ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ನಡೆದಿವೆ ಎನ್ನಲಾದ ಹಲವು ಅಕ್ರಮಗಳನ್ನು ಬಯಲಿಗೆಳೆದ ವ್ಯಕ್ತಿಯ ಮೇಲೆ ಕಾರು ಹರಿಸಿ, ಕೊಲೆ ಮಾಡಿದ ಆರೋಪದ ಮೇಲೆ ಡಿಎಂಕೆ ನಾಯಕ ವಿನಯಾಗಂ ಪಳನಿಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಸಂತ್ರಸ್ತನ ಹೆಸರು ಕೂಡ ಪಳನಿಸ್ವಾಮಿ. ಆತ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಅವರ ಮೇಲೆ ಆರೋಪಿ, ಡಿಎಂಕೆ ನಾಯಕ ವಿನಯಾಗಂ ಕಾರು ಹರಿಸಿ ಕೊಲೆ ಮಾಡಿದ್ದಾರೆ.
ಘಟನೆ ಬೆಳಕಿಗೆ ಬಂದ ಆರಂಭದಲ್ಲಿ ವಿನಯಾಗಂ ಮದ್ಯಪಾನ ಮಾಡಿದ್ದರು. ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದರಿಂದ ಪ್ರಕರಣ ನಡೆದಿದೆ. ಇದೊಂದು ‘ಹಿಟ್ ಅಂಡ್ ರನ್’ ಪ್ರಕರಣ ಎಂದು ಬಿಂಬಿಸಲಾಗಿತ್ತು. ಆದರೆ, ಮೃತರ ಕುಟುಂಬವು ಮೃತ ಪಳನಿಸ್ವಾಮಿ ಅವರು ವಿನಯಾಗಂ ಅವರ ಅಕ್ರಮವನ್ನು ಬಹಿರಂಗ ಪಡಿಸಿದ್ದರು. ಆ ಕಾರಣದಿಂದಲೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಿ, ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆಯು ಕೊಲೆ ಪ್ರಕರಣವಾಗಿ ತಿರುವು ಪಡೆಯಿತು.
ಆರೋಪಿಯನ್ನು ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಲೇಖನ ಓದಿದ್ದೀರಾ?: ಸಿ.ಪಿ ರಾಧಾಕೃಷ್ಣನ್ | ಸಂಘ ಪರಿವಾರವನ್ನು ಬಿಟ್ಟು ದೇಶ, ಸಂವಿಧಾನಕ್ಕೆ ನಿಷ್ಠವಾಗಿರಲಿ
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುವಂತೆ; “ಖಾಸಗಿ ರಸ್ತೆಯನ್ನು ಪಂಚಾಯತಿಗೆ ಹಸ್ತಾಂತರಿಸದೇ ಇರುವ ಬಗ್ಗೆ ವಿನಯಾಗಂ ವಿರುದ್ಧ ಪಳನಿಸ್ವಾಮಿ (ಬಲಿಪಶು) ದೂರು ನೀಡಿದ್ದರು. ಕೃತ್ಯಕ್ಕೆ ಇದೇ ಕಾರಣವೆಂದು ಮೇಲ್ನೋಟಕ್ಕೆ ಕಾಣುತ್ತದೆ. ಇದಲ್ಲದೆ, ಇನ್ನೂ ಹಲವು ಅಕ್ರಮಗಳನ್ನು ಪಳನಿಸ್ವಾಮಿ ಬಯಲಿಗೆಳೆದಿದ್ದರು. ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿರುವುದಾಗಿ ‘ಎನ್‌ಡಿ ಟಿವಿ’ ವರದಿ ಮಾಡಿದೆ.
ರಾಜ್ಯದಲ್ಲಿ ಅಪರಾಧ ಹೆಚ್ಚಳ ಮತ್ತು ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ ಎಂದು ಆಡಳಿತಾರೂಢ ಡಿಎಂಕೆ ವಿರುದ್ಧ ವಿರೋಧ ಪಕ್ಷಗಳುಆರೋಪಿಸುತ್ತಿವೆ. ಆದರೆ, ಈ ಆರೋಪಗಳನ್ನು ಆಡಳಿತ ಪಕ್ಷ ಮತ್ತು ರಾಜ್ಯ ಪೊಲೀಸರು ನಿರಾಕರಿಸಿದ್ದಾರೆ. ಕಾನೂನು-ಸುವ್ಯವಸ್ಥೆಯನ್ನು ಉಲ್ಲಂಘಿಸುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.