ಇಂದಿನ ವ್ಯವಸ್ಥೆ ಕೆಲವು ವಿಚಾರಗಳನ್ನು ರಾಕ್ಷಸೀಕರಣ, ದುರುಳೀಕರಣ ಮಾಡುವ ಕೆಲಸ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಶಾಂತಿಯೇ ಸರಿಯಾದ ಉತ್ತರ ಆಗಬೇಕು. ಈ ಶಾಂತಿಯ ಬಹಳ ದೊಡ್ಡ ಸಂದೇಶ ನೀಡಿದವರು ಪೈಗಂಬರರು. ಮನುಷ್ಯರಾಗಿ ಬದುಕಿ ಎಂಬ ಈ ಸಂದೇಶ ಕೊಟ್ಟ ದಾರ್ಶನಿಕರನ್ನು ಧೀಮಂತವಾಗಿಯೇ ಉಳಿಸಿಕೊಳ್ಳಬೇಕು. ಅವರ ವ್ಯಕ್ತಿತ್ವ ನಮ್ಮ ಬದುಕಿನ ಚರಿತ್ರೆಯಲ್ಲಿ ಕೆಡದ ಹಾಗೆ ಇರಿಸಿಕೊಳ್ಳಬೇಕು. ಅದುವೇ ಉತ್ತಮ ಬದುಕು ಎಂದು ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್ ಶೆಟ್ಟಿ ಎಚ್. ಹೇಳಿದರು.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ ಉಡುಪಿ ಪುರಭವನದ ಮಿನಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಸಕ್ತ ಪರಿಸ್ಥಿತಿ ಮತ್ತು ಪ್ರವಾದಿ ಸಂದೇಶ ಕುರಿತ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಧರ್ಮದ ಅನುಸರಣೆಯ ಮಾಡುವ ಕುರಿತು ಬರುವ ಟೀಕೆ ಟಿಪ್ಪಣಿಗಳಿಗೆ ಸಂಘರ್ಷ ಹೊರತು ಪಡಿಸಿದ ಶಾಂತಿಯ ಮಾರ್ಗದಲ್ಲಿ ಇನ್ನಷ್ಟು ಗಟ್ಟಿಯಾಗಿ ನಿಲ್ಲುವ ಮೂಲಕ ಪ್ರತಿರೋಧದ ಸಂಸ್ಕೃತಿಯನ್ನು ನಿರಾಸನ ಮಾಡಬೇಕೆ ಹೊರತು ಹಿಂಸೆಗೆ ಹಿಂಸೆಯ ಪ್ರತಿರೋಧದಿಂದ ಯಾವುದೇ ಧರ್ಮವು ಶ್ರೇಷ್ಠ ಎನಿಸಿಕೊಳ್ಳಲು ಸಾಧ್ಯ ಇಲ್ಲ ಎಂದರು.
ಈ ಜಗತ್ತಿನಲ್ಲಿ ಧರ್ಮದ ಅಪವಾಖ್ಯಾನ ಹಾಗೂ ತಪ್ಪು ಅನುಸರಣೆಯು ಧರ್ಮದ ಶ್ರೇಷ್ಠತೆಯನ್ನು ಅರಿಯಲು ಇಂದು ಸಮಸ್ಯೆಯಾಗುತ್ತಿದೆ. ಶ್ರೇಷ್ಠ ಮಾನತವಾದಿ, ದಾರ್ಶನಿಕರ ಅರ್ಥ ಮಾಡಿಕೊಳ್ಳುವ, ಅವರ ಕುರಿತು ಶ್ರದ್ಧೆಯನ್ನು ತೋರುವ ಮತ್ತು ಆ ದಾರಿಯಲ್ಲಿ ನಡೆಯುವವರು ಮಾತ್ರ ಮನುಷ್ಯ ಧರ್ಮದ ಪರವಾಗಿ ಇರಲು ಸಾಧ್ಯ ಎಂದು ಅವರು ತಿಳಿಸಿದರು.

ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಪಿಡಿಜಿ ನೇರಿ ಕರ್ನೆಲಿಯೊ ಮಾತನಾಡಿ, ಎಲ್ಲಾ ಧರ್ಮಗ್ರಂಥಗಳ ತಿರುಳು ಒಂದೇ ಆಗಿದೆ. ಅದನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಇಡೀ ಸಮಾಜ ನೆಮ್ಮದಿ ಸೌಹಾರ್ದತೆ ಸುಖ ಶಾಂತಿ, ಪ್ರೀತಿಯಿಂದ ಇರಲು ಸಾಧ್ಯ ಎಂದು ಹೇಳಿದರು.
ಮಂಗಳೂರಿನ ಲೆಕ್ಕಪರಿಶೋಧಕ ಇಸಾಕ್ ಪುತ್ತೂರು ಮಾತನಾಡಿ, ನಿರ್ಭೀತ ಹಾಗೂ ಹಸಿವು ಮುಕ್ತ ಸಮಾಜ ನಿರ್ಮಾಣ ಆಗಬೇಕು ಎಂಬುದು ಪ್ರವಾದಿಯವರ ಕನಸು ಆಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದರು. ಅದರಂತೆ ನಾವು ಕೂಡ ಪರಸ್ಪರ ಅಪನಂಬಿಕೆಗಳನ್ನು ದೂರ ಮಾಡಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮ ಸಮಾಜವನ್ನು ನಿರ್ಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದರ (ಸ) ಆದರ್ಶದ ಔಚಿತ್ಯ' ಹಾಗೂ
ಪ್ರವಾದಿ ಮುಹಮ್ಮದರನ್ನು(ಸ) ಅರಿಯಿರಿ’ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಮುಹಮ್ಮದ್ ಮೌಲಾ ವಹಿಸಿದ್ದರು. ಒಕ್ಕೂಟದ ಜಿಲ್ಲಾ ಸಮಿತಿ ಸದಸ್ಯ ಇದ್ರಿಸ್ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇಸಾಕ್ ಕಿದವರ್ ಕುರಾನ್ ಪಡಿಸಿದರು. ಒಕ್ಕೂಟದ ಉಡುಪಿ ತಾಲೂಕು ಘಟಕ ಅಧ್ಯಕ್ಷರಾದ ಎಸ್.ಎಂ.ಇರ್ಷಾದ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ರಿಯಾಜ್ ಅಹ್ಮದ್ ಕುಕ್ಕಿಕಟ್ಟೆ ವಂದಿಸಿದರು. ತಾಲೂಕು ಕಾರ್ಯದರ್ಶಿ ಜಿಎಂ ಶರೀಫ್ ಹೂಡೆ ಹಾಗೂ ಶುಐಬ್ ಅಹ್ಮದ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.