ಶಿವಮೊಗ್ಗ, “ನಾನು ಮುಸಲ್ಮಾನರ ಹಬ್ಬವನ್ನು ನೋಡಿ ಖುಷಿಯಾಗಿ ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಬೇಕು ಎಂದು ಹೇಳಿದ್ದೇನೆಯೇ ಹೊರತು ಬೇರೆ ಅರ್ಥದಲ್ಲಿ ಅಲ್ಲ. ನಾನು ಆಡಿರುವ ಮಾತನ್ನು ತಿರುಚಲಾಗಿದೆ” ಎಂದು ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಸ್ಪಷ್ಟನೆ ನೀಡಿದರು.
ಭದ್ರಾವತಿಯಲ್ಲಿ ಬುಧವಾರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, “ನಿಜವಾದ ಹಿಂದೂಗಳು ಅಂದರೆ ಕಾಂಗ್ರೆಸ್ಸಿಗರು. ಬಿಜೆಪಿ-ಜೆಡಿಎಸ್‌ನವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಮುಸಲ್ಮಾನರು ಮಾಡಿದ ಹಬ್ಬವನ್ನು ನೋಡಿ ಸಂತೋಷದಿಂದ ನಾನು ಮುಸಲ್ಮಾನಾಗಬೇಕೆಂದಿದ್ದೇನೆ. ನನ್ನ ಮಾತನ್ನು ಪೂರ್ಣವಾಗಿ ತಿರುಚಲಾಗಿದೆ. ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ” ಎಂದರು.
ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಪ್ರತಿಕ್ರಿಯೆ
ಪಾಕ್ ಪರ ಘೋಷಣೆ ಕೂಗಿದವರನ್ನು ಹಿಡಿದು ಒಳಗೆ ಹಾಕಲಿ
“ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಹಿಡಿದು ಬೂಟ್ನಲ್ಲಿ ಹೊಡೆದು ಒಳಗೆ ಹಾಕಿ ಎಂದು ನಾನು ಎಸ್ಪಿ ಅವರಿಗೆ ತಿಳಿಸಿದ್ದೇನೆ. ದೇಶದ್ರೋಹಿ ಕೆಲಸವನ್ನು ಯಾರೂ ಮಾಡಬಾರದು” ಎಂದು ಹೇಳಿದರು.ನಾನು 4 ಬಾರಿ ಶಾಸಕನಾಗಲು ಮುಸಲ್ಮಾನರ ಆಶೀರ್ವಾದ ಕಾರಣ.
“ನನಗೆ ನಾಲ್ಕು ಬಾರಿ ಶಾಸಕರಾಗಲು ಎಲ್ಲಾ ಧರ್ಮದವರೂ ಸಹಕಾರ ನೀಡಿದ್ದಾರೆ. ಆದರೆ, ನನ್ನ ಗೆಲುವಿಗೆ ಪ್ರಮುಖವಾಗಿ ಮುಸಲ್ಮಾನರು ಕಾರಣ ಎಂದರು.ನನ್ನ ಮಗನನ್ನು ರಾಜಕೀಯಕ್ಕೆ ತರಲು ಪಕ್ಷದ ಮುಖಂಡರು ಒಪ್ಪಿದ್ದಾರೆ: “ನನ್ನ ಮಗ ಗಣೇಶನನ್ನು ರಾಜಕೀಯಕ್ಕೆ ತರಬೇಕು ಎಂದು ನಾನು ಕೇಳಿಕೊಂಡಿದ್ದೇನೆ. ಜನರ ಆಶೀರ್ವಾದ ಇದ್ದರೆ ಅವನು ಶಾಸಕ ಅಥವಾ ಸಂಸದ ಆಗಬಹುದು. ಇದಕ್ಕೆ ನಮ್ಮ ಪಕ್ಷದ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ” ಎಂದು ತಿಳಿಸಿದರು.
“ನಾನು ಮಂತ್ರಿಸ್ಥಾನ ಕೇಳಿಲ್ಲ. ಅವರು ನನ್ನ ಹಿರಿತನ ನೋಡಿ ಅವಕಾಶ ಕೊಟ್ಟರೆ ಪಡೆಯುವೆ. ನನಗೆ ಅವಕಾಶ ಕೊಟ್ಟರೂ ಕೊಡದೇ ಇದ್ದರೂ ನಾನು ಯಾವಾಗಲೂ ಕಾಂಗ್ರೆಸ್ಸಿಗ” ಎಂದು ಹೇಳಿದರು.ಪಕ್ಷದ ತಾಲೂಕು ಅಧ್ಯಕ್ಷರು, ಪ್ರಚಾರ ಸಮಿತಿ ಅಧ್ಯಕ್ಷರು, ಭದ್ರವತಿ ನಗರಸಭೆ ಸದಸ್ಯರು ಈ ವೇಳೆ ಉಪಸ್ಥಿತರಿದ್ದರು.