ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿಗೆ ಷಡ್ಯಂತ್ರ ಮಾಡಿದವರನ್ನು ಮುಟ್ಟದಂತೆ ರಾಜಕೀಯ ಒತ್ತಡ ಇದೆ. ನಿರೀಕ್ಷೆಗೆ ತಕ್ಕಂತೆ ಎಸ್ಐಟಿ ತನಿಖೆ ನಡೆಯುತಿಲ್ಲ. ಪೊಲೀಸ್ ಪದ್ಧತಿ ಪ್ರಕಾರ ತನಿಖೆ ನಡೆಯುತ್ತಿಲ್ಲ ಎಂದು ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮಾಸ್ಕ್ ಮ್ಯಾನ್‌ನ ದೂರು ಹುಸಿಯಾದ ನಂತರ ಬೇರೆ ಬೇರೆ ದೂರುಗಳು ದಾಖಲಾಗುತ್ತಿವೆ. ಎಸ್ಐಟಿಗೆ ಉತ್ತರದಾಯಿತ್ವ ಇದೆ, ಜವಾಬ್ದಾರಿ ಇದೆ. ಶೀಘ್ರದಲ್ಲೇ ವರದಿ ಕೊಡಲಿ, ಇದುವರೆಗೆ ಆಗಿರುವ ತನಿಖೆ ಬಗ್ಗೆ ವರದಿ ಕೊಡಲಿ” ಎಂದು ಆಗ್ರಹಿಸಿದರು.
“ಎಸ್ಐಟಿಯವರು ಷಡ್ಯಂತ್ರ ಮಾಡಿದ ಮುಖ್ಯ ವ್ಯಕ್ತಿಗಳನ್ನೇ ಇನ್ನೂ ಮುಟ್ಟಿಲ್ಲ. ಎಸ್ಐಟಿಯವರು ನಮ್ಮನ್ನು ಮುಟ್ಟಲ್ಲ ಅಂತ ಅವರಿಗೂ ಖಾತ್ರಿ ಆಗಿದೆ, ಅದಕ್ಕಾಗಿಯೇ ಅವರು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಹೊಸ ಹೊಸ ದೂರುಗಳು ಬರುತ್ತಿವೆ.ಅವುಗಳನ್ನೂ ತನಿಖೆ ಮಾಡುತ್ತಿದ್ದಾರೆ. ಎಸ್ ಐಟಿಗೆ ಷಡ್ಯಂತ್ರ ಮಾಡಿದವರನ್ನು ಮುಟ್ಟಬೇಡಿ ಅನ್ನುವ
ರಾಜಕೀಯ ಒತ್ತಡ ಇದೆ. ಅದಕ್ಕಾಗಿ ಇನ್ನೂ ಯಾರನ್ನೂ ಬಂಧಿಸದೇ ವಿಚಾರಣೆ ಮಾತ್ರ ಮಾಡುತ್ತಿದೆ. ಎಸ್ಐಟಿ ಇಲ್ಲಿವರೆಗೆ ಆಗಿರುವ ತನಿಖೆ ಬಗ್ಗೆ ವರದಿಯನ್ನು ಎಸ್ಐಟಿ ಕೊಡಲಿ” ಎಂದು ಬೊಮ್ಮಾಯಿ ಒತ್ತಾಯಿಸಿದರು.
ಸಂವಿಧಾನ ಬಾಹಿರ
ಜಾತಿ ಜನಗಣತಿ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರದ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಸಂವಿಧಾನದಲ್ಲಿ ಕೇವಲ ಆರು ಧರ್ಮಗಳು ಇವೆ, ಅಷ್ಟೇ ಧರ್ಮಗಳ ಹೆಸರು ಬರೆಯಬೇಕು. ರಾಜ್ಯದಲ್ಲಿ ಮತಾತಂತರಗೊಂಡ ಕ್ರೈಸ್ತರು ಅನ್ನುವ ಹೊಸ ಕಾಲಂ ಮಾಡಿದ್ದಾರೆ. ಇದೊಂದು ಧರ್ಮದ ರೀತಿ ಕಾಲಂ ಮಾಡಿದ್ದಾರೆ. ಇದು ಕಾನೂನು ಬಾಹಿರ, ಸಂವಿಧಾನ ಬಾಹಿರ, ರಾಜಕೀಯ ಪ್ರೇರಿತವಾಗಿದೆ. ಎರಡೂ ಕಡೆಯೂ ಮತಾಂತರ ಆಗಿರುತ್ತದೆ. ಆದರೆ, ಸಿಎಂ ಕ್ರೈಸ್ತ ಧರ್ಮದ ಮತಾಂತರಕ್ಕೆ ಮಾತ್ರ ಮನ್ನಣೆ ಕೊಟ್ಟಿರೋದೇಕೆ? ಸಿಎಂ ಅವರು ಒಂದು ಹೆಜ್ಜೆ ಮುಂದೆ ಹೋಗಿ ಮತಾಂತರ ಅವರ ಹಕ್ಕು ಅಂದಿದ್ದಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ ಅಂತ ಸಿಎಂ ಹೇಳಿದ್ದಾರೆ” ಎಂದು ಆಕ್ಷೇಪಿಸಿದರು.
“ಇದು ಸಮಾನತೆ ಪ್ರಶ್ನೆ ಅಲ್ಲ, ಆಸೆ ಆಮಿಷ ಒಡ್ಡಿ ಮತಾಂತರ ಆಗಿದ್ದಾರೆ. ಅವರ ಬಡತನ, ಶಿಕ್ಷಣ ಇಲ್ಲದಿರುವುದನ್ನು ದುರುಪಯೋಗ ಪಡಿಸಿಕೊಂಡು ಮತಾಂತರ ಮಾಡಲಾಗಿದೆ. ಹಲವರು ಕ್ರೈಸ್ತಧರ್ಮದಿಂದ ವಾಪಸ್ ಬಂದಿದ್ದಾರೆ. ಈ ಮತಾತಂತರ ಬಗ್ಗೆಯೇ ಹಲವು ಅನುಮಾನಗಳಿವೆ. ಇವರಿಗೆ ಜಾತಿ ಕಾಲಂನಲ್ಲಿ ಮತಾತಂತರಗೊಂಡವರಿಗೆ ಹೊಸ ಕಾಲಂ ಮಾಡಲು ಯಾರು ಅಧಿಕಾರ ಕೊಟ್ಟರು? ಯಾವ ಕಾನೂನಿನಲ್ಲಿದೆ? ತಮ್ಮ ಅಕ್ಕಪಕ್ಕಹಿಂದೆ ಮುಂದೆ ಇರುವವರು ಸಲಹೆ ಪಡೆದು ಅದನ್ನು ಸೇರಿಸಿದ್ದಾರೆ. ಇದು ಧರ್ಮ ಧರ್ಮಗಳ ನಡುವೆ, ವಿಷ ಬೀಜ ಬಿತ್ತುವ, ಗಲಭೆ ಮಾಡಿಸುವ ಕೆಲಸ ಈಗಾಗಲೇ 350 ಕೋಟಿ ರೂ ಪೋಲು ಮಾಡಿದ್ದರು, ಈಗ 420 ಕೋಟಿ ಮತ್ತೆ ಪೋಲು ಮಾಡಲು ಹೊರಟಿದ್ದಾರೆ” ಎಂದು ಕಿಡಿಕಾರಿದರು.
ಮಹಾಸಭೆಯಿಂದ ಗೊಂದಲ ಸೃಷ್ಟಿ
“ವೀರಶೈವ ಲಿಂಗಾಯತ ಮಹಾಸಭೆ ಸಂಪೂರ್ಣವಾಗಿ ಕಾಂಗ್ರೆಸ್ ಮಯ ಆಗಿದೆ. ಮಹಾಸಭೆಗೆ ನನ್ನ ವಿನಂತಿ, ಕಾನೂನು, ಸಂವಿಧಾನ ಪ್ರಕಾರ ಸಲಹೆ ಮಾಡಬೇಕು. ಮಹಾಸಭೆ ಗೊಂದಲ ಸೃಷ್ಟಿಸಬಾರದು. ಒಂದು ಕಡೆ ಹೊಸ ಧರ್ಮ ಅಂತಾರೆ, ಇನ್ನೊಂದು ಕಡೆ ವೀರಶೈವ ಅಂತಾರೆ, ಲಿಂಗಾಯತ ಅಂತಾರೆ, ವೀರಶೈವ ಲಿಂಗಾಯತ ಅಂತಾರೆ. ಈ ಗೊಂದಲ ನಿವಾರಣೆ ಆಗಬೇಕು. ಇಲ್ಲದಿದ್ದರೆ ಜನ ತಮ್ಮ ತೀರ್ಮಾನ ಮಾಡುತ್ತಾರೆ. ನಾವೂ ಕೂಡಾ ಈ ವಿಚಾರದಲ್ಲಿ ಪಕ್ಷದ ಹಿರಿಯರು ಚರ್ಚೆ ಮಾಡುತ್ತಿದ್ದೇವೆ” ಎಂದರು.
