ಒಳಮೀಸಲಾತಿ ಹಂಚಿಕೆ ವಿಚಾರದಲ್ಲಿ ಕರ್ನಾಟಕದ 49 ಅಸ್ಪೃಶ್ಯ ಅಲೆಮಾರಿ ಸಮುದಾಯಗಳು ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿಗಳಿಗೆ ಆಗಿರುವ ಘೋರ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತುರ್ತು ಮಧ್ಯಪ್ರವೇಶಬೇಕು ಎಂದು ಕೋರಿ 49 ಅಸ್ಪೃಶ್ಯ ಅಲೆಮಾರಿ ಸಮುದಾಯ ಮತ್ತು ಸೂಕ್ಷ್ಮ ಪರಿಶಿಷ್ಟ ಜಾತಿಗಳ ಮಹಾ ಒಕ್ಕೂಟ ಮನವಿ ಮಾಡಿದೆ.
ಮೀಸಲಾತಿ ತಾರತಮ್ಯ ಸರಿಪಡಿಸುತ್ತಾರೆ ಎನ್ನುವ ನಿರೀಕ್ಷೆ ಹೊತ್ತು ರಾಹುಲ್ ಗಾಂಧಿ ಅವರಿಗೆ 49 ಅಸ್ಪೃಶ್ಯ ಅಲೆಮಾರಿ ಸಮುದಾಯ ಮತ್ತು ಸೂಕ್ಷ್ಮ ಪರಿಶಿಷ್ಟ ಜಾತಿಗಳ ಮಹಾ ಒಕ್ಕೂಟ ‘ಅಂತಿಮ ಭರವಸೆ ಪತ್ರ’ವನ್ನು ಬರೆದಿದ್ದು, ಇದೇ ವೇಳೆ ಅಕ್ಟೋಬರ್ 2 ರಂದು ನಡೆಯುವ ಗಾಂಧಿ ಜಯಂತಿಯಂದು ಅಲೆಮಾರಿಗಳ ಸಮುದಾಯ ‘ದೆಹಲಿ ಚಲೋ’ ನಡೆಸಲಿದೆ” ಎಂದು ಹೇಳಿದೆ.
49 ಅಲೆಮಾರಿ ಸಮುದಾಯಗಳನ್ನು ಮತ್ತು 10 ಸೂಕ್ಷ್ಮ ಪರಿಶಿಷ್ಟ ಜಾತಿ ಸಮುದಾಯಗಳನ್ನು ಒಳಗೊಂಡಂತೆ 59 ಸಮುದಾಯಗಳನ್ನು ಸಿ ಗುಂಪಿನ ಬಲಾಡ್ಯ ಸ್ಪೃಶ್ಯ ಸಮುದಾಯಗಳ ಜೊತೆಗೆ ಸೇರಿಸಿದೆ. ಈ ಬಲಾಡ್ಯ ಜಾತಿಗಳ ಜೊತೆಗೆ ಈ ಚಿಕ್ಕಚಿಕ್ಕ ಸಮುದಾಯಗಳನ್ನು ಸೇರಿಸಿರುವುದು ಭಾರತದ ಸರ್ವೋಚ್ಚ ನ್ಯಾಯಾಲಯವು ಒಳಮೀಸಲಾತಿಗೆ ಸಂಬಂಧಿಸಿದಂತೆ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ಸೂಕ್ಷ್ಮ ಪರಿಶಿಷ್ಟ ಜಾತಿಗಳ ಮಹಾ ಒಕ್ಕೂಟ ತಿಳಿಸಿದೆ.
ಮೀಸಲಾತಿ ಅನ್ಯಾಯದ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲು ಅಲೆಮಾರಿ ಸಮುದಾಯದ ಮುಖಂಡರು ನಿಯೋಗದಲ್ಲಿ ತೆರಳಿದ್ದೆವು. ಆದರೆ ಮುಖ್ಯಮಂತ್ರಿಯವರು ಒಳಮೀಸಲಾತಿಯ ತಮ್ಮ ಸರಕಾರದ ಆದೇಶವನ್ನು ಪರಿಪರಿಶೀಲನೆ ಮಾಡಲು ಒಪ್ಪಲಿಲ್ಲ. ಆದರೆ ಪರಿಶಿಷ್ಟಜಾತಿಯೊಳಗಿನ ಇತರೆಲ್ಲಾ ಸಮುದಾಯಗಳ ಸಚಿವರುಗಳಿಗಳಿಗೆಲ್ಲಾ ತಮ್ಮ ಸಮುದಾಯದ ಹಿತಾಸಕ್ತಿ ಕಾಪಾಡಿಕೊಳ್ಳಲು ಅಲೆಮಾರಿ ಸಮುದಾಯಗಳ ಹಿತವನ್ನು ಬಲಿಕೊಟ್ಟಿದ್ದಾರೆ. ಇದೊಂದು ರಾಜಕೀಯ ಅಪರಾಧವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ನಮ್ಮ ಪರವಾಗಿ ಯಾವ ರಾಜಕೀಯ ಲಾಬಿಯೂ ಇಲ್ಲ. ಕರ್ನಾಟಕದ ಮಾನವಂತ ಜನರ ಪ್ರೀತಿ ಮಾತ್ರ ನಮ್ಮೊಡನಿದೆ. ತಮ್ಮನ್ನು ಕಾಣುವುದೂ ನಮ್ಮಂಥ ನಿರ್ಲಕ್ಷಿತ ಸಮುದಾಯಕ್ಕೆ ಸುಲಭವಲ್ಲ ಎಂಬ ಅರಿವೂ ನಮಗಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ನೀವು, ನಿಮ್ಮ ತಾಯಿಯವರಾದ ಸೋನಿಯಾಗಾಂಧಿಯವರು, ಎಲ್ಲಾ ಕಾಂಗ್ರೆಸ್ ಹೈಕಮಾಂಡಿನ ಮುಖ್ಯರು ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಲು ಬರುವುದನ್ನು ನಾವು ಗಮನಿಸಿದ್ದೇವೆ. ಈ ಬಾರಿಯೂ ನೀವು ಬರುತ್ತೀರಿ. ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು ಎಂದು ತೀರ್ಮಾನಿಸಿದ್ದೇವೆ ಎಂದು ಒಕ್ಕೂಟ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋಮು ರಾಜಕಾರಣ: ಒಡೆದ ಮನೆಯಲ್ಲಿ ಹಿಂದುತ್ವಕ್ಕೆ ಒಡೆಯನಾರು?
ಅಕ್ಟೋಬರ್ 2 ರಂದು ತಮ್ಮನ್ನು ಕಾಣಲು 1000 ಅಲೆಮಾರಿ ಬಂಧುಗಳು ದೆಹಲಿಗೆ ಬರುತ್ತಿದ್ದೇವೆ. ಅಲ್ಲಿಯ ತನಕ ಬರುವ ನಮ್ಮನ್ನು ನೀವೂ ನಿರ್ಲಕ್ಷ್ಯ ಮಾಡುವುದಿಲ್ಲ ಎಂಬ ಆಶಾಭಾವನೆ ಇಟ್ಟುಕೊಂಡಿದ್ದೇವೆ. ನಮ್ಮ ನೋವನ್ನು ಆಲಿಸಿ, ನ್ಯಾಯವನ್ನು ಕೊಡಿಸಿ ಕೊಡಬೇಕೆಂದು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಬೀದಿಯಲ್ಲಿ ಮತ್ತು ಬೆಂಗಳೂರಿನಲ್ಲಿ ಸಿಗದ ನ್ಯಾಯವನ್ನು ಅರಸುತ್ತಾ ದೆಹಲಿಗೆ ಬರುತ್ತಿದ್ದೇವೆ. ನಿರಾಶೆಗೊಳಿಸುವುದಿಲ್ಲ ಎಂಬ ಭರವಸೆಯೂ ಇದೆ. ನಿರಾಶೆಗೊಳಿಸಬೇಡಿ ಎಂದು ಕೋರಿದೆ.