ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಚುನಾವಣೆ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಿದೆ. ಮೂರು ದಶಕಗಳ ಕಾಲ ಬ್ಯಾಂಕಿನ ಮೇಲೆ ಪಾರಮ್ಯ ಸಾಧಿಸಿದ್ದ ಕತ್ತಿ ಕುಟುಂಬವನ್ನು ದೂರ ಇಡಲು ಜಾರಕಿಹೊಳಿ ಸಹೋದರರು ಇನ್ನಿಲ್ಲದ ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕತ್ತಿ ಕುಟುಂಬದ ಆಪ್ತರು ‘ಗ್ರಾಮದೇವಿ ಮೇಲೆ ಆಣೆ’ ಮಾಡಲು ತಂತ್ರ ರೂಪಿಸಿದ್ದಾರೆ.
ಅಕ್ಟೋಬರ್ 19ರಂದು ಈ ಬ್ಯಾಂಕ್ ಚುನಾವಣೆ ನಿಗದಿಯಾಗಿದೆ. ಆದರೆ, ತಿಂಗಳ ಹಿಂದಿನಿಂದಲೇ ಇನ್ನಿಲ್ಲದ ಸರ್ಕಸ್ ಆರಂಭವಾಗಿವೆ. ಇಷ್ಟು ವರ್ಷ ಬ್ಯಾಂಕಿನತ್ತ ತಲೆ ಹಾಕದ ಜಾರಕಿಹೊಳಿ ಸಹೋದರರು ಈಗ ಶತಾಯ ಗತಾಯ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಆದರೆ, ತಮ್ಮ ನಾಯಕನನ್ನು ಬಿಟ್ಟುಕೊಡಲು ಒಲ್ಲದ ಹುಕ್ಕೇರಿ ತಾಲೂಕಿನ ಹಲವರು ಆಣೆ ಪ್ರಮಾಣದ ಮೊರೆ ಹೋಗಿದ್ದಾರೆ. ಮೇಲಾಗಿ, ಇದರ ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲೂ ಹರಿಬಿಟ್ಟಿದ್ದಾರೆ. ಚುನಾವಣೆಯಲ್ಲಿ ಕತ್ತಿ ಕುಟುಂಬ ಹಾಗೂ ಜಾರಕಿಹೊಳಿ ಸಹೋದರರ ಹಗ್ಗ ಜಗ್ಗಾಟದಲ್ಲಿ ಗೆಲ್ಲುವವರಾರೆಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಬೆಳಗಾವಿ | ಧರ್ಮಾಂದತೆಯ ‘ದ್ವೇಷ’ದ ವಿಷವನ್ನು ಸೋಲಿಸಿದ ಮುಸ್ಲಿಮ್ ಶಿಕ್ಷಕನ ‘ಪ್ರೀತಿ’