ಧರ್ಮಗ್ರಂಥಗಳಾದ ಕುರ್ಆನ್, ಭಗವದ್ಗೀತೆ, ಬೈಬಲ್ ಸೇರಿದಂತೆ ಎಲ್ಲ ಧರ್ಮ ಗ್ರಂಥಗಳಲ್ಲಿನ ಸಂದೇಶಗಳನ್ನು ಮುಸಲ್ಮಾನರು, ಹಿಂದೂಗಳು, ಕ್ರೈಸ್ತರು ಪರಸ್ಪರ ಹಂಚಿಕೊಳ್ಳುವಂತಾಗಬೇಕು. ಆ ರೀತಿಯ ಕೊಡುಕೊಳ್ಳುವಿಕೆಯ ಸಂಬಂಧಗಳು ಬೆಳೆದರೆ ಮಾತ್ರ ಮನುಷ್ಯರು ಒಂದಾಗಿ, ಇನ್ನೊಬ್ಬರನ್ನು ಸಹಿಸಿಕೊಂಡು ಇರಲು ಸಾಧ್ಯ ಎಂದು ಕನ್ನಡದ ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಿಸಿದರು.
ಸೀರತ್ ಅಭಿಯಾನದ ಭಾಗವಾಗಿ ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ಘಟಕದ ವತಿಯಿಂದ “ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ)” ವಿಷಯದಡಿಯಲ್ಲಿ ಸೆಪ್ಟೆಂಬರ್ 13ರ ಶನಿವಾರದಂದು ಬೆಂಗಳೂರಿನ ಬಸವ ಸಮಿತಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಸ್ಲಾಂ ಧರ್ಮದಲ್ಲಿ ನ್ಯಾಯಪರ ಸೇರಿದಂತೆ ಹಲವು ಮಹತ್ವದ ಮೌಲ್ಯಗಳಿವೆ. ಅದರಿಂದಾಗಿಯೇ ಇಸ್ಲಾಂ ಧರ್ಮವು ಜಗತ್ತಿನಲ್ಲಿ ಹಲವರನ್ನು ಆಕರ್ಷಿಸಲು ಕಾರಣವಾಗಿತ್ತು. ಆದರೆ, ಇಸ್ಲಾಂ ಧರ್ಮವು ಖಡ್ಗದ ಮೂಲಕ ಪಸರಿಸಲಾಗಿದೆ ಎಂದು ಜಗತ್ತಿನಲ್ಲಿ ವ್ಯವಸ್ಥಿತವಾಗಿ ಸುಳ್ಳು ಹರಡಿಸಲಾಗಿದೆ ಎಂದು ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.
ಪ್ರವಾದಿ ಮುಹಮ್ಮದ್ 6ನೇ ಶತಮಾನದಲ್ಲಿ ಆಝಾನ್ ಕೊಡಲು ತನ್ನ ಸುತ್ತಮುತ್ತ ಉನ್ನತ ವ್ಯಕ್ತಿತ್ವಗಳಿದ್ದರೂ ಕೂಡ ಬಿಲಾಲ್ ಎನ್ನುವ ಕಪ್ಪು ವರ್ಣದವನಿಗೆ ಅವಕಾಶ ಮಾಡಿಕೊಟ್ಟಿದ್ದರು. ಆ ಮೂಲಕ ಮನುಷ್ಯರೆಲ್ಲರೂ ಸಮಾನರು ಎಂಬ ಪಾಠವನ್ನು ಕಲಿಸಿದ್ದರು. ತಾನು ಬದುಕಿದ್ದ ಸಮಯದಲ್ಲಿ ಅರೇಬಿಯಾದಲ್ಲಿ ಹೆಣ್ಣು ಮಕ್ಕಳ ಪರವಾಗಿ, ದೀನ ದಲಿತರ ಪರವಾಗಿ ಕರುಣೆಯಿಂದ ಕೆಲಸ ಮಾಡಿದ್ದರು. ‘ನೆರೆಮನೆಯವನು ಹಸಿದಿರುವಾಗ, ನೀವು ಹೊಟ್ಟೆ ಪೂರ್ತಿ ತಿನ್ನಬೇಡಿ, ಹಂಚಿಕೊಂಡು ತಿನ್ನಿ’ ಎನ್ನುವ ಮೂಲಕ ಪ್ರವಾದಿ ಮುಹಮ್ಮದ್ ಅವರು ಬಂಡವಾಳಶಾಹಿಗಳ ವಿರೋಧಿ ಎಂದು ತೋರಿಸಿಕೊಟ್ಟಿದ್ದರು. ಝಕಾತ್ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಔದಾರ್ಯ ಮೆರೆದಿದ್ದರು ಎಂದು ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.
ಇದನ್ನು ಓದಿದ್ದೀರಾ? ಹಾಸನ ದುರಂತ | ಟ್ರಕ್ ಚಾಲಕ ಮುಸ್ಲಿಂ ಎಂಬ ರೀತಿಯಲ್ಲಿ ಬಿಂಬಿಸುವ ಯತ್ನ ಮಾಡಲಾಗಿತ್ತು: ಸಚಿವ ಕೃಷ್ಣ ಬೈರೇಗೌಡ
ಇಂದಿನ ರಾಜಕಾರಣಿಗಳಲ್ಲಿ ಬರೀ ಅಸಹನೆಯಷ್ಟೇ ಕಾಣುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆ ಎಂಬಂತೆ ನಮ್ಮ ಕನ್ನಡ ಭಾಷೆಯನ್ನು ಎತ್ತರಕ್ಕೆ ಕೊಂಡೊಯ್ದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದನ್ನು ವಿವಾದವನ್ನಾಗಿಸಲಾಗುತ್ತಿದೆ. ಮುಸ್ಲಿಂ ಎಂಬ ಕಾರಣಕ್ಕೆ ಬಾನು ಅವರು ದಸರಾದಲ್ಲಿ ಭಾಗವಹಿಸದಂತೆ ತಡೆಯಲು ಶ್ರಮಿಸುತ್ತಿರುವುದು ದೊಡ್ಡ ಧಾರ್ಮಿಕ ಅಪಚಾರ ಎಂದು ವಿರೋಧಿಸುತ್ತಿರುವವರಿಗೆ ತಿಳಿಯುತ್ತಿಲ್ಲ ಅನ್ನುವುದೇ ವಿಷಾದದ ಸಂಗತಿ. ಎಲ್ಲರನ್ನೂ ಒಳಗೊಂಡರೆ ಮಾತ್ರ ನಮ್ಮ ಸಮಾಜ ಬೆಳೆಯುವುದಕ್ಕೆ ಸಾಧ್ಯ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಿಸಿದರು.
