ಕರ್ನಾಟಕದ ನಾಡ ಹಬ್ಬ ದಸರಾ ವನ್ನು ಪ್ರತಿಷ್ಟಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಲೇಖಕಿ ಬಾನು ಮುಸ್ತಾಕ್ ಉದ್ಘಾಟಿಸುತ್ತಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಸ್ವಾಗತಿಸುತ್ತದೆ ಎಂದು ದ. ಸಂ.ಸ. ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ತಿಳಿಸಿದರು.
ದಸರಾ ನಾಡ ಹಬ್ಬವು ಒಂದು ಧರ್ಮ, ಒಂದು ಜಾತಿಯ ಆಚರಣೆಯಲ್ಲಾ, ಸರ್ವ ಜನರ ಸೌಹಾರ್ದತೆಯ ಪ್ರತೀಕವಾಗಿರುವ ದಸರಾ ಹಬ್ಬವನ್ನು ಒಂದು ಧರ್ಮಕ್ಕಷ್ಟೇ ಸೀಮಿತಗೊಳಿಸುವುದು, ಕುವೆಂಪು, ಬಸವಣ್ಣ ಹುಟ್ಟಿದ ಈ ಶ್ರೇಷ್ಠ ನಾಡಿಗೆ ಮಾಡುವ ಅಪಮಾನವೇ ಸರಿ. ಶತಮಾನಗಳಿಂದಲೂ ಈ ನಾಡಿನ ಸರ್ವ ಜನರೂ ಹೆಮ್ಮೆಯಿಂದ ಆಚರಿಸಿಕೊಂಡು ಬರುತ್ತಿರುವ ನಾಡ ಹಬ್ಬ ದಸರವನ್ನು ನೋಡಲು ಜಾತಿ, ಮತ, ಧರ್ಮ, ಲಿಂಗ ಬೇದವಿಲ್ಲದೆ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಬರುತ್ತಾರೆ. ಈ ಒಂದು ಸೌಹಾರ್ದತೆಯ ಹಬ್ಬವನ್ನು ತಮ್ಮ ರಾಜಕೀಯ ಲಾಭಕ್ಕೋಸ್ಕರ ವಿವಾದವೆಬ್ಬಿಸುತ್ತಿರುವುದು ವಿದೇಶಿ ಪ್ರವಾಸಿಗರ ಎದುರು ನಮ್ಮ ಅಲ್ಪತನ ಮತ್ತು ಹೊಲಸು ಮನಸ್ಸಿನ ಅನಾವರಣವಾಗಲಿದೆ ಎಂದು ಹೇಳಿದ್ದಾರೆ.
ಬೂಕರ್ ಪ್ರಶಸ್ತಿಗೆ ಭಾಜನರಾದ ಪ್ರಥಮ ಭಾರತೀಯರು ಅದರಲ್ಲೂ ಒಬ್ಬರು ಮಹಿಳೆಯಾದರೂ ಅವರನ್ನು ಅಭಿನಂಧಿಸುವ ಯೋಗ್ಯತೆಯೂ ಇಲ್ಲದ ನಮ್ಮ ದೇಶದ ಶ್ರೇಷ್ಠ ನಾಯಕರ ಮನಸ್ಥಿತಿ ಅಸಹ್ಯ ಹುಟ್ಟಿಸುತ್ತದೆ. ಕ್ರಿಕೆಟ್ ಆಟಗಾರ ಶತಕ ಹೊಡೆದಾಗ ಟ್ವೀಟ್ ಮಾಡಿ ಅಭಿನಂದಿಸುವ ಈ ಸರ್ವೋಚ್ಛ ನಾಯಕ, ಈ ದೇಶಕ್ಕೆ ಪ್ರಥಮ ಬೂಕರ್ ಪ್ರಶಸ್ತಿ ತಂದುಕೊಟ್ಟ ಮಹಿಳೆಯನ್ನು ಧರ್ಮದ ಆಧಾರದಲ್ಲಿ ನೋಡಿದ್ದು ನಿಜಕ್ಕೂ ಬುಧ್ಧ , ಗಾಂಧಿ ಹುಟ್ಟಿದ ನಾಡಿನ ದುರಂತವೇ ಸರಿ ಎಂದಿದ್ದಾರೆ.
ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಮಹಿಳೆ ಬಾನು ಮುಸ್ತಾಕ್ ಈ ಬಾರಿಯ ನಾಡ ಹಬ್ಬ ದಸರಾವನ್ನು ಉದ್ಘಾಟಿಸುತ್ತಿರುವುದು ಈ ದೇಶದ ಸಂವಿಧಾನಕ್ಕೆ, ಸಮಾನತೆಯನ್ನು ಸಾರುವ ಈ ಭರತ ಭೂಮಿಗೆ, ಕುವೆಂಪು ಅವರು ಸಾರಿದ ಸರ್ವ ಜನಾಂಗದ ಶಾಂತಿಯ ತೋಟದ ಕಲ್ಪನೆಗೆ ಹಿಡಿದ ಕನ್ನಡಿಯಾಗಿದೆ, ಮತ್ತು ಆ ಮೂಲಕ ಈ ಬಾರಿಯ ನಾಡ ಹಬ್ಬದ ಮೆರುಗು ಹೆಚ್ಚಿದಂತಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಪದಾಧಿಕಾರಿಗಳಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು, ಸಂಘಟನಾ ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಅಣ್ಣಪ್ಪ ನಕ್ರೆ, ಭಾಸ್ಕರ ಮಾಸ್ಟರ್ ಕುಂಜಿಬೆಟ್ಟು, ಮಂಜುನಾಥ ನಾಗೂರು, ದೇವು ಹೆಬ್ರಿ, ಶ್ರೀಧರ ಕುಂಜಿಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.