ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಆ ಭಯೋತ್ಪಾದಕ ದಾಳಿಯ ವಿರುದ್ಧ ಭಾರತವು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿತ್ತು. ಆ ಘಟನೆಯು ಭಾರತ-ಪಾಕ್ ಸಂಬಂಧವು ಮತ್ತಷ್ಟು ಕುಸಿಯುವಂತೆ ಮಾಡಿದೆ. ಇದೆಲ್ಲದರ ನಡುವೆ, ‘ಏಪ್ಯಾ ಕಪ್’ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಎದುರಾಳಿಗಳಾಗಿ ಆಡಲು ಸಿದ್ದವಾಗಿವೆ. ಪಾಕ್ ತಂಡದೊಂದಿಗೆ ಆಡುವ ಬಿಸಿಸಿಐನ ನಿರ್ಧಾರದ ವಿರುದ್ಧ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕ್ ತಂಡಗಳು ಕ್ರಿಕೆಟ್ ಪಂದ್ಯದಲ್ಲಿ ಆಡುವುದಾದರೆ, ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಆರ್ಥವೇ ಇಲ್ಲ. ಇದು, ಪಹಲ್ಗಾಮ್ ದಾಳಿಯಲ್ಲಿ ಬಲಿಯಾದ 26 ಮಂದಿ ಭಾರತೀಯರಿಗೆ ಮಾಡುವ ಅವಮಾನ ಎಂದು ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರು ಹಾಗೂ ಭಾರತದ ಹಲವು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್ ದಾಳಿಯಲ್ಲಿ ತನ್ನ ಸಹೋದರ ಕಳೆದುಕೊಂಡ ಸಾವನ್ ಪರ್ಮರ್ ಎಂಬವರು, “ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಪಂದ್ಯ ಆಯೋಜಿಸಲಾಗುತ್ತಿರುವುದು ನಮಗೆ ತೀವ್ರ ದುಃಖತಂದಿದೆ. ಭಾರತವು ಪಾಕಿಸ್ತಾನದೊಂದಿಗೆ ಯಾವುದೇ ರೀತಿಯ ಸಂಪರ್ಕ ಉಳಿಸಿಕೊಳ್ಳಬಾರದು. ನೀವು ಪಂದ್ಯವನ್ನು ಆಡಿದರೆ, ನನ್ನ ಸಹೋದರ ಮರಳಿ ಬರುತ್ತಾನೆಯೇ” ಎಂದು ಪ್ರಶ್ನಿಸಿದ್ದಾರೆ.
“ಆಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲವೆಂದು ಸರ್ಕಾರ ಹೇಳುತ್ತಿದೆ. ಹಾಗಿದ್ದರೆ, ಈ ಪಂದ್ಯವನ್ನು ಯಾಕೆ ನಡೆಸಲಾಗುತ್ತಿದೆ” ಎಂದಿದ್ದಾರೆ.
ಭಾರತ-ಪಾಕ್ ಪಂದ್ಯದ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ, “ಪಾಕಿಸ್ತಾನದ ಜೊತೆ ಭಾರತ ತಂಡ ಆಟವಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. 26 ಜನರ ಜೀವಗಳಿಗಿಂತ ಆರ್ಥಿಕ ಲಾಭವೇ ಮುಖ್ಯವಾಯಿತೇ? ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
“ಭಾರತೀಯರ ಜೀವಕ್ಕಿಂತ ಹಣಗಳಿಸುವುದೇ ಮುಖ್ಯವೇ? ಬಿಸಿಸಿಐ ಒಂದು ಕ್ರಿಕೆಟ್ ಪಂದ್ಯದಿಂದ ಎಷ್ಟು ಹಣ ಪಡೆಯುತ್ತದೆ? 2000–3000 ಕೋಟಿ ರೂ.ಗಳೇ? “26 ಮಂದಿ ಭಾರತೀಯರನ್ನು ಕೊಂದ ಭಯೋತ್ಪಾದಕರಿಗೆ ನೆಲೆ ಒದಗಿಸಿದ್ದ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯ ಆಡಲು ನಿರಾಕರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲವೇ? ನಾವು ದಾಳಿಗೆ ಬಲಿಯಾದ ನಾಗರಿಕರ ಪರವಾಗಿ ಅಂದು ನಿಂತಿದ್ದೆವು, ಇಂದೂ ನಿಲ್ಲುತ್ತೇವೆ. ಮುಂದೆಯೂ ನಿಲ್ಲುತ್ತೇವೆ” ಎಂದು ಹೇಳಿದ್ದಾರೆ.
“ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಸಿಂಧೂ ನದಿ ನೀರು ಹರಿಸುವ ವಿಚಾರದಲ್ಲಿ ಮಾತುಕತೆಯ ನಡೆಸುವುದೇ ಇಲ್ಲ ಎಂದಿದ್ದ ಮೋದಿ ಅವರು, ಈಗ ಪಂದ್ಯ ಆಡಿಸಿ, ದೇಶಕ್ಕೆ ಯಾವ ಸಂದೇಶ ನೀಡಲು ಮುಂದಾಗಿದ್ದಾರೆ” ಎಂದು ಓವೈಸಿ ಪ್ರಶ್ನಿಸಿದ್ದಾರೆ.