ನೇಪಾಳದ ಯುವಕರ ನೇತೃತ್ವದ ಜನರೇಷನ್ ಝೆಡ್ ಪ್ರತಿಭಟನೆಗಳು ದೇಶದ ರಾಜಕೀಯವನ್ನು ಬದಲಾಯಿಸಿದ್ದು, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ ಇಂದು ರಾತ್ರಿ ಮಧ್ಯಂತರ ಪ್ರಧಾನಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರಪತಿ ರಾಮ್ ಚಂದ್ರ ಪೌಡೆಲ್ ಅವರ ಅಧಿಕೃತ ನಿವಾಸದಲ್ಲಿ ರಾತ್ರಿ 8.45ಕ್ಕೆ ಈ ಅಧಿಕಾರ ಗ್ರಹಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದು ನೇಪಾಳದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಧಾನಿಯಾಗಲಿದ್ದಾರೆ.
ನಾಲ್ಕು ದಿನಗಳ ಹಿಂದಷ್ಟೇ, ಪ್ರಧಾನಿ ಕೆ ಪಿ ಶರ್ಮಾ ಓಲಿ ಅವರು ಭ್ರಷ್ಟಾಚಾರ ವಿರುದ್ಧದ ದೊಡ್ಡ ಪ್ರತಿಭಟನೆಯಿಂದಾಗಿ ರಾಜೀನಾಮೆ ನೀಡಿದ್ದರು. ಸಾಮಾಜಿಕ ಮಾಧ್ಯಮ ನಿಷೇಧದಿಂದ ಆರಂಭವಾದ ಈ ಪ್ರತಿಭಟನೆಗಳು ದೇಶದಲ್ಲಿ ದೊಡ್ಡ ಹಿಂಸಾಚಾರಗಳಾಗಿ ಬದಲಾದವು. ಒಂದು ವಾರದಲ್ಲಿ 51 ಜನರು ಮೃತಪಟ್ಟು, 1,300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸಾಮಾಜಿಕ ಮಾಧ್ಯಮ ನಿಷೇಧವನ್ನು ರದ್ದುಗೊಳಿದರೂ, ಓಲಿ ಅವರ ರಾಜೀನಾಮೆಯ ನಂತರ ಮಾತ್ರ ಹೋರಾಟದ ಕಿಚ್ಚು ಒಂದಿಷ್ಟು ಕಡಿಮೆಯಾಯಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಧರ್ಮಸ್ಥಳ, ದಸರಾ, ಗಣೇಶ ಮತ್ತು ಅಶೋಕ್ ಮೋಚಿ
ನೇಪಾಳದ ಜೆನ್ ಜೆಡ್ ಗುಂಪು ಸುಶೀಲಾ ಕಾರ್ಕಿ ಅವರ ನಾಯಕತ್ವವನ್ನು ಸ್ವೀಕರಿಸುವುದಾಗಿ ಘೋಷಿಸಿದೆ. “ನಾವು ಸಂವಿಧಾನವನ್ನು ಬದಲಾಯಿಸುವ ಉದ್ದೇಶವಿಲ್ಲ” ಎಂದು ಜೆನ್ ಝೆಡ್ ನಾಯಕ ಸುದನ್ ಗುರುಂಗ್ ಹೇಳಿದ್ದಾರೆ.
73 ವರ್ಷದ ಕಾರ್ಕಿ ಅವರು ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿದ್ದು, 2016ರಲ್ಲಿ ಈ ಹುದ್ದೆಯನ್ನು ಅಲಂಕರಿಸಿದ್ದರು. ಭ್ರಷ್ಟಾಚಾರ ವಿರುದ್ಧದ ಅವರ ನಿಲುವು ಮತ್ತು ನಿಷ್ಕಲಂಕ ವ್ಯಕ್ತತ್ವದಿಂದ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಈ ಮಧ್ಯಂತರ ಸರ್ಕಾರದ ಅವಧಿ 6 ತಿಂಗಳುಗಳ ಕಾಲ ಇರಲಿದೆ. ಈ ಅವಧಿಯಲ್ಲಿ ಚುನಾವಣೆಗಳು ನಡೆಯಲಿದೆ.