ಕೋಟಿಗಟ್ಟಲೆ ಅದಿರು ಅಕ್ರಮ | ಕ್ರಮ ಕೈಗೊಳ್ಳದ ಸರ್ಕಾರ, ಸ್ವಪಕ್ಷದ ನಾಯಕರಿಂದಲೇ ತೀವ್ರ ಬೇಸರ, ಸಿಎಂಗೆ ಪತ್ರ

Date:

Advertisements

ಹೆಚ್ ಕೆ ಪಾಟೀಲ್‌ ಅವರ ನೇತೃತ್ವದಲ್ಲಿ ಅಕ್ರಮ ಗಣಿಗಾರಿಕೆ ವಿಚಾರ ಅಧ್ಯಯನ ಮಾಡಿ ವರದಿ ಮಾಡಲು ರಾಜ್ಯ ಸಂಪುಟ ಉಪ ಸಮಿತಿಯನ್ನು ನೇಮಿಸಿದ್ದು ಬಿಟ್ಟರೆ, ಇಲ್ಲಿಯವರೆಗೂ ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸ್ವಪಕ್ಷದ ಸರ್ಕಾರದ ವಿರುದ್ಧವೇ ಪಕ್ಷದ ಹಿರಿಯ ನಾಯಕರು, ಮಾಜಿ ಮಾಜಿ ಶಾಸಕರು ಹಾಗೂ ಪಕ್ಷದ ಜೊತೆ ಗುರುತಿಕೊಂಡ ವಕೀಲರ ನಿಯೋಗವೊಂದು ತೀವ್ರ ಬೇಸರ ವ್ಯಕ್ತಪಡಿಸಿದೆ.

ಹೆಚ್ ಕೆ ಪಾಟೀಲ್‌ರವರ ನೇತೃತ್ವದ ಉಪ ಸಮಿತಿ ನೀಡಿರುವ ವರದಿ ಆಧಾರದ ಮೇಲೆ ತಪ್ಪಿತಸ್ಥರು ಯಾವುದೇ ಪಕ್ಷದವರಾಗಿರಲಿ, ಯಾವುದೇ ಅಧಿಕಾರಿಗಳಾಗಿರಲಿ, ಯಾವುದೇ ಸಂಸ್ಥೆಗಳಿಗೆ ಸೇರಿದವರಾಗಿರಲಿ ಅಂತಹ ಭ್ರಷ್ಟರ ವಿರುದ್ಧ ಕೂಡಲೇ ರಾಜ್ಯ ಸರ್ಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ನ ಹಿರಿಯ ನಾಯಕರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್‌ ಹಾಗೂ ಗಣಿಗಾರಿಕೆ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರಿಗೆ ಕೆಪಿಸಿಸಿ ಲೆಟರ್‌ ಹೆಡ್‌ನಲ್ಲಿ ಸಹಿ ಮಾಡಿ ಪತ್ರ ಬರೆದಿದ್ದಾರೆ.

“ಲೂಟಿ ಮಾಡಿರುವ ಸಂಪತ್ತಿನ ಹಣವನ್ನು ಲೂಟಿಕೋರ ತಪ್ಪಿತಸ್ಥರಿಂದ ವಸೂಲಿ ಮಾಡಲು ರಾಜ್ಯ ಸರ್ಕಾರ Section 21 of The Mines & Minerals (Development and Regulation) Act, 1957 ಪ್ರಕಾರ ಕ್ರಮ ಜರುಗಿಸಲು ವಿಶೇಷ ಸೆಲ್ ರಚಿಸಿ ಕ್ರಮ ಜರುಗಿಸಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ವಿಶೇಷ ತನಿಖಾ ದಳ (ಎಸ್.ಐ.ಟಿ) ರಚಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಬೇಕು” ಎಂದು ಆಗ್ರಹಿಸಿದ್ದಾರೆ.

ಪತ್ರಕ್ಕೆ ವಿ ಎಸ್‌ ಉಗ್ರಪ್ಪ, ಬಿ ಎಲ್‌ ಶಂಕರ್‌, ಹೆಚ್‌ ಎಂ ರೇವಣ್ಣ, ರಾಣಿ ಸತೀಶ್‌, ಜಯಪ್ರಕಾಶ್‌ ಹೆಗ್ಡೆ, ವಿ ಆರ್‌ ಸುದರ್ಶನ್‌, ಸಿ ಎಸ್‌ ದ್ವಾರಕಾನಾಥ್‌, ಡಾ. ಎಲ್‌ ಹನುಮಂತಯ್ಯ, ವಿನಯ್‌ ಕುಮಾರ್‌ ಸೊರಕೆ ಸೇರಿದಂತೆ ಇತರರು ಸಹಿ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಧರ್ಮಸ್ಥಳ, ದಸರಾ, ಗಣೇಶ ಮತ್ತು ಅಶೋಕ್ ಮೋಚಿ

ಪತ್ರದಲ್ಲಿ ಏನಿದೆ?

ಬಳ್ಳಾರಿ, ತುಮಕೂರು, ಚಿತ್ರದುರ್ಗ ಹಾಗೂ ಇನ್ನಿತರ ಭಾಗಗಳಲ್ಲಿ ಅತ್ಯಂತ ಉತ್ಕೃಷ್ಟವಾದ ಕಬ್ಬಿಣದ ಅದಿರು ಲಭ್ಯವಾಗುತ್ತಿರುವುದನ್ನು ಗಮನಿಸಿದ ಕೆಲವು ಗಣಿ ಮಾಲೀಕರು 2000 ಇಸವಿಯಿಂದ ಅಕ್ರಮವಾಗಿ ಗಣಿಗಾರಿಕೆ ಮಾಡಿ ಲೂಟಿ ಮಾಡುತ್ತಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್ ಪಕ್ಷದ ನಾಯಕತ್ವವು ವಿಧಾನ ಪರಿಷತ್ತಿನಲ್ಲಿ ಹೋರಾಟ ಮಾಡಿ ಹಗರಣವನ್ನು ನ್ಯಾಯಮೂರ್ತಿ ಯು.ಎಲ್. ಭಟ್ ಆಯೋಗಕ್ಕೆ ತನಿಖೆ ಮಾಡಲು ಒಪ್ಪಿಸಲಾಗಿತ್ತು.

ನ್ಯಾಯಮೂರ್ತಿ ಯು.ಎಲ್. ಭಟ್‌ರವರ ಆಯೋಗವು ಇದೊಂದು ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಹಗರಣವಾಗಿರುವುದರಿಂದ ಸಿಬಿಐ ತನಿಖೆಗೆ ವಹಿಸುವುದು ಸೂಕ್ತವೆಂದು ಆದೇಶ ಮಾಡಿತ್ತು. ಆದರೆ ಅದನ್ನು ಅಂದಿನ ರಾಜ್ಯ ಸರ್ಕಾರ ಒಪ್ಪಲಿಲ್ಲ. ಅದನ್ನು ವಿರೋಧಿಸಿ ವಿಧಾನ ಪರಿಷತ್ತಿನಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ನಾಯಕತ್ವ ಮಾಡಿದ ಹೋರಾಟದಿಂದ ಅಂದಿನ ಸರ್ಕಾರ ಸದರಿ ಹಗರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು.

ಆ ಮಧ್ಯೆ ಕಾಂಗ್ರೆಸ್ ಪಕ್ಷದಿಂದ ‘ಸತ್ಯ ಶೋಧನಾ ಸಮಿತಿ’ಯನ್ನು ವಿ.ಎಸ್. ಉಗ್ರಪ್ಪನವರ ನೇತೃತ್ವದಲ್ಲಿ ಬಸವರಾಜ ರಾಯರೆಡ್ಡಿ. ಅಮರೇಗೌಡ ಬಯ್ಯಾಪುರ, ವಿ.ಮುನಿಯಪ್ಪ, ಕೆ. ಶಿವಮೂರ್ತಿ ನಾಯಕ್‌ರವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯು ಅಕ್ರಮ ಗಣಿಗಾರಿಕೆಯ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ. ದಿನಾಂಕ: 16-11-2008 ರಂದು ವರದಿ ನೀಡಿ. “ಹತ್ತಾರು ಸಾವಿರ ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ಕೆಲವರು ಲೂಟಿ ಮಾಡಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ. ಆದ್ದರಿಂದ ಅಕ್ರಮ ಗಣಿಗಾರಿಕೆ ವಿಷಯವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ ರಾಜ್ಯದ ಸಂಪತ್ತನ್ನು ಉಳಿಸಬೇಕು” ಎಂದು ಸಮಿತಿಯು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಯಿತು.

ಅದೇ ರೀತಿ ಲೋಕಾಯುಕ್ತರಾಗಿದ್ದ ಎನ್. ಸಂತೋಷ್ ಹೆಗ್ಡೆಯವರೂ ಸಹ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸಿ ದಿನಾಂಕ: 18-12-2008 ರಂದು ಪ್ರಾಥಮಿಕ ವರದಿಯನ್ನು ಹಾಗೂ ದಿನಾಂಕ: 27-7-2011 ರಂದು ತಮ್ಮ ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿರುತ್ತಾರೆ. ಆ ವರದಿಗಳಲ್ಲೂ ಸಹ ಕೆಲ ರಾಜಕಾರಣಿಗಳು, ಕೆಲ ಅಧಿಕಾರಿಗಳು ಹಾಗೂ ಅಕ್ರಮ ಗಣಿ ಮಾಲೀಕರು ಸೇರಿ ಹತ್ತಾರು ಸಾವಿರ ಕೋಟಿ ಬೆಲೆ ಬಾಳುವ ಕಬ್ಬಿಣದ ಅದಿರನ್ನು ಲೂಟಿ ಮಾಡಿರುವುದನ್ನು ಬೆಳಕಿಗೆ ತಂದರು. ಅಷ್ಟೇ ಅಲ್ಲದೆ, ಅದರಲ್ಲಿ ಭಾಗಿಯಾಗಿರುವ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗಣಿ ಮಾಲೀಕರುಗಳ ವಿರುದ್ಧ ಕ್ರಮ ಜರುಗಿಸಲು ಶಿಫಾರಸ್ಸು ಮಾಡಿ, ‘ಬಳ್ಳಾರಿಯ ರಿಪಬ್ಲಿಕ್’ನ್ನು ಧ್ವಂಸ ಮಾಡಲು ಬಯಸಿದ್ದರು.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಆರ್.ವಿ. ದೇಶಪಾಂಡೆ, ಡಾ. ಜಿ. ಪರಮೇಶ್ವರ್ ಹಾಗೂ ಇನ್ನಿತರ ನಾಯಕರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ದಿನಾಂಕ: 25-7-2011 ರಿಂದ 9-8-2011 ರವರೆಗೆ ಬೆಂಗಳೂರಿನಿಂದ ಬಳ್ಳಾರಿಗೆ 325 ಕಿ.ಮೀ. ಪಾದಯಾತ್ರೆಯನ್ನು ನಡೆಸಿ. ದಿನಾಂಕ: 9-8-2011 ರಂದು ಬಳ್ಳಾರಿಯ ಸ್ಟೇಡಿಯಂನಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಲಾಯಿತು. ಆ ಸಭೆಯಲ್ಲಿ ಕಿಕ್ಕಿರಿದು ಸೇರಿದ್ದ ಲಕ್ಷಾಂತರ ಜನರನ್ನುದ್ದೇಶಿಸಿ ಮಾತನಾಡಿದ ಪಕ್ಷದ ಎಲ್ಲಾ ನಾಯಕರು, “ನಾವು ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಲೂಟಿಕೋರರ ಮೇಲೆ ಕ್ರಮ ಜರುಗಿಸುತ್ತೇವೆ. ಅಂಥವರನ್ನು ಜೈಲಿಗೆ ಅಟ್ಟುತ್ತೇವೆ. ಅಂತಹವರಿಂದ ಲೂಟಿಯ ಸಂಪತ್ತಿನ ಹಣವನ್ನು ವಸೂಲಿ ಮಾಡಲು ಕ್ರಮ ಜರುಗಿಸುತ್ತೇವೆ ಹಾಗೂ ಬಳ್ಳಾರಿಯ ರಿಪಬ್ಲಿಕ್‌ನ್ನು ಧ್ವಂಸ ಮಾಡುತ್ತೇವೆ ಎಂದು ಸಾರ್ವಜನಿಕವಾಗಿ ಪ್ರತಿಜ್ಞೆಯನ್ನು ಮಾಡಿದ್ದರು.

ಹೆಚ್‌ ಕೆ ಪಾಟೀ‌ಲ್‌ ಮಿತಿಯು ಸದರಿ ಅಕ್ರಮ ಗಣಿಗಾರಿಕೆ ಬಗ್ಗೆ ದೀರ್ಘ ಕಾಲದ ಅಧ್ಯಯನ ಮಾಡಿ, ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ವರದಿಯನ್ನು ನೀಡಿರುತ್ತದೆ. ಆ ವರದಿಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು, ಕಂಪನಿಗಳ ಹಾಗೂ ಇನ್ನಿತರ ವಿವರಗಳನ್ನು ಮತ್ತು ಸಂಪತ್ತಿನ ಲೂಟಿಯ ಮೊತ್ತ 1.0 ಲಕ್ಷ ಕೋಟಿಗೂ ಮೀರಿರುವುದನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ವರದಿಯನ್ನು ನೀಡಿರುತ್ತದೆ. ಸದರಿ ವರದಿಯನ್ನು ರಾಜ್ಯ ಸರ್ಕಾರದ ಮಂತ್ರಿಮಂಡಲ ಇತ್ತೀಚೆಗೆ ಅಂಗೀಕರಿಸಿದೆ.

ಈ ಎಲ್ಲ ವರದಿಗಳಿಂದ ಸ್ಪಷ್ಟವಾಗುವುದೇನೆಂದರೆ, ರಾಜ್ಯದ ಕಬ್ಬಿಣದ ಅದಿರಿನ ಸಂಪತ್ತನ್ನು ಕೆಲವು ವ್ಯಕ್ತಿಗಳು/ಸಂಘ-ಸಂಸ್ಥೆಗಳು, ರಾಜಕಾರಣಿಗಳ ಮತ್ತು ಅಧಿಕಾರಿಗಳ ಸಹಕಾರದಿಂದ ಅಕ್ರಮವಾಗಿ 1.0 ಲಕ್ಷ ಕೋಟಿಗೂ ಅಧಿಕ ಬೆಲೆ ಬಾಳುವ ಕಬ್ಬಿಣದ ಅದಿರನ್ನು ಲೂಟಿ ಮಾಡಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ. ಇದನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಎಂದಿಗೂ ಸಹ ಭ್ರಷ್ಟಾಚಾರವನ್ನು ಉತ್ತೇಜಿಸಿಲ್ಲ ಹಾಗೂ ಸಹಕಾರವನ್ನೂ ನೀಡಿರುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ಕಾಂಗ್ರೆಸ್ ಪಕ್ಷದ ಧೈಯವೆಂದು ಪಕ್ಷವು ಭಾವಿಸಿಕೊಂಡು ಬಂದಿರುತ್ತದೆ. ಆ ಕಾರಣದಿಂದ ರಾಹುಲ್‌ ಗಾಂಧಿ. ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಹಿರಿಯ ನಾಯಕರು ಭ್ರಷ್ಟಾಚಾರದ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

NCRB report-2023 | ಹಲವು ಅಪರಾಧ ಕೃತ್ಯಗಳಲ್ಲಿ ಕರ್ನಾಟಕಕ್ಕೆ ಕುಖ್ಯಾತಿ

ಭಾರತದ ವಿವಿಧ ರಾಜ್ಯಗಳಲ್ಲಿ 2023ರಲ್ಲಿ ನಾನಾ ರೀತಿಯಲ್ಲಿ ನಡೆದಿರುವ ದಾಖಲಿತ ಅಪರಾಧ...

ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಮಾಜದಲ್ಲಿ ಅಸಮಾನತೆಯಿದ್ದು, ಅದನ್ನು ಹೋಗಲಾಡಿಸಲು ಸಮೀಕ್ಷೆಯ ಅಂಕಿಅಂಶಗಳು ಅವಶ್ಯಕ. ಯಾವ ಜಾತಿಯ...

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

Download Eedina App Android / iOS

X