ಹಾಸನ ತಾಲೂಕಿನ ಮೊಸಳೆ ಹೊಸಹಳ್ಳಿ ಎಂಬಲ್ಲಿ ಗಣೇಶ ಮೆರವಣಿಗೆಯ ಮೇಲೆ ಕ್ಯಾಂಟರ್ ನುಗ್ಗಿ 8 ಮಂದಿ ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ದಾರುಣ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಘಟನೆ ಕಾರಣನಾದ ಚಾಲಕ ಭುವನೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ.
ಶುಕ್ರವಾರ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದ. ರಾಷ್ಟ್ರೀಯ ಹೆದ್ದಾರಿ 373ರ ಒಂದು ಬದಿಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಹೋಗುವಾಗ ಡಿವೈಡರ್ ದಾಟಿ ಕ್ಯಾಂಟರ್ ಗಣೇಶ ಭಕ್ತರ ಮೇಲೆ ಯಮನಂತೆ ಎರಗಿದೆ. ಇದರಿಂದಾಗಿ 5 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದಾರೆ.
ಒಬ್ಬ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವು ಕಂಡಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ನಿಧನರಾಗಿದ್ದಾರೆ. ಇಲ್ಲಿಯವರೆಗೂ 8 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
20ಕ್ಕೂ ಅಧಿಕ ಮಂದಿ ಗಾಯಾಳುವಾಗಿದ್ದು, ಕೆಲವರಿಗೆ ಗಂಭೀರ ಗಾಯಗಳಾಗಿವೆ. ಕೆಲವರ ಕೈಕಾಲುಗಳ ಮೇಲೆ ವಾಹನ ಹರಿದಿದೆ. ಘಟನೆಯ ಸಿಸಿಟಿವಿ ದೃಶ್ಯ ಸೇರಿದಂತೆ ಮೊಬೈಲ್ಗಳಲ್ಲಿ ಸೆರೆಯಾದ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಭಯಾನಕವಾಗಿದೆ.
ರಾಷ್ಟ್ರೀಯ ಹೆದ್ದಾರಿ 373ರ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಒಂದು ಕಡೆ ಮೆರವಣಿಗೆ ಸಾಗುತ್ತಿದ್ದರೆ, ಇನ್ನೊಂದೆಡೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ವೇಗದಲ್ಲಿ ಸಾಗುತ್ತಿದ್ದ ಕ್ಯಾಂಟರ್ ತನ್ನ ಎದುರಿಗೆ ಇದ್ದ ಬೈಕ್ಅನ್ನು ತಪ್ಪಿಸುವ ಭರದಲ್ಲಿ ಕ್ಯಾಂಟರ್ನ ದಿಕ್ಕನ್ನು ಬಲಕ್ಕೆ ತಿರುಗಿಸಿದ್ದಾನೆ. ವೇಗದಲ್ಲಿ ಇದ್ದ ಕಾರಣಕ್ಕೆ ಕ್ಯಾಂಟರ್ ಡಿವೈಡರ್ಗೆ ಢಿಕ್ಕಿಯಾಗಿ ಅದೇ ವೇಗದಲ್ಲಿ ಭಕ್ತರ ಮೇಲೆ ಎರಗಿದೆ.
ಶಾಂತಿಗ್ರಾಮದ ಪೊಲೀಸರಿಂದ ಕಾರ್ಯಾಚರಣೆ ನಡೆಯುತ್ತಿದೆ. ಆತ ಚಾಲನೆ ಮಾಡುವ ವೇಳೆ ಕುಡಿದಿದ್ದ ಎಂದು ಸ್ಥಳೀಯರು ಕೂಡ ತಿಳಿಸಿದ್ದಾರೆ. ಲಾರಿ ಚಾಲಕ ಅತಿವೇಗದಿಂದ ಬಂದ ಪರಿಣಮ ಈ ಭೀಕರ ಘಟನೆ ನಡೆದಿದೆ. ಸುಮಾರು 500 ಮೀಟರ್ ದೂರದಲ್ಲೇ ಬ್ಯಾರಿಕೇಡ್ ಹಾಕಿ, ಎಲ್ಲಾ ವಾಹನಗಳನ್ನು ನಿಲ್ಲಿಸಿ, ಪೊಲೀಸರು ನಿಂತಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

“ಘಟನೆ ದುರದೃಷ್ಟಕರ. ಈ ವಿಷಯದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತನಾಡುತ್ತೇನೆ. ಮೃತಪಟ್ಟ ಕುಟುಂಬಕ್ಕೆ ಕನಿಷ್ಠ 15 ರಿಂದ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ” ಎಂದು ಹೊಳೆನರಸೀಪುರ ಎಚ್ಡಿ ರೇವಣ್ಣ ಹೇಳಿದ್ದಾರೆ.
ಸರ್ಕಾರದಿಂದ 5 ಲಕ್ಷ ಪರಿಹಾರ ಘೋಷಣೆ
ಹಾಸನದಲ್ಲಿ ಗಣೇಶ ವಿಸರ್ಜನೆಗಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಲಾರಿ ಹರಿದು ಹಲವರು ಸಾವಿಗೀಡಾಗಿ, ಸುಮಾರು 20ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಸುದ್ದಿ ತಿಳಿದು ಅತೀವ ದುಃಖವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಇದು ಅತ್ಯಂತ ನೋವಿನ ಘಳಿಗೆ. ಅಪಘಾತ ಸಂತ್ರಸ್ತ ಕುಟುಂಬಗಳ ಜೊತೆ ನಾವೆಲ್ಲರೂ ನಿಲ್ಲೋಣ ಎಂದು ಸಿಎಂ, ಡಿಸಿಎಂ ಸೇರಿದಂತೆ ಹಲವು ಮಂದಿ ರಾಜಕೀಯ ನಾಯಕರುಗಳು ಟ್ವೀಟ್ ಮಾಡಿದ್ದಾರೆ.
ಲಾರಿ ಚಾಲಕನೂ ಗಾಯಾಳು:
ಮೊಸಳೆ ಹೊಸಹಳ್ಳಿಯಲ್ಲಿ ಅಪಘಾತ ಎಸಗಿದ ಲಾರಿಯ ಚಾಲಕ ಕಟ್ಟೆಬೆಳಗುಲಿ ಗ್ರಾಮದ ಭುವನೇಶನಿಗೂ ಗಂಭೀರ ಗಾಯಗಳಾಗಿದ್ದು, ಆತನನ್ನೂ ಹಿಮ್ಸ್ ಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಶನಿವಾರ ಮುಂಜಾನೆ ಹಾಸನಕ್ಕೆ ಭೇಟಿ
ಘಟನೆಯ ಮಾಹಿತಿ ಪಡೆದಿರುವ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಶನಿವಾರ ಮುಂಜಾನೆ ಹಾಸನಕ್ಲೆ ತೆರಳಲಿದ್ದೇನೆ. ಗಾಯಾಳುಗಳ ಕುಟುಂಬವನ್ನು ಭೇಟಿಯಾಗಿ, ಮಾತುಕತೆ ನಡೆಸಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಕೆ ಎಸ್ ಲತಾ ಕುಮಾರಿ, ಸಂಸದ ಶ್ರೇಯಸ್ ಪಟೇಲ್ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಮೊಕ್ಕಾಂ ಹೂಡಿದ್ದಾರೆ.
