ಭಾಗವತರ ಗುಣಗಾನ ಮಾಡಿದ ಮೋದಿ, ಮರ್ಮವೇನು?

Date:

Advertisements

ಪ್ರಧಾನಿ ಹುದ್ದೆಗೆ ಏರಿದಾಗಿನಿಂದ ಮೋದಿ ತಮ್ಮ ಮಾತನ್ನೇ ನಡೆಸಿಕೊಂಡು ಬಂದಿದ್ದಾರೆ. ಆದರೆ, ಕಳೆದ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಬಹುಮತ ತಂದುಕೊಡುವಲ್ಲಿ ಅವರು ವಿಫಲರಾದರು. ಅವರ ರೆಕ್ಕೆಪುಕ್ಕ ಕತ್ತರಿಸಲು ಇದಕ್ಕಿಂತ ಒಳ್ಳೆಯ ಕಾಲ ಮತ್ತೊಂದಿಲ್ಲ, ರಾಜಕೀಯ ಆಗುಹೋಗಗಳ ಮೇಲೆ ತನ್ನ ಮುದ್ರೆಯನ್ನು ಒತ್ತಲು ಸೂಕ್ತ ಸನ್ನಿವೇಶ ಎಂಬುದು ಆರೆಸ್ಸೆಸ್ ಆಲೋಚನೆ

ಬಿಜೆಪಿಯ ಮುಂದಿನ ಅಧ್ಯಕ್ಷರು ಯಾರಾಗಬೇಕು ಎಂಬುದರ ಕುರಿತು ಪಕ್ಷ ಮತ್ತು ಅದರ ಸೈದ್ಧಾಂತಿಕ ಪೋಷಕ ಆರೆಸ್ಸೆಸ್ ಪರಸ್ಪರ ಜಟಾಪಟಿಗೆ ಬಿದ್ದಿವೆ ಎಂಬುದರಲ್ಲಿ ಯಾವ ಅಚ್ಚರಿಯೂ ಇಲ್ಲ.

ಪ್ರಧಾನಮಂತ್ರಿ ಮೋದಿ ಮತ್ತು ಸರಸಂಘಚಾಲಕ ಮೋಹನ ಭಾಗವತ್ ನಡುವಣ ‘ಮನಭೇದ’ ಕರಗುವ ಸೂಚನೆಗಳು ಕಾಣತೊಡಗಿವೆ. ಭಾಗವತ್ ಅವರ ಜನ್ಮದಿನದ ಸಂದರ್ಭದಲ್ಲಿ (11.09.25) ಮೋದಿಯವರು ಬರೆದಿರುವ ಲೇಖನಗಳನ್ನು ದೇಶದ ಪ್ರಮುಖ ಪತ್ರಿಕೆಗಳು ಇಂದು ಪ್ರಕಟಿಸಿವೆ. ಭಾಗವತರ ಗುಣಗಾನ ಮಾಡಿರುವ ಈ ಲೇಖನಗಳು ಸ್ನೇಹ-ಸಂಬಂಧದ ಸೇತುವೆಯನ್ನು ಕಟ್ಟುವ ಉದ್ದೇಶ ಹೊಂದಿವೆಯೇ ವಿನಾ ಭಿನ್ನಮತವನ್ನು ಧ್ವನಿಸುತ್ತಿಲ್ಲ. ಭಾಗವತರು ಹಲವಾರು ಸಂಗೀತ ವಾದ್ಯಗಳನ್ನು ನುಡಿಸಬಲ್ಲರು ಮತ್ತು ಅವರು ಅಗಾಧ ಶ್ರೋತೃ ಎಂಬ ಅಂಶ ಬೆಳಕಿಗೆ ಬಂದಿರುವುದು ಇದೇ ಲೇಖನದಿಂದ.

ಈ ಲೇಖನ ಭಾಗವತರ 75ನೆಯ ಜನ್ಮದಿನದಂದು ಅಚ್ಚಾಗಿರುವುದಕ್ಕೆ ರಾಜಕೀಯ ಮಹತ್ವವಿದೆ. ಸಂಘಪರಿವಾರವು ಸೂಚಿಸಿದ್ದ ಅನಧಿಕೃತ ನಿವೃತ್ತಿ ವಯೋಮಿತಿ 75 ವರ್ಷಗಳು. ಈ ವಯೋಮಿತಿಯನ್ನು ಭಾಗವತರು ಇತ್ತೀಚೆಗೆ ತಾವಾಗಿಯೇ ತಳ್ಳಿ ಹಾಕಿದರು.

 ‘75ನೆಯ ವಯಸ್ಸಿಗೆ ನಾನು ನಿವೃತ್ತನಾಗುತ್ತೇನೆ ಇಲ್ಲವೇ ಮತ್ತೊಬ್ಬರು ನಿವೃತ್ತರಾಗಬೇಕೆಂದು ನಾನು ಹೇಳಿಯೇ ಇಲ್ಲ. ನಾವು ಸ್ವಯಂಸೇವಕರು. ನಮಗೆ ವಹಿಸಿಕೊಟ್ಟ ಕೆಲಸವನ್ನು ಒಲ್ಲೆ ಎನ್ನುವಂತಿಲ್ಲ. ಸಂಘದಲ್ಲಿ ಅದಕ್ಕೆ ಅವಕಾಶ ಇಲ್ಲ. ಈ ಸಂಘಟನೆ ಎಲ್ಲಿಯವರೆಗೆ ಬಯಸುತ್ತದೋ ಅಲ್ಲಿಯವರೆಗೆ ನಾನು ಕೆಲಸ ಮಾಡುತ್ತೇನೆ’ ಎಂದು ಭಾಗವತರು ಇತ್ತೀಚೆಗೆ ಸಾರಿ ಹೇಳಿದರು.

ಪ್ರಧಾನಮಂತ್ರಿಯ ಕೇಂದ್ರೀಕೃತ ಆಡಳಿತ ವೈಖರಿಯ ಕುರಿತು ಭಾಗವತ್-ಮೋದಿ ನಡುವೆ ಸಂಬಂಧ ಅಷ್ಟಾಗಿ ಸಮರಸವಾಗಿಲ್ಲ. ಬಿಜೆಪಿಗೆ ಹೊಸ ಅಧ್ಯಕ್ಷನ ಆಯ್ಕೆಯಲ್ಲಿನ ತೀವ್ರ ವಿಳಂಬವು ಇಬ್ಬರ ನಡುವಣ ತಿಕ್ಕಾಟ ಈ ಅಂಶವನ್ನು ನಿಚ್ಚಳಪಡಿಸಿದೆ.

ಇತ್ತೀಚೆಗೆ, ಆರೆಸ್ಸೆಸ್ ಶತಮಾನೋತ್ಸವ ಆಚರಣೆಗಳ ಹೊತ್ತಿನಲ್ಲಿ ಹೊಸ ಅಧ್ಯಕ್ಷರ ಆಯ್ಕೆಯಲ್ಲಿ ವಿಳಂಬ ಕುರಿತು ಕೇಳಿದ ಪ್ರಶ್ನೆಗಳಿಗೆ ಅವರ ಉತ್ತರಗಳು ಕಡ್ಡಿ ಮುರಿದಂತಿದ್ದವು- “ನಾವು ತೀರ್ಮಾನಿಸುವಂತಿದ್ದರೆ ಇಷ್ಟು ದೀರ್ಘ ಕಾಲ ಬೇಕಿತ್ತೇ? ನಾವು ತೀರ್ಮಾನಿಸುವುದಿಲ್ಲ, ತೀರ್ಮಾನಿಸಲು ನಾವು ಬಯಸುವುದೂ ಇಲ್ಲ. ನಿಮಗೆಷ್ಟು (ಬಿಜೆಪಿ) ಕಾಲ ಬೇಕೋ ತೆಗೆದುಕೊಳ್ಳಿ. ನಾವು ಸಲಹೆಗಳನ್ನಷ್ಟೇ ನೀಡುತ್ತೇವೆ. ಆದರೆ, ಆಡಳಿತ ಮತ್ತು ರಾಜಕೀಯ ನೇಮಕಗಳಲ್ಲಿ ಮೂಗು ತೂರಿಸುವುದಿಲ್ಲ. ನಮ್ಮ ನಡುವೆ ಜಗಳವೇನೂ ಇಲ್ಲ. ಆರೆಸ್ಸೆಸ್ ಮತ್ತು ಬಿಜೆಪಿಯ ಧ್ಯೇಯೋದ್ದೇಶಗಳಲ್ಲಿ ತಾಳಮೇಳವಿದೆ. ಮನಭೇದ ಇಲ್ಲ”

ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿ ಆರೆಸ್ಸೆಸ್ ಪಾತ್ರ ಪ್ರಮುಖ ಎಂಬ ವ್ಯಾಪಕ ಗ್ರಹಿಕೆಯನ್ನು ಅಲ್ಲಗಳೆಯುವುದು ಭಾಗವತರ ಮಾತುಗಳ ಇಂಗಿತವಾಗಿತ್ತು. ಆದರೆ, ಇತಿಹಾಸ ಬೇರೆಯದೇ ಅಂಶವನ್ನು ಸಾರುತ್ತದೆ. ಬಿಜೆಪಿ ಅಧ್ಯಕ್ಷರ ಹುದ್ದೆಗೆ ನೇಮಕ ಮಾಡಲು ಆರೆಸ್ಸೆಸ್ ಅನುಮೋದನೆ ಬೇಕೆಂಬುದು ಔಪಚಾರಿಕವಷ್ಟೇ ಅಲ್ಲ, ಅಭ್ಯರ್ಥಿಗೆ ಇರಬೇಕಾದ ಅರ್ಹತೆಯೂ ಹೌದು. 2009ರಲ್ಲಿ ಮಹಾರಾಷ್ಟ್ರದಾಚೆ ‘ಅಪರಿಚಿತರು’ ಎನಿಸಿದ್ದ ನಿತಿನ್ ಗಡ್ಕರಿ ಅವರನ್ನು ಹಠಾತ್ತನೆ ಈ ಹುದ್ದೆಯಲ್ಲಿ ಕುಳ್ಳಿರಿಸಿ, ಇತರೆ ಆಕಾಂಕ್ಷಿಗಳ ಆಸೆಯ ಮೇಲೆ ತಣ್ಣೀರು ಎರಚಿದ್ದೇ ಆರೆಸ್ಸೆಸ್.

ಕೆಲ ತಿಂಗಳುಗಳ ಹಿಂದೆ ಹಲವು ರಾಜ್ಯಗಳಲ್ಲಿ ಬಿಜೆಪಿಯ ಸಂಘಟನಾತ್ಮಕ ಚುನಾವಣೆಗಳಲ್ಲಿ ಮಧ್ಯಪ್ರವೇಶಿಸಿ, ಪಕ್ಷವನ್ನು ಇಕ್ಕಟ್ಟಿನಿಂದ ಪಾರು ಮಾಡಿತ್ತು ಆರೆಸ್ಸೆಸ್. ಒಳಜಗಳ ಮತ್ತು ಗುಂಪುಗಾರಿಕೆಗೆ ಸಿಲುಕಿದ್ದ ಹಲವಾರು ರಾಜ್ಯಗಳಲ್ಲಿ ಹಿರಿಯ ಆರೆಸ್ಸೆಸ್ ನಾಯಕರನ್ನು ನೇಮಕ ಮಾಡಿತ್ತು. ಬಿಜೆಪಿ ಕೋಟೆಗಳೇ ಆಗಿ ಹೋಗಿರುವ ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯ ಘಟಕಗಳಿಗೆ ಈಗಲೂ ಅಧ್ಯಕ್ಷರನ್ನು ನೇಮಕ ಮಾಡುವುದು ಪಕ್ಷಕ್ಕೆ ಈಗಲೂ ದುಸ್ತರವಾಗಿದೆ. ಗುಂಪುಗಾರಿಕೆಯ ಕಾರಣ ಸಂಘಟನಾತ್ಮಕ ಚುನಾವಣೆಗಳು ವಿಳಂಬಗೊಂಡಿವೆ.

ಬಿಜೆಪಿಯ ಹಾಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕಾರವಧಿ 2024ರ ಜನವರಿಯಲ್ಲೇ ತೀರಿ ಹೋಯಿತು. ಅವರ ಜಾಗಕ್ಕೆ ಹೊಸಬರನ್ನು ಹುಡುಕಲು ಅಸಮರ್ಥವಾಗಿದೆ ಬಿಜೆಪಿ. ಹೀಗಾಗಿಯೇ ನಡ್ಡಾಗೆ ಹಲವು ವಿಸ್ತರಣೆಗಳನ್ನು ನೀಡಲಾಗಿದೆ. ಹೊಸ ಅಧ್ಯಕ್ಷರ ಆಯ್ಕೆಯ ಇತ್ತೀಚಿನ ಸುತ್ತಿನಲ್ಲಿ ಆಗಿರುವ ವಿಳಂಬಕ್ಕೆ ಬಿಜೆಪಿ (ಮೋದಿ ಮತ್ತು ಅಮಿತ್ ಶಾ) ಮತ್ತು ಆರೆಸ್ಸೆಸ್ ನಡುವೆ ಒಮ್ಮತದ ಕೊರತೆಯೇ ಮುಖ್ಯ ಕಾರಣ ಎನ್ನಲಾಗಿದೆ. ಅಧ್ಯಕ್ಷ ಹುದ್ದೆಗೇರುವ ಅಭ್ಯರ್ಥಿಯು ಮೋದಿ-ಶಾ ಜೋಡಿ ಹೇಳಿದ್ದಕ್ಕೆಲ್ಲ ಗೋಣು ಆಡಿಸಿ ಅವರ ರಬ್ಬರ್ ಮೊಹರು ಆಗುವುದು ಆರೆಸ್ಸೆಸ್ ಗೆ ಇಷ್ಟವಿಲ್ಲ. ಈ ಅಭ್ಯರ್ಥಿ ಸ್ವತಂತ್ರ ನಾಯಕನಾಗಿರಬೇಕೆಂದು ಅದು ಬಯಸುತ್ತದೆ.

ನಡ್ಡಾ ಜಾಗಕ್ಕೆ ಸಂಘಪರಿವಾರವು ತನ್ನ ಹಿರಿಯ ಮುಂದಾಳು ಸಂಜಯ ಜೋಶಿ ಹೆಸರನ್ನು ಸೂಚಿಸಿದ ಕಾರಣ ತಳಮಳದ ಸ್ಥಿತಿ  ಏರ್ಪಟ್ಟಿದೆಯೆಂದು ಆರೆಸ್ಸೆಸ್ ಮೂಲಗಳು ‘ದಿ ವೈರ್” ಗೆ ತಿಳಿಸಿವೆ. ಜೋಶಿ ಮತ್ತ ಮೋದಿ ಪಕ್ಷದಲ್ಲಿ ದೀರ್ಘಕಾಲದ ಪ್ರತಿಸ್ಪರ್ಧಿಗಳು. ಜೋಶಿ ಈ ಹಿಂದೆ ಬಿಜೆಪಿಯ ಸಂಘಟನಾತ್ಮಕ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಲೈಂಗಿಕ ಕ್ರಿಯೆಯಲ್ಲಿ ಅವರನ್ನು ತೋರಿಸುವ ಫೇಕ್ ವಿಡಿಯೋ ಹೊರಬಿದ್ದ ಕಾರಣ ಜೋಶಿ 2005ರಲ್ಲಿ ಮುಂಬೆಳಕಿನಿಂದ ಹಿಂದೆ ಸರಿಯಬೇಕಾಯಿತು. ಮೋದಿಯವರು ಜೋಶಿಯವರನ್ನು ಇಷ್ಟಪಡುವುದಿಲ್ಲವೆಂಬ ಅಂಶ ಶೀಘ್ರವೇ ವ್ಯಾಪಕವಾಗಿ ವರದಿಯಾಗಿತ್ತು.

2012ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುವ ತನಕ ಜೋಶಿ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಆಗ  ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾದರು. ಜೋಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ತಾವು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಬಹಿಷ್ಕರಿಸುವುದಾಗಿ ಮೋದಿಯವರು ಪಕ್ಷದ ಅಂದಿನ ಅಧ್ಯಕ್ಷ ಗಡ್ಕರಿಯವರಿಗೆ ಬೆದರಿಕೆ ಹಾಕಿದ್ದರು. ಮೋದಿ ಮಾತೇ ನಡೆಯಿತು. ಜೋಶಿ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ಸಲ್ಲಿಸಿದ ಎರಡೇ ತಾಸಿನಲ್ಲಿ ತಾವು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸುವುದಾಗಿ ಮೋದಿ ಸಾರಿದರು. ಅಂದಿನಿಂದ ಇಂದಿನ ತನಕ ಬಿಜೆಪಿಯ ಪ್ರಮುಖ ಹುದ್ದೆಗಳಿಗೆ ಜೋಶಿ ನೇಮಕದ ಸಾಧ್ಯತೆಗಳನ್ನು ಮುರಿದು ಹಾಕುತ್ತಲೇ ಬಂದಿದ್ದಾರೆ.

ಈ ಲೇಖನ ಓದಿದ್ದೀರಾ?: ನೇಪಾಳದ ಭೀಕರ ಪರಿಸ್ಥಿತಿಗೆ ಕಾರಣಗಳೇನು? ಕಳೆದ 17 ವರ್ಷಗಳಲ್ಲಿ ಆಗಿದ್ದೇನು?

ಮೋದಿ ಮತ್ತು ಶಾ ಅವರ ‘ವಿರಾಟ್ ಸ್ವರೂಪ’ಗಳ ಮುಂದೆ ಆರೆಸ್ಸೆಸ್ಸೇ ಕುಗ್ಗಿ ಹೋಗಿದೆ. ಬಿಜೆಪಿಯ ಕಾಂಗ್ರೆಸ್ಸೀಕರಣ ಆಗಿ ಹೋಗಿದೆಯೆಂದು ಆರೆಸ್ಸೆಸ್ ನಾಯಕರು ಆಗಾಗ ಪ್ರತ್ಯಕ್ಷವಾಗಿ ಮತ್ತು ಇಷಾರೆಗಳ ಮೂಲಕ ಹೇಳಿರುವುದುಂಟು. ಮೋದಿಯವರ ಪ್ರಭಾವಳಿಯ ಮುಂದೆ ಆರೆಸ್ಸೆಸ್ ಮಂಕಾಗಿತ್ತು.

2024ರ ಮೇ ತಿಂಗಳಿನಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆರೆಸ್ಸೆಸ್‌ನ ಪ್ರಾಮುಖ್ಯತೆಯನ್ನು ಕುಂದಿಸಿ ಹೇಳಿಕೆ ನೀಡಿದ್ದರು. ಆರೆಸ್ಸೆಸ್ ನೆರವಿಲ್ಲದೆ ಚುನಾವಣೆಗಳನ್ನು ಗೆಲ್ಲಬಲ್ಲದು ಬಿಜೆಪಿ ಎಂದಿದ್ದರು. ಅದರ ಬೆನ್ನಿಗೇ ಲೋಕಸಭಾ ಚುನಾವಣೆಗಳು ನಡೆದವು. ಎರಡೂ ಸಂಘಟನೆಗಳ ಮುಸುಕಿನ ಗುದ್ದಾಟ ನಿಂತಿರಲಿಲ್ಲ. ಮೋದಿಯವರ ವಿರುದ್ಧ ಪರೋಕ್ಷ ಟೀಕೆಯ ಬಾಣಗಳನ್ನು ಆರೆಸ್ಸೆಸ್ ನಾಯಕರು ಪ್ರಯೋಗಿಸಿದ್ದರು. ಆದರೆ ಪರಸ್ಪರ ಯಾವುದೇ ತಿಕ್ಕಾಟ ಇಲ್ಲವೆಂದು ಉಭಯ ಸಂಘಟನೆಗಳ ನಾಯಕರಿಂದಲೂ ಅಧಿಕೃತ ಹೇಳಿಕೆಗಳು ಹೊರಬೀಳುತ್ತಿದ್ದವು.

ಭಿನ್ನಾಭಿಪ್ರಾಯ ಹಿಂದೆಂದಿಗಿಂತಲೂ ಇಂದು ಹೆಚ್ಚು ಬಹಿರಂಗವಾಗಿ ಕಾಣಿಸಿಕೊಳ್ಳತೊಡಗಿದೆ. ಬಿಜೆಪಿ ಮುಖ್ಯಸ್ಥನ ಹುದ್ದೆಗೆ ಸ್ವತಂತ್ರ ದನಿಯ ನೇಮಕ ಆಗಬೇಕೆಂಬುದು ಆರೆಸ್ಸೆಸ್ ಇರಾದೆ. ಜೋಶಿಯವರ ಹೆಸರನ್ನೇ ಅದು ಮುಂದೆ ಮಾಡಿದೆ. ಅಧ್ಯಕ್ಷನ ಹುದ್ದೆಗೆ ಅಲ್ಲವಾದರೂ, ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹುದ್ದೆಗೆ ಜೋಶಿ ನೇಮಕ ನಿಶ್ಚಿತ ಎಂದು ಆರೆಸ್ಸೆಸ್ ಮೂಲಗಳು ‘ದಿ ವೈರ್’ ಗೆ ತಿಳಿಸಿವೆ.

ಸಂಜಯ ಜೋಶಿ ಹೆಚ್ಚು ಅಂತರ್ಮುಖಿ. ರೇಲುಗಾಡಿಗಳಲ್ಲಿ ಪಯಣಿಸುವವರು. ಹವಾನಿಯಂತ್ರಿತ ಬೋಗಿಗಳ ಬದಲು ಸಾಮಾನ್ಯ ತರಗತಿ ಪಯಣಕ್ಕೇ ಅವರ ಆದ್ಯತೆ. ವಿಲಾಸಿ ಸರಕುಗಳಿಂದ ದೂರವಿರುವವರು. ಮೋದಿಗೆ ವಿರುದ್ಧ ಗುಣಸ್ವಭಾವಗಳಿವು. ಜೋಶಿ ನಿರಂತರ ಸಂಘ ನಿಷ್ಠರು. ಸಂಘಪರಿವಾರದ ಕಾರ್ಯಕರ್ತರು-ಪದಾಧಿಕಾರಿಗಳ ಗೌರವಾದರಗಳನ್ನು ಗಳಿಸಿರುವವರು.

ನಡ್ಡಾ ಜಾಗಕ್ಕೆ ಬರುವ ಹೊಸ ಅಧ್ಯಕ್ಷರು ಆರೆಸ್ಸೆಸ್ ಮೌಲ್ಯಗಳಲ್ಲಿ ಆಳ ಬೇರುಗಳನ್ನು ಹೊಂದಿರುವವರೇ ಆಗಿರಬೇಕು ಎಂಬುದು ಆರೆಸ್ಸೆಸ್‌ಗೆ ಸಮೀಪವಿರುವವರ ಗಟ್ಟಿ ಧೋರಣೆ. ಈ ಸ್ಥಾನಕ್ಕೆ ಕೇಂದ್ರ ಕೃಷಿ ಮಂತ್ರಿ ಶಿವರಾಜಸಿಂಗ್ ಚೌಹಾಣ್ ಅವರ ಹೆಸರನ್ನೂ ಆರೆಸ್ಸೆಸ್ ಸೂಚಿಸಿತ್ತು ಎನ್ನಲಾಗಿದೆ. ಆದರೆ ಚೌಹಾಣ್ ಈ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆಂದು ಗೊತ್ತಾಗಿದೆ. ಮೋದಿಯವರ ನೇತೃತ್ವದ ಸಚಿವ ಸಂಪುಟದಲ್ಲಿ ಮಂತ್ರಿಯಾಗಿರುವ ಈಗಿನ ಸ್ಥಾನಮಾನ ತಮಗೆ ತೃಪ್ತಿ ತಂದಿದೆ ಎಂದು ಅವರು ಇತ್ತೀಚೆಗೆ ಸಮೂಹ ಮಾಧ್ಯಮಗಳಿಗೆ ತಿಳಿಸಿದ್ದರು.

ಬಿಹಾರ ವಿಧಾನಸಭಾ ಚುನಾವಣೆಗಳಿಗೆ ಮುನ್ನವೇ ಈ ಹುದ್ದೆಯನ್ನು ಭರ್ತಿ ಮಾಡಬೇಕಿದೆ. ಮೋದಿಯವರ ಉತ್ತರಾಧಿಕಾರಿ ಆಗಬಲ್ಲ ಆರೆಸ್ಸೆಸ್ ವಿಚಾರಧಾರೆಯ ವ್ಯಕ್ತಿತ್ವದ ಶೋಧ ಜಾರಿಯಲ್ಲಿದೆ.

ಪ್ರಧಾನಿ ಹುದ್ದೆಗೆ ಏರಿದಾಗಿನಿಂದ ಮೋದಿ ತಮ್ಮ ಮಾತನ್ನೇ ನಡೆಸಿಕೊಂಡು ಬಂದಿದ್ದಾರೆ. ಆದರೆ ಕಳೆದ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಬಹುಮತ ತಂದುಕೊಡುವಲ್ಲಿ ಅವರು ವಿಫಲರಾದರು. ಅವರ ರೆಕ್ಕೆಪುಕ್ಕ ಕತ್ತರಿಸಲು ಇದಕ್ಕಿಂತ ಒಳ್ಳೆಯ ಕಾಲ ಮತ್ತೊಂದಿಲ್ಲ, ರಾಜಕೀಯ ಆಗುಹೋಗಗಳ ಮೇಲೆ ತನ್ನ ಮುದ್ರೆಯನ್ನು ಒತ್ತಲು ಸೂಕ್ತ ಸನ್ನಿವೇಶ ಎಂಬುದು ಆರೆಸ್ಸೆಸ್ ಆಲೋಚನೆ ಎನ್ನಲಾಗಿದೆ.

ಒಮ್ಮತವೆಂಬುದು ದೂರವೇ ಉಳಿದಿದೆ. ಒಬ್ಬರು ಮತ್ತೊಬ್ಬರಿಗೆ ಟಾಂಗ್ ಕೊಡವುದು ಅನಿವಾರ್ಯವೇನೋ ಕಾದು ನೋಡಬೇಕಿದೆ.

(ಸೌಜನ್ಯ- ಅಜೊಯ್ ಆಶೀರ್ವಾದ್ ಮಹಾಪಾತ್ರ, ದಿ ವೈರ್)
ತರ್ಜುಮೆ-ಡಿ.ಉಮಾಪತಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಕೆಲಸಕ್ಕಾಗಿ ಮಗುವನ್ನು ಕಾಡಿಗೆ ಎಸೆದ ಪೋಷಕರು; ಬಂಡೆ ಕೆಳಗೆ ಬದುಕುಳಿದ ಶಿಶು

ಕಾಡಿನ ತಂಪಾದ ನೆಲದಲ್ಲಿ, ತೆರೆದ ಆಕಾಶದ ಕೆಳಗೆ ಆ ಮಗು ಕೂಗುತ್ತಿತ್ತು....

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿಗೆ ಆಗ್ರಹ; ದೆಹಲಿಯಲ್ಲಿ ಪ್ರತಿಭಟನೆ

ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1%...

‘ನನ್ನ ಗಂಡನನ್ನು ಭೇಟಿಯಾಗುವ ಅರ್ಹತೆ ನನಗಿಲ್ಲವೇ?’: ರಾಷ್ಟ್ರಪತಿ, ಮೋದಿಗೆ ಪತ್ರ ಬರೆದ ವಾಂಗ್ಚುಕ್ ಪತ್ನಿ

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು...

ಯುವಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ....

Download Eedina App Android / iOS

X