ಬಸವಕಲ್ಯಾಣ ತಾಲ್ಲೂಕಿನ ಖಾಸಗಿ ಪದವಿ ಕಾಲೇಜುಗಳಲ್ಲಿ ಪ್ರತಿ ವರ್ಷಕ್ಕೆ ನಾಲ್ಕು ತಿಂಗಳು ಮಾತ್ರ ಪಠ್ಯ ಬೋಧನೆಗೆ ಅವಕಾಶ ನೀಡತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಬಸವಕಲ್ಯಾಣ ತಾಲೂಕು ಖಾಸಗಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ದೂರಿದ್ದಾರೆ.
ಈ ಸಂಬಂಧ ಸಂಘದ ಪದಾಧಿಕಾರಿಗಳು ಗುರುವಾರ ಬೀದರ್ ವಿಶ್ವವಿದ್ಯಾಲಯ ಕುಲಪತಿ ಬಿ.ಎಸ್.ಬಿರಾದರ್, ಮೌಲ್ಯಮಾಪನ ಕುಲಸಚಿವ ಪರಮೇಶ್ವರ ನಾಯಕ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ʼಬಸವಕಲ್ಯಾಣ ತಾಲ್ಲೂಕಿನ ಖಾಸಗಿ ಪದವಿ ಕಾಲೇಜುಗಳಲ್ಲಿ ಸುಮಾರು 150 ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪದವಿ ಕಾಲೇಜಿನ ಪ್ರತಿ ಸೆಮಿಸ್ಟರ್‌ಗೆ ನಾಲ್ಕು ತಿಂಗಳು ಬೋಧನೆ ಮಾಡಬೇಕು. ಆದರೆ, ಪ್ರತಿ ಸೆಮಿಸ್ಟರ್‌ಗೆ ಎರಡು ತಿಂಗಳು ಮಾತ್ರ ಉಪನ್ಯಾಸಕರನ್ನು ನೇಮಿಸಿಕೊಂಡು ಬೋಧಿಸುತ್ತಿದ್ದು, ಇದರಿಂದ ಉಪನ್ಯಾಸಕರು ಉಳಿದ ಎರಡು ತಿಂಗಳು ಕೆಲಸ ಇಲ್ಲದೆ ಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆʼ ಎಂದು ಹೇಳಿದರು.
ʼಪ್ರತಿ ವರ್ಷ ಒಂದು ಸೆಮಿಸ್ಟರ್‌ಗೆ ನಾಲ್ಕು ತಿಂಗಳು ಬೋಧನೆಗೆ ಅವಕಾಶ ನೀಡಬೇಕು. ಆದರೆ, ಇಲ್ಲಿನ ಕಾಲೇಜುಗಳಲ್ಲಿ ಎರಡು ತಿಂಗಳಲ್ಲೇ ಒಂದು ಸೆಮಿಸ್ಟರ್ ಪಠ್ಯ ಬೋಧನೆಗೆ ನೇಮಿಸಿಕೊಂಡು ಉಳಿದ ಎರಡು ತಿಂಗಳು ಕೆಲಸದಿಂದ ತೆಗೆಯುತ್ತಿದ್ದಾರೆ. ಇದರಿಂದ ವೃತ್ತಿಯನ್ನೇ ನಂಬಿದ ಉಪನ್ಯಾಸಕರು ಆರ್ಥಿಕ ತೊಂದರೆಗೆ ಒಳಗಾಗುತ್ತಿದ್ದಾರೆ. ಎರಡು ತಿಂಗಳಲ್ಲಿ ಪಠ್ಯಕ್ರಮ ಪೂರ್ಣಗೊಳ್ಳದ ಹಿನ್ನೆಲೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆʼ ಎಂದು ಹೇಳಿದರು.
ಉಪನ್ಯಾಸಕರಿಗೆ ವರ್ಷಕ್ಕೆ ಎಂಟು ತಿಂಗಳು ಬೋಧನೆಗೆ ನೇಮಿಸಿಕೊಳ್ಳಬೇಕು. ಪ್ರತಿ ಸೆಮಿಸ್ಟರ್ ನಾಲ್ಕು ತಿಂಗಳಂತೆ ವರ್ಷಕ್ಕೆ ಎಂಟು ತಿಂಗಳು ಬೋಧನಾ ಅವಧಿ ವಿಸ್ತರಿಸಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕೆಂದು ಖಾಸಗಿ ಪದವಿ ಕಾಲೇಜುಗಳಿಗೆ ಸೂಚಿಸಬೇಕು ಎಂದು ಅವರು ಕೋರಿದ್ದಾರೆ.
ಇದನ್ನೂ ಓದಿ : ಬೀದರ್ | ವರದಕ್ಷಿಣೆ ಕಿರುಕುಳ ಆರೋಪ : ಗಂಡ, ಮಾವ, ಅತ್ತೆ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್
ಈ ಸಂದರ್ಭದಲ್ಲಿ ಸಂಘದ ಪ್ರಫುಲ್ ಕುಮಾರ್, ಉಪಾಧ್ಯಕ್ಷ ಮಹೇಶ ಎಸ್., ಕಾರ್ಯದರ್ಶಿ ಆಕಾಶ ಖಂಡಾಳೆ, ಜಂಟಿ ಕಾರ್ಯದರ್ಶಿ ಡಾ.ಜಿಯಾವುದ್ದಿನ್, ಸದಸ್ಯ ಅನೀಲಕುಮಾರ್ ಮತ್ತಿತರರು ಇದ್ದರು.