸಿರುವುದಾಗಿ ಜೋಗಳೇಕರರು ಆರೋಪಿಸಿದ್ದಾರೆ.
ಸರ್ಕಾರದಿಂದ ಮಂಜೂರಾದ ರೋಡ್ ಕನ್ಸ್ಟ್ರಕ್ಷನ್ ಕಿಟ್ ಮತ್ತು ಟೈಲ್ಸ್ ಕಿಟ್ ಕೂಡ ಕಾರ್ಮಿಕರಿಗೆ ನೀಡದೆ ಮಚ್ಚಿಟ್ಟಿದ್ದಾರೆ. ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ತಡೆದಿದ್ದಾರೆ ಎಂಬ ಆರೋಪವೂ ಇದೆ.
ಇದನ್ನೂ ಓದಿ: ಉತ್ತರ ಕನ್ನಡ | ಭಾರತೀಯ ಸೇನೆ ಸೇರ ಬಯಸುವ ಹಿಂದುಳಿದ ವರ್ಗದ ಯುವಕರಿಗೆ ಉಚಿತ ತರಬೇತಿ
ಜಿಲ್ಲಾ ಉಪಾಧ್ಯಕ್ಷ ಅಮಿತಕುಮಾರ್ ಜೋಗಳೇಕರ ಮಾತನಾಡಿ, “ಈ ವಿಷಯವನ್ನು ಸರ್ಕಾರ ಹಾಗೂ ಸ್ಥಳೀಯ ಶಾಸಕರು ಗಂಭೀರವಾಗಿ ಪರಿಗಣಿಸಬೇಕು. ಉಳಿದಿರುವ ಕಿಟ್ಗಳ ಲೆಕ್ಕ ಪತ್ತೆಹಚ್ಚಿ, ಅರ್ಹ ಕಾರ್ಮಿಕರಿಗೆ ವಿತರಿಸಬೇಕು. ನಕಲಿ ಕಾರ್ಡ್ ವಿತರಣೆ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭೀಮ್ ಘರ್ಜನೆ ಸಂಘಟನೆಯ ರಾಜೇಶ್, ಅಕ್ಷಯ ದೋತ್ರೆ, ಸಂಕೇತ ರೇವಣಕರ, ಗುರುಮೂರ್ತಿ ಮಡಗಾಂವಕರ, ಪ್ರಜ್ವಲ್ ಚಂದಾವರ ಉಪಸ್ಥಿತರಿದ್ದರು.