ಔರಾದ ತಾಲೂಕಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶನಿವಾರ ಔರಾದ್ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದ ವೇದಿಕೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ಕೆಪಿಸಿಸಿ ಸಾಮಾಜಿಕ ಮಾಧ್ಯಮ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ ಕೊಳ್ಳುರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಅಗೌರವ ತೋರಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಸಕ ಪ್ರಭು ಚವ್ಹಾಣ ವಿರುದ್ಧ ಧಿಕ್ಕಾರ ಕೂಗಿದರು.
ʼಸರ್ಕಾರದ ನಿಯಮದಂತೆ ಶಿಕ್ಷಣ ಇಲಾಖೆ ಕಾರ್ಯಕ್ರಮ ಏರ್ಪಡಿಸಿದೆ. ಆದರೆ, ಬ್ಯಾನರ್ ಮೇಲೆ ಸಿಎಂ. ಡಿಸಿಎಂ, ಶಿಕ್ಷಣ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರ ಹಾಕದೆ ಕೇವಲ ಸ್ಥಳೀಯ ಶಾಸಕ ಪ್ರಭು ಚವ್ಹಾಣ ಅವರ ಭಾವಚಿತ್ರ ಹಾಕದೆ ಅಗೌರವ ತೋರಲಾಗಿದೆ. ತಾಲ್ಲೂಕು ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸಿದ್ದು ಖಂಡನೀಯʼ ಎಂದು ಮುಖಂಡ ಸುಧಾಕರ್ ಕೊಳ್ಳುರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ವೇದಿಕೆ ಮೇಲೆ ಶಾಸಕ ಪ್ರಭು ಚವ್ಹಾಣ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಕಾಂಗ್ರೆಸ್ ಮುಖಂಡರನ್ನು ಕರೆದೊಯ್ದು ವಾತಾವರಣ ತಿಳಿಗೊಳಿಸಿದರು. ಬಳಿಕ ಕಾರ್ಯಕ್ರಮ ಜರುಗಿತು.
ಇದನ್ನೂ ಓದಿ : ಬೀದರ್ | ವಿದ್ಯಾರ್ಥಿಗಳ ʼಬರʼ : ಬಾಗಿಲು ಮುಚ್ಚಿದ ಸರ್ಕಾರಿ ಪದವಿ ಪೂರ್ವ ಕಾಲೇಜು!
ಈ ವೇಳೆ ಮುಖಂಡರಾದ ಸುನೀಲ್ ಮಿತ್ರಾ, ಚಂದು ಡಿಕೆ, ರಾಜು ಮುದಾಳೆ, ರತ್ನದೀಪ ಕಸ್ತೂರೆ, ಮಾರುತಿ ಸೂರ್ಯವಂಶಿ, ಆನಂದ್ ಕಾಂಬಳೆ, ರಾಹುಲ್ ಜಾದವ್, ಅನೀಲ್ ಒಡೆಯಾರ್, ಸೂರ್ಯಕಾಂತ ಕಾಂಬ್ಳೆ ಮತ್ತಿತರರು ಇದ್ದರು.