ವೈದ್ಯಕೀಯ ಕಾಲೇಜಿನ ಉದ್ದೇಶಿತ ಪಿಪಿಪಿ ಮಾದರಿಯನ್ನು ಕೈಬಿಟ್ಟು ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಘಟಕ ಆಗ್ರಹಿಸಿದೆ.
ಪ್ರತಿಭಟನಾಕಾರರು ನಗರದ ಶಿವಾಜಿ ಸರ್ಕಲ್ ವೃತ್ತದಿಂದ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, “ವಿಜಯಪುರ ಜಿಲ್ಲೆಯು ಕಿತ್ತು ತಿನ್ನುವ ಬಡತನ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಈಗಾಗಲೇ ನಲುಗುತ್ತಿದೆ. ಇಲ್ಲಿನ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಜೊತೆಗೆ ಇಲ್ಲಿನ ಜನರ ಆರೋಗ್ಯ ಪರಿಸ್ಥಿತಿ ಅಷ್ಟೊಂದು ಗುಣಮಟ್ಟದ್ದೂ ಆಗಿಲ್ಲ. ಇಂಥ ವಿಷಮ ಪರಿಸ್ಥಿತಿಯಿಂದಾಗಿ ಸರ್ಕಾರಿ ಆಸ್ಪತ್ರೆಯೂ ರೋಗಿಗಳ ಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ಸಂದರ್ಭದಲ್ಲಿ ಸರ್ಕಾರವು ಪಿಪಿಪಿ ಮಾದರಿಯ ವೈದ್ಯ ಕಾಲೇಜನ್ನು ಸ್ಥಾಪನೆ ಮಾಡಲು ಹೊರಟಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ” ಎಂದು ಆರೋಪಿಸಿದರು.
“ಜಿಲ್ಲೆಗೆ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂಬುದು ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದೆ. ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ” ಎಂದು ಎಚ್ಚರಿಸಿದ ಅವರು, ಜಿಲ್ಲೆಯ ಸಾಹಿತಿಗಳು ಲೇಖಕರು ಚಿಂತಕರು ಕೂಡ ಒತ್ತಾಯಿಸುತ್ತಿರುವುದು ಅದನ್ನೇ. ಸರ್ಕಾರಿ ಆಸ್ಪತ್ರೆಗೆ ಸೂಕ್ತವಾದ ಸುಮಾರು 149 ಎಕರೆಗೆ ಹೆಚ್ಚು ಸ್ಥಳಾವಕಾಶ ಸರ್ಕಾರ ಆಸ್ಪತ್ರೆ ಆವರಣದಲ್ಲಿದೆ. ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆಯೂ ಇದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡ (ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ನಿಯೋಗ ವಿಜಯಪುರಕ್ಕೆ ಆಗಮಿಸಿ ಸ್ಥಳ ತೋರಿಸಿ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಶಿಫಾರಸ್ಸು ಮಾಡಿತ್ತು. ಜಿಲ್ಲೆಯ ಜನರ ಹೋರಾಟ ಮತ್ತು ಆಗ್ರಹದಿಂದಾಗಿ ಇದೀಗ ತಮ್ಮ ಸರ್ಕಾರವು ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಆರಂಭಿಸಲು ತಾತ್ವಿಕವಾಗಿ ಒಪ್ಪಿಕೊಂಡಿದೆ. ಆದರೆ ದುರಾದೃಷ್ಟ ಪಿಪಿಪಿ ಮಾದರಿಯ ಕಾಲೇಜು ನಮ್ಮ ಜಿಲ್ಲೆಗೆ ಬೇಡವೇ ಬೇಡ” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ಮಹಿಳಾ ವಿವಿ; ಪಿಜಿ ಕೋರ್ಸ್‌ಗಳ ಪ್ರವೇಶಾತಿ ದಿನಾಂಕ ವಿಸ್ತರಣೆ
ಈ ವೇಳೆ ವಿಜಯಪುರದ ಹಿರಿಯ ಪತ್ರಕರ್ತ ಅನಿಲ ಹೊಸಮನಿ, ಹಿರಿಯ ನ್ಯಾಯವಾದಿ ವಿದ್ಯಾವತಿ ಅಂಕಲಿಗಿ, ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಂಚಾಲಕ ಅಕ್ಷಯ ಕುಮಾರ ಅಜಿಮನಿ, ಉಪಾಧ್ಯಕ್ಷ ಮಾದೇಶ ಚಲವಾದಿ ಹಾಗೂ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.