ದಲಿತ ಎಂಬ ಕಾರಣಕ್ಕೆ ಪತ್ರಕರ್ತರೊಬ್ಬರನ್ನು ಸಾರ್ವಜನಿಕವಾಗಿ ಅವಮಾನಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ದೂರು ನೀಡಿದೆ.
ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ನೇತೃತ್ವದಲ್ಲಿ ಸಮಿತಿ ಸದಸ್ಯರು ಗುರುವಾರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಡಿಸಿಪಿ ಬಿಂಧು ಮಣಿ ಆರ್ ಅವರಿಗೆ ದೂರು ಪ್ರತಿಯನ್ನು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ʼವಾರ್ತಾಭಾರತಿʼ ಮೈಸೂರು ಜಿಲ್ಲಾ ವರದಿಗಾರ ಸತೀಶ್ ಕುಮಾರ್ ಎನ್.ಎಸ್. ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಉದ್ದೇಶದಿಂದ ಅವರನ್ನು ಸಾರ್ವಜನಿಕವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ, “ಸತೀಶನ ಮಾತಿಗೆ ಮೂರು ಕಾಸಿನ ಬೆಲೆ ಕೊಡಲ್ಲ, ಅವನ ಪ್ರಶ್ನೆಯನ್ನು ನಾನು ತೆಗೆದುಕೊಳ್ಳಲ್ಲ” ಎಂದು ಹೇಳಿ ಅವಮಾನಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಧರ್ಮಸ್ಥಳ, ದಸರಾ, ಗಣೇಶ ಮತ್ತು ಅಶೋಕ್ ಮೋಚಿ
ಇದರಿಂದ ದಲಿತರ ಭಾವನೆಗಳಿಗೆ ಧಕ್ಕೆಯಾಗಿದ್ದು ಕೂಡಲೇ ಪ್ರತಾಪ್ ಸಿಂಹ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಬಂಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ದಲಿತಪರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ತಿಳಿಸಿದ್ದಾರೆ.
ಇದೇ ವೇಳೆ ವಕೀಲ ತಿಮ್ಮಯ್ಯ, ಕಾಂಗ್ರೆಸ್ ರೈತ ಸೆಲ್ ಅಧ್ಯಕ್ಷ ಮಹದೇವ್, ದಲಿತ ಮಹಾಸಭ ಅಧ್ಯಕ್ಷ ಎಸ್.ರಾಜೇಶ್, ಮಧುಸೂದನ್ ಅರೇಪುರ, ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.