ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ದೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಜಲಾವೃತವಾಗಿದ್ದು, ಇದರಿಂದ ಸಂಚಾರ ಅಸ್ತವ್ಯಸ್ತವಾಗಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಿಂದ ಬಸವನ ಬಾಗೇವಾಡಿ-ವಿಜಯಪುರ ಮಾರ್ಗದ ಹೆದ್ದಾರಿಯಲ್ಲಿರುವ ಸೇತುವೆ ಮೇಲೂ ದೋಣಿ ನದಿಯ ನೀರು ಹರಿಯುತ್ತಿದೆ.
ಮೊಕಿಹಾಳ, ಮೀಣಜಗಿ, ಮಾರ್ಗದಲ್ಲಿ 15 ಕಿಮಿ ಸುತ್ತ ಹಾಕಿಕೊಂಡು ವಿಜಯಪುರದತ್ತ ವಾಹನಗಳು ಸಂಚರಿಸಿದವು. ಇದರಿಂದಾಗಿ ಪಟ್ಟಣದ ಹಡಗಿನಾಳ ರಸ್ತೆಯಲ್ಲಿ ವಾಹನಗಳ ದಟ್ಟಣೆ ತುಂಬಿತ್ತು. ಕಳೆದ ಮೂರು ವರ್ಷದಿಂದ ಸಾರ್ವಜನಿಕರು, ವಾಹನಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ.
“ಶಾಸಕ ಸಿ ಎಸ್ ನಾಡಗೌಡ ಅವರು ನೂತನ ಸೇತುವೆ ನಿರ್ಮಾಣಕ್ಕೆ 30 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದರಿಂದ ಹಳೆಯ ಸೇತುವೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆದರೆ ಅದರ ಮರುನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದ್ದು, ಜಮೀನುಗಳು ಜಲಾವೃತವಾಗಿವೆ” ಎಂದು ಸ್ಥಳೀಯರು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಸೆ. 15ರಿಂದ ಬಗರ್ ಹುಕುಂ ಸಾಗುವಳಿದಾರರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ಪಿಎಸ್‌ಐಆರ್‌ಎಸ್ ಭಂಗಿ ಮಾತನಾಡಿ, “ದೋಣಿ ನದಿಯ ಜಲ ನಯನದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಡಾ. ವಿನಯ ಹೂಗಾರ ಅವರ ಆದೇಶದಂತೆ ನದಿ ಬಳಿ ಪೊಲೀಸ್ ಕಾವಲನ್ನು ಇರಿಸಲಾಗಿತ್ತು. ಸೇತುವೆ ಜಲಾವೃತವಾಗುತ್ತಿದ್ದಂತೆಯೇ ಸಂಚಾರ ಸ್ಥಗಿತಗೊಳಿಸಿ, ಬ್ಯಾರಿಕೇಡ್ ಹಾಕಿ ಅಪಾಯಕ್ಕೆ ಅವಕಾಶ ಕೊಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.
