ಮಗನ ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ಮಹಿಳೆಯೊಬ್ಬರು 13ನೇ ಮಹಡಿಯಿಂದ 11 ವರ್ಷದ ಮಗನ ಸಮೇತ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಾಕ್ಷಿ ಚಾವ್ಲಾ ಮತ್ತು ಮಗ ದಕ್ಷ ಮೃತರು ಎಂದು ಗುರುತಿಸಲಾಗಿದೆ. ಗ್ರೇಟರ್ ನೋಯ್ಡಾ ಏಸ್ ಸಿಟಿಯಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನ 13 ನೇ ಮಹಡಿಯ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಮಹಿಳೆ ಬರೆದ ಡೆತ್‌ನೋಟ್ ಪತ್ತೆಯಾಗಿದ್ದು, “ನಾವು ಈ ಲೋಕವನ್ನು ತೊರೆಯುತ್ತಿದ್ದೇವೆ, ಕ್ಷಮಿಸಿ… ನಾವು ಇನ್ಮುಂದೆ ನಿಮಗೆ ತೊಂದರೆ ಕೊಡಲು ಬಯಸುವುದಿಲ್ಲ. ನಮ್ಮಿಂದಾಗಿ ನಿಮ್ಮ ಜೀವನ ಹಾಳಾಗಬಾರದು. ನಮ್ಮ ಸಾವಿಗೆ ಯಾರೂ ಕಾರಣವಲ್ಲ” ಎಂದು ಬರೆದಿದ್ದಾರೆ.
ಸಾಕ್ಷಿ ಅವರ ಮಗ ದಕ್ಷ ಮಾನಸಿಕ ಅಸ್ವಸ್ಥನಾಗಿದ್ದು, ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದ. ಇದರಿಂದಾಗಿ ಶಾಲೆಗೂ ಹೋಗುತ್ತಿರಲಿಲ್ಲ. ವಿಪರೀತ ಔಷಧ ಸೇವಿಸಬೇಕಿತ್ತು. ಇದರಿಂದ ಸಾಕ್ಷಿ ಬಹಳ ನೊಂದಿದ್ದಳು. ತನ್ನ ಕಷ್ಟವನ್ನು ನೆರೆಯವರೊಂದಿಗೆ ಹೇಳಿಕೊಳ್ಳುತ್ತಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.
ಸಾಕ್ಷಿಯ ಗಂಡ ದರ್ಪಣ್ ಚಾವ್ಲಾ ಅವರು ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ಘಟನೆ ವೇಳೆ ಅಪಾರ್ಟ್ಮೆಂಟ್‌ನ ಇನ್ನೊಂದು ಕೋಣೆಯಲ್ಲಿದ್ದರು. ಹಠಾತ್ ಕಿರುಚಾಟ ಕೇಳಿಸಿದ ಬಳಿಕ ಅವರಿಗೆ ಘಟನೆ ಬಗ್ಗೆ ಗೊತ್ತಾಗಿದೆ.