ಶರಾವತಿ ನದಿಯನ್ನು ರಕ್ಷಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ʼಶರಾವತಿ ನದಿ ಉಳಿಸಿʼ(Save Sharavathi) ಆಂದೋಲನಕ್ಕೆ ಬೆಂಬಲ ಸೂಚಿಸಿ ಬೆಂಗಳೂರಿನಲ್ಲಿ ಬೃಹತ್ ಬೈಕ್ ಜಾಥಾ ನಡೆಯಿತು. ನಗರದ ವಿವಿಧ ಭಾಗಗಳಿಂದ ಸುಮಾರು 200ಕ್ಕೂ ಹೆಚ್ಚು ಬೈಕರ್ಸ್ ಸೇರಿ, ಪರಿಸರ ಉಳಿಸುವ ಮತ್ತು ಶರಾವತಿ ನದಿಗೆ ಯಾವುದೇ ಹೊಸ ಯೋಜನೆಗಳ ಪ್ರಸ್ತಾಪ ಬೇಡ ಎಂದು ಒತ್ತಾಯಿಸಿದರು.
‘Green Freedom’ ಎಂಬ ಹೆಸರಿನಡಿ ಈ ಜಾಥಾವನ್ನು ಆಯೋಜಿಸಲಾಗಿತ್ತು. ಬೈಕರ್ಸ್ ‘Save_Sharavathi ‘ ಎಂಬ ಹ್ಯಾಶ್ಟ್ಯಾಗ್ ಹಾಗೂ ‘SaynotoSharavathipsp’ ಎಂಬ ಭಿತ್ತಿಪತ್ರಗಳನ್ನು ಹಿಡಿದು, ನದಿಯ ಮೇಲೆ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ವಿರೋಧಿಸಿ ಜಾಗೃತಿ ಮೂಡಿಸಿದರು. ಈ ಯೋಜನೆಯಿಂದ ಪಶ್ಚಿಮ ಘಟ್ಟಗಳಲ್ಲಿನ ಅಮೂಲ್ಯ ಪರಿಸರ ವ್ಯವಸ್ಥೆ ಮತ್ತು ಅರಣ್ಯ ನಾಶವಾಗುತ್ತದೆ ಎಂಬುದು ಪರಿಸರ ಪ್ರೇಮಿಗಳ ಪ್ರಮುಖ ಆತಂಕವಾಗಿದೆ.
ಜಾಥಾದಲ್ಲಿ ಭಾಗವಹಿಸಿದ ಬೈಕರ್ಸ್, ಶರಾವತಿ ಕಣಿವೆಯ ಜೀವವೈವಿದ್ಯ ಮಹತ್ವವನ್ನು ಒತ್ತಿ ಹೇಳಿದರು. ಶರಾವತಿ ನದಿ ಕೇವಲ ಉತ್ತರಕನ್ನಡ ಜಿಲ್ಲೆಗೆ ಸೀಮಿತವಲ್ಲ, ಇದು ಕರ್ನಾಟಕದ ಜೀವನಾಡಿ. ಅದರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಘೋಷಿಸಿದರು. ಪರಿಸರ ಸಂರಕ್ಷಣೆ ಕುರಿತ ತಮ್ಮ ಕಾಳಜಿಯನ್ನು ಈ ಬೈಕ್ ಜಾಥಾದ ಮೂಲಕ ಅವರು ಸಾರ್ವಜನಿಕರಿಗೆ ತಲುಪಿಸಿದರು.
ಈ ಸುದ್ದಿ ಓದಿದ್ದೀರಾ? ಇಂಡಿ | ನೌಕರರು ಜನರ ವಿಶ್ವಾಸ ಗಳಿಸಿ ಕರ್ತವ್ಯ ನಿರ್ವಹಿಸಬೇಕು: ಶಾಸಕ ಯಶವಂತರಾಯಗೌಡ ಪಾಟೀಲ
ಈ ಜಾಥಾ ಬೆಂಗಳೂರಿನಾದ್ಯಂತ ಸಂಚರಿಸಿ ಜನರಲ್ಲಿ ಪರಿಸರ ಪ್ರಜ್ಞೆ ಹೆಚ್ಚಿಸುವಲ್ಲಿ ಯಶಸ್ವಿಯಾಯಿತು. ಶರಾವತಿ ಉಳಿಸಿ ಆಂದೋಲನಕ್ಕೆ ಬೆಂಗಳೂರಿನಿಂದಲೂ ಬೆಂಬಲ ವ್ಯಕ್ತವಾದದ್ದು ಮಹತ್ವಪೂರ್ಣ ಬೆಳವಣಿಗೆಯಾಗಿದೆ.