ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಶುರುವಾಗಿ ಎರಡು ವರ್ಷಗಳು ತುಂಬಿದ ಬಳಿಕ ಮಣಿಪುರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧ ಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಂಡಿವೆ. “ಇದೊಂದು ಪ್ರಹಸನ. ಎರಡು ವರ್ಷಗಳ ಕಾಲ ಮಣಿಪುರ ರಾಜ್ಯವನ್ನು ಮೋದಿ ನಿರ್ಲಕ್ಷಿಸಿದರು” ಎಂದು ಟೀಕಿಸಿವೆ.
“ಪ್ರಧಾನಿಯವರು ಮೂರು ಗಂಟೆ ಕಾಲ ಮಣಿಪುರದಲ್ಲಿ ಹಮ್ಮಿಕೊಂಡ ಪ್ರವಾಸವು ರಾಜ್ಯದ ಜನತೆಗೆ ಮಾಡಿರುವ ಗಂಭೀರ ಅವಮಾನ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, “ಮಣಿಪುರದಲ್ಲಿ ನಿಮ್ಮ 3 ಗಂಟೆಗಳ ವಿಶ್ರಾಂತಿಯು ಕರುಣೆಯನ್ನು ಹೊಂದಿಲ್ಲ. ಅದೊಂದು ಪ್ರಹಸನ, ಗಾಯಗೊಂಡ ಜನರಿಗೆ ಮಾಡುವ ಗಂಭೀರ ಅವಮಾನ. ನಿರಾಶ್ರಿತರ ಶಿಬಿರಗಳಲ್ಲಿನ ಜನರ ಕೂಗನ್ನು ಕೇಳಿಸಿಕೊಳ್ಳದೆ, ಹೇಡಿತನದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಇಂಫಾಲ ಮತ್ತು ಚೂರಾಚಾಂದ್ಪುರದಲ್ಲಿ ರೋಡ್‌ಶೋ ನಡೆಸಿದಿರಿ” ಎಂದಿದ್ದಾರೆ.
ಇದನ್ನೂ ಓದಿರಿ: ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್ ವಿರುದ್ಧದ ಪ್ರಕರಣ ರದ್ದತಿಗೆ ಸುಪ್ರೀಂ ನಕಾರ
“2023ರಿಂದ ಈವರೆಗೆ 300 ಜೀವಗಳು ಬಲಿಯಾಗಿವೆ, 67,000 ಜನರು ಸ್ಥಳಾಂತರವಾಗಿದ್ದಾರೆ. 1,500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೋದಿ ಮಣಿಪುರಕ್ಕೆ ಭೇಟಿ ನೀಡಿಲಿಲ್ಲ. ಆದರೆ 46 ವಿದೇಶಿ ಪ್ರವಾಸಗಳನ್ನು ಮಾಡಿದರು. ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಮೂಲಭೂತ ಸಾಂವಿಧಾನಿಕ ಜವಾಬ್ದಾರಿಗಳನ್ನು ತ್ಯಜಿಸಿ ರಾಷ್ಟ್ರಪತಿ ಆಳ್ವಿಕೆಯ ಹಿಂದೆ ಅಡಗಿ ಕೂತಿದೆ” ಎಂದು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರತಿಕ್ರಿಯಿಸಿ, “ಭೇಟಿ ನೀಡಲು ಯೋಗ್ಯವಾದ ಸಮಯ ಬಂದಿದೆ ಎಂದು ಎರಡು ವರ್ಷಗಳ ನಂತರ ಮೋದಿ ನಿರ್ಧರಿಸಿದ್ದಾರೆ. ನನಗೆ ಸಂತೋಷವಾಗಿದೆ. ಅವರು ಬಹಳ ಹಿಂದೆಯೇ ಭೇಟಿ ನೀಡಬೇಕಿತ್ತು. ಮಣಿಪುರದ ದಳ್ಳುರಿ ಇಷ್ಟು ದಿನ ಮುಂದುವರಿಯಲು ಬಿಟ್ಟಿದ್ದು ದುರದೃಷ್ಟಕರ” ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರತಿಕ್ರಿಯಿಸಿ, “ತಡವಾಗಿಯಾದರೂ ಮುಖ ಉಳಿಸಿಕೊಳ್ಳುವ ಪ್ರಹಸನ ನಡೆದಿದೆ” ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ತಡವಾಗಿಯಾದರೂ ಅವರು ಭೇಟಿ ನೀಡುತ್ತಿರುವುದು ಒಳ್ಳೆಯ ವಿಷಯ. ಶಾಂತಿ ಮರುಸ್ಥಾಪಿಸಿ, ಎರಡು ಸಮುದಾಯಗಳು ಸಹಜ ಜೀವನಕ್ಕೆ ಹಿಂತಿರುಗಬಹುದೆಂದು ಭಾವಿಸಿದ್ದೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿರಿ: ಮೋದಿ ಮಣಿಪುರ ಭೇಟಿಗಿಂತ ವೋಟ್ ಚೋರಿ ಮುಖ್ಯ ಸಮಸ್ಯೆ: ರಾಹುಲ್ ಗಾಂಧಿ
ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಪ್ರತಿಕ್ರಿಯಿಸಿ, “ಪ್ರಧಾನಿಯವರು ಮಣಿಪುರಕ್ಕೆ ಎಲ್ಲಾ ಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಲಿ ಎಂದು ವಿರೋಧ ಪಕ್ಷಗಳು ಹೇಳುತ್ತಲೇ ಬಂದಿವೆ. ಆಗ ಮಾತ್ರ ರಾಜ್ಯವನ್ನು ಶಾಂತಿ ಮತ್ತು ನೆಮ್ಮದಿಗೆ ಮರಳಿ ತರಬಹುದು. ಮೋದಿ ಭೇಟಿ ತುಂಬಾ ತಡವಾಗಿದೆ. ಆದಾಗ್ಯೂ, ನಾವು ಈ ನಡೆಯನ್ನು ಬೆಂಬಲಿಸುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆಂದು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಚುನಾವಣೆಯ ಪ್ರಧಾನ: ಡಿಎಂಕೆ
2027ರಲ್ಲಿ ಎದುರಾಗುವ ಚುನಾವಣೆ ಮುಖ್ಯವಾಗಿದೆ ಹೊರತು, ಜನರ ಮೇಲೆ ಕರುಣೆ ಏನಿಲ್ಲ ಎಂದು ಡಿಎಂಕೆ ಸಂಸದ ಕನ್ನಿಮೋಳಿ ವಾಗ್ದಾಳಿ ನಡೆಸಿದ್ದಾರೆ.
“ಎರಡು ವರ್ಷಗಳಿಗೂ ಹೆಚ್ಚು ಕಾಲ ಮಣಿಪುರ ಉರಿಯುತ್ತಿದೆ. ಭಾರತದ ಪ್ರಧಾನಿ ಅಂತಿಮವಾಗಿ ಮಣಿಪುರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಇಲ್ಲಿ ಕರುಣೆ ಏನಿಲ್ಲ, 2027ರ ಚುನಾವಣಾ ಸಿದ್ಧತೆಗಳು ಮಣಿಪುರವನ್ನು ನೆನಪಿಸುವಲ್ಲಿ ಯಶಸ್ವಿಯಾಗಿವೆ” ಎಂದು ವ್ಯಂಗ್ಯವಾಡಿದ್ದಾರೆ.
ಇಂಫಾಲದಲ್ಲಿ ಪ್ರತಿಭಟನೆ
ಇಂಫಾಲ ಕಾಂಗ್ರೆಸ್ ಯುವ ಘಟಕ ಮತ್ತು ಮಣಿಪುರ ಪೀಪಲ್ಸ್ ಪಾರ್ಟಿಯ ಕಾರ್ಯಕರ್ತರು ಪ್ರಧಾನಿ ಭೇಟಿ ನೀಡಿದ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. “ಇದು ರಾಜಕೀಯ ತಂತ್ರ” ಎಂದು ಆಕ್ರೋಶ ಹೊರಹಾಕಿದ್ದಾರೆ.
