ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆಯನ್ನು ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಆದರೆ, ಓರ್ವ ಪುರುಷ ಮತ್ತು ಮಹಿಳೆ ಸಹೋದರ-ಸಹೋದರಿಯಂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಒಡಿಶಾದ ಕಾಶಿಪುರ ಗ್ರಾಮದ ಮಹಿಳೆಯು ಮಯೂರ್ಭಂಜ್ ಜಿಲ್ಲೆಯ ಜಶಿಪುರ ವಾರದ ಮಾರುಕಟ್ಟೆಗೆ ಇಬ್ಬರು ಪುರುಷರೊಂದಿಗೆ ಬೈಕ್‌ನಲ್ಲಿ ತೆರಳಿದ್ದರು. ಅವರು ಗ್ರಾಮಕ್ಕೆ ಮರಳಿ ಬರುವಾಗ ಅವರನ್ನು ಕುಟುಂಬದ ಸದಸ್ಯರು ಗಮನಿಸಿದ್ದು, ಅವರನ್ನು ತಡೆದಿದ್ದಾರೆ.
ಈ ವೇಳೆ, ಕುಟುಂಬಸ್ಥರು ಮತ್ತು ಪುರುಷರ ನಡುವೆ ಗಲಾಟೆ ನಡೆದಿದೆ. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಮಹಿಳೆ ಮತ್ತು ಇಬ್ಬರು ಪುರುಷರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಮಹಿಳೆ ಮತ್ತು ಆ ಇಬ್ಬರು ಪುರುಷರು ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಸರದಿಯಲ್ಲಿ ಥಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಅವರನ್ನು ಗ್ರಾಮಸ್ಥರು ಹೊಡೆಯುತ್ತಿರುವುದು, ಒದೆಯುತ್ತಿರುವುದು ಹಾಗೂ ಕೋಲುಗಳಿಂದ ಥಳಿಸುತ್ತಿರುವುದು ಕಂಡುಬಂದಿದೆ.
ಮಹಿಳೆ ಮಾರುಕಟ್ಟೆಗೆ ಹೋಗಿದ್ದ ಪುರುಷರಲ್ಲಿ ಒಬ್ಬ ಆಕೆಯ ಸಂಬಂಧಿಯೇ ಆಗಿದ್ದು, ಆಕೆಯ ಸಹೋದರನಂತೆ ಇದ್ದನು. ಆದರೆ, ಅವರಿಬ್ಬರ ನಡುವೆ ವಿವಾಹೇತರ ಸಂಬಂಧವಿತ್ತು ಎಂದು ಆಕೆಯ ಚಿಕ್ಕಪ್ಪ ಮತ್ತು ಇತರರು ಅನುಮಾನಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆ ಮತ್ತು ಪುರುಷರನ್ನು ಪೊಲೀಸರು ರಕ್ಷಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.