ಶಿವಮೊಗ್ಗ, ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ಪಾವತಿಸಲು ಸರ್ಕಾರ ಶೇಕಡ 50ರಷ್ಟು ರಿಯಾಯಿತಿ ನೀಡಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇವಲ 20 ದಿನಗಳಲ್ಲಿ ₹1,58,51,750 ದಂಡ ಸಂಗ್ರಹವಾಗಿದ್ದು, ಇಂದು ನಗರದ ಹಲವೆಡೆ ದಂಡ ಕಟ್ಟಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ರಾಜ್ಯ ಸರ್ಕಾರವು ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರವರೆಗೆ ಈ ರಿಯಾಯಿತಿಯನ್ನು ಘೋಷಿಸಿತ್ತು. ಇದನ್ನು ಸದುಪಯೋಗಪಡಿಸಿಕೊಂಡ ವಾಹನ ಸವಾರರು ದಂಡ ಪಾವತಿಸಲು ಮುಂದಾಗಿದ್ದಾರೆ. ಇದುವರೆಗೂ ಜಿಲ್ಲಾದ್ಯಂತ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಒಟ್ಟು 26,728 ಪ್ರಕರಣಗಳನ್ನು ವಾಹನ ಸವಾರರು ಇತ್ಯರ್ಥಪಡಿಸಿಕೊಂಡಿದ್ದಾರೆ.
ಇಂದು ರಿಯಾಯಿತಿ ಯೋಜನೆಯ ಕೊನೆಯ ದಿನವಾದ್ದರಿಂದ ದಂಡ ಕಟ್ಟಲು ನಗರದಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಗರದ ಗೋಪಿ ವೃತ್ತ, ದುರ್ಗಿಗುಡಿ ಸೇರಿದಂತೆ ವಿವಿಧೆಡೆ ಪೊಲೀಸರು ದಂಡ ಸಂಗ್ರಹ ಮಾಡುತ್ತಿದ್ದಾರೆ.
2023ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾಗಬೇಕಿದ್ದ ದಂಡದ ಮೊತ್ತವು ₹19 ಕೋಟಿಗೂ ಹೆಚ್ಚಾಗಿದೆ. ಹಾಗೂ ಇಂದು ಕೊನೆ ದಿವಸವಾಗಿರುವ ಕಾರಣ ಶಿವಮೊಗ್ಗ ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದ್ದಾರೆ.

ರಿಯಾಯಿತಿ ಯೋಜನೆ ಮುಗಿಯಲು ಕಡಿಮೆ ಸಮಯ ಉಳಿದಿರುವುದರಿಂದ, ವಾಹನ ಸವಾರರು ಸಂಚಾರಿ ಠಾಣೆಯ ಪೊಲೀಸರನ್ನು ಹುಡುಕಿಕೊಂಡು ಬಂದು ದಂಡ ಪಾವತಿಸುತ್ತಿದ್ದಾರೆ.