ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಖಾನಪೇಟೆಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ 18 ನಿರ್ದೇಶಕರ ಸ್ಥಾನಗಳಿಗೆ ನಾಳೆ (ಸೆ.14) ಚುನಾವಣೆ ನಡೆಯಲಿದೆ. ಒಟ್ಟು 19,875 ಶೇರು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಮೂರು ಪೆನೆಲ್‌ಗಳ ನಡುವೆ ತೀವ್ರ ಪೈಪೋಟಿ ರೂಪುಗೊಂಡಿದೆ. ಹಾಲಿ ಅಧ್ಯಕ್ಷ ಮಲ್ಲಣ್ಣ ಯಾದವಾಡ ನೇತೃತ್ವದ ಪೆನೆಲ್, ರೈತ ಹಿತರಕ್ಷಣಾ ಸಮಿತಿ (ಹಿರೆರಡ್ಡಿ ತಂಡ) ಹಾಗೂ ರೈತ ಸಂಘಟನೆ (ಸದಾಶಿವ ಮಾತನವರ–ಬಸವರಾಜ ಕರಿಗಾರ ತಂಡ) ಚುನಾವಣಾ ಕಣದಲ್ಲಿ ಮುಖಾಮುಖಿಯಾಗಿವೆ.
ಮಲ್ಲಣ್ಣ ಯಾದವಾಡ ಪೆನೆಲ್ ಅಧಿಕಾರದಲ್ಲಿ ಸಾಧನೆಗಳನ್ನು ತೋರಿಸಿದ್ದೇವೆ, ಡಿವಿಡೆಂಡ್ ವಿತರಣೆ, ಎಫ್‌ಡಿ ಮೊತ್ತ ಜಮೆ, ಉತ್ತಮ ಗುಣಮಟ್ಟದ ಸಕ್ಕರೆ ಹಂಚಿಕೆ ಸಾಲಮುಕ್ತ ಕಾರ್ಖಾನೆ ಮುಂತಾದವು ನಮ್ಮ ಬಲವೆಂದು ಪ್ರಚಾರ ಮಾಡಿದ್ದಾರೆ. ಇತ್ತ
ರೈತ ಹಿತರಕ್ಷಣಾ ಸಮಿತಿ, ಕಾರ್ಖಾನೆಯ ಸ್ಥಾಪನೆಗೆ ಶ್ರಮಿಸಿದ ಬಿ.ಬಿ. ಹಿರೆರಡ್ಡಿ ಅವರ ಹೆಸರಿನಲ್ಲಿ ಹಾಗೂ ರೈತರಿಗಾಗಿ ಆಸ್ಪತ್ರೆ ಸೇರಿದಂತೆ ಅನೇಕ ಭರವಸೆ ಮೂಲಕ ಪ್ರಚಾರ ನಡೆಸುತ್ತಿದ್ದು, ರೈತರ ಭಾವನಾತ್ಮಕ ಬೆಂಬಲವನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ರೈತ ಸಂಘಟನೆ ಪೆನೆಲ್ ರೈತರಿಗೆ CBSE ಶಾಲೆ, ಕಲ್ಯಾಣ ಮಂಟಪ, ರಸಗೊಬ್ಬರ, ಕಬ್ಬು ವಾಹನ ನಿಲುಗಡೆ ವ್ಯವಸ್ಥೆ ಮುಂತಾದ ಭರವಸೆಗಳನ್ನು ನೀಡುತ್ತ, ಬದಲಾವಣೆಯ ಅಗತ್ಯವಿದೆ ಎಂದು ಹೇಳುತ್ತಿದೆ.

ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಣ್ಣ ಯಾದವಾಡರ ಮಾತನಾಡಿ, “ಚುನಾವಣೆಯ ಕಾರಣಕ್ಕಾಗಿ ಆರೋಪ ಮಾಡುವುದು ಸರಿಯಲ್ಲ. ನಾವು ಅಧಿಕಾರ ವಹಿಸಿಕೊಂಡ ಮೇಲೆ ಶೇರುದಾರರಿಗೆ ಉತ್ತಮ ಗುಣಮಟ್ಟದ ಸಕ್ಕರೆ ನೀಡಿದ್ದೇವೆ. 39.7% ಡಿವಿಡೆಂಟ್ ವಿತರಿಸಿದ್ದೇವೆ. ಕಾರ್ಖಾನೆಯ ಹೆಸರಿನಲ್ಲಿ 11 ಕೋಟಿ ರೂ ಎಫ್‌ಡಿ ಇಟ್ಟು, ಇನ್ನೂ 3 ಕೋಟಿ ರೂ ಎಫ್‌ಡಿ ಮಾಡಲು ತಯಾರಿ ನಡೆಸುತ್ತಿದ್ದೇವೆ. ಒಟ್ಟು 14 ಕೋಟಿ ರೂ ಎಫ್‌ಡಿ ನಮ್ಮ ಆಡಳಿತದಲ್ಲಿ ಜಮೆಯಾಗಲಿದೆ. ಇಷ್ಟೆಲ್ಲ ಸಾಧನೆ ಮಾಡಿದರೂ ಕೆಲವು ಮಂದಿ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ವಿರಭದ್ರೇಶ್ವರ, ಆಂಜನೇಯ, ಕರಿಯಮ್ಮದೇವಿ ಸಾಕ್ಷಿಯಾಗಿ ಹೇಳುತ್ತೇನೆ; ಯಾವುದೆ ಅವ್ಯವಹಾರ ಮಾಡಿಲ್ಲ. 2004ರಲ್ಲಿ ಮಹಾದೇವಪ್ಪ ಯಾದವಾಡ ಶಾಸಕರಾಗಿದ್ದ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಚಿವ ಸಂಪುಟದ ಮೂಲಕ ಒಪ್ಪಿಗೆ ಪಡೆದು ಕಾರ್ಖಾನೆಯನ್ನು ಮರು ಆರಂಭ ಮಾಡಲಾಗಿದೆ. ಈ ಚುನಾವಣೆಯಲ್ಲಿಯೂ ನಮ್ಮ ಪೆನೆಲ್ ಗೆಲುವು ಸಾಧಿಸಿ ಉತ್ತಮ ಆಡಳಿತ ನೀಡುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತ ಸಂಘಟನೆಯ ಅಭ್ಯರ್ಥಿ ಸದಾಶಿವ ಮಾತನವರ ಮಾತನಾಡಿ, “ಮಲ್ಲಣ್ಣ ಯಾದವಾಡ ಹಿಂದಿನ ಅವಧಿಯಲ್ಲಿ 19,875 ಎಲ್ಲ ಮತದಾರರಿಗೆ ಅವಕಾಶ ಮಾಡಿಕೊಡದೆ ಅನ್ಯಾಯ ಮಾಡಿದರು. ನಾವು ಹೋರಾಟ ಮಾಡಿ ಎಲ್ಲರಿಗೂ ಮತದಾನದ ಹಕ್ಕು ದೊರೆಯುವಂತೆ ಮಾಡಿದ್ದೇವೆ. ಪ್ರತಿ ವರ್ಷ ಕಬ್ಬಿನ ಬಿಲ್ ಕೇವಲ 200 ರೂ ಕೊಡುತ್ತಿದ್ದರು. ನಾವು ಗೆದ್ದರೆ CBSE ಶಾಲೆ ಪ್ರಾರಂಭಿಸುತ್ತೇವೆ, ರೈತರ ಕಬ್ಬಿನ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡುತ್ತೇವೆ, ರೈತರಿಗೆ ರಸಗೊಬ್ಬರ ಒದಗಿಸುತ್ತೇವೆ” ಎಂದು ಭರವಸೆ ನೀಡಿದರು.

ಮತ್ತೋರ್ವ ಅಭ್ಯರ್ಥಿ ಬಸವರಾಜ ಕರಿಗಾರ ಮಾತನಾಡಿ, “ಇದು ರೈತರ ಕಾರ್ಖಾನೆ. ರೈತರೆ ನಿರ್ದೇಶಕರಾಗಬೇಕು ಎನ್ನುವುದು ನಮ್ಮ ಆಶಯ. ಆದರೆ ಸರಿಯಾದ ವ್ಯವಸ್ಥೆ ಮಾಡದೆ ಚುನಾವಣೆಯನ್ನು ನಡೆಸುತ್ತಿದ್ದಾರೆ. ಇದು ರೈತರಿಗೆ ಅನ್ಯಾಯ” ಎಂದು ಆರೋಪಿಸಿದರು.
ಇದನ್ನೂ ಓದಿ: ಬೆಳಗಾವಿ | ಧರ್ಮಾಂದತೆಯ ‘ದ್ವೇಷ’ದ ವಿಷವನ್ನು ಸೋಲಿಸಿದ ಮುಸ್ಲಿಮ್ ಶಿಕ್ಷಕನ ‘ಪ್ರೀತಿ’

ರೈತ ಹಿತರಕ್ಷಣಾ ಸಮಿತಿಯ ಶಿವಪ್ಪ ಲಮಾಣಿ ಮಾತನಾಡಿ, “ಮಲ್ಲಣ್ಣ ಯಾದವಾಡ ಅವರು ರೈತರನ್ನು ಮತದಾರರ ಪಟ್ಟಿಯಿಂದ ಹೊರಗಡೆ ಹಾಕಿ ಚುನಾವಣೆಯನ್ನು ನಡೆಸಿ ಅಧಿಕಾರ ದುರುಪಯೋಗ ಮಾಡಿದ್ದಾರೆ. ರೈತರ ಶೇರು ಹಣದಿಂದ ಸಕ್ಕರೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ವಾಸ್ತವದಲ್ಲಿ ಕಾರ್ಖಾನೆಯ ಲಾಭದಿಂದ ಸಕ್ಕರೆ ಹಂಚಲಾಗಿದೆ. ಇದಕ್ಕೆಲ್ಲ ಕಾರಣ ಮಾಜಿ ಶಾಸಕರಾದ ಬಿ ಬಿ ಹಿರೆರಡ್ಡಿ. ರೈತರ ಮಕ್ಕಳಿಗೆ ಶಾಲೆ, ಆಸ್ಪತ್ರೆ, ಕಲ್ಯಾಣ ಮಂಟಪ ನಿರ್ಮಾಣ ಆಗಬೇಕಿತ್ತು. ಆದರೆ, ಆಗಿಲ್ಲ. ನಾವು ಗೆದ್ದರೆ ಈ ಎಲ್ಲ ಸೌಲಭ್ಯಗಳನ್ನು ರೈತರಿಗೆ ನೀಡುತ್ತೇವೆ” ಎಂದು ಭರವಸೆ ನೀಡಿದರು.
ಕಾರ್ಖಾನೆಯು ರೈತರ ಶ್ರಮದಿಂದ ನಿರ್ಮಿತವಾಗಿದೆ. ಇದು ಯಾರ ಮಾಲಿಕತ್ವದಲ್ಲಿಯೂ ಇಲ್ಲ. ಸಾಲ ಮುಕ್ತ ಕಾರ್ಖಾನೆಯಾಗಿರುವುದು ಹೆಮ್ಮೆ. ಯಾರೇ ಅಧಿಕಾರಕ್ಕೆ ಬಂದರೂ ರೈತರ ಕಬ್ಬು ಬೇಗನೆ ಕಾರ್ಖಾನೆಯಲ್ಲಿ ನುರಿಯುವಂತಾಗಬೇಕು. ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶೇರುದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು