ಖಾಸಗಿ ಶಾಲೆಯೊಂದರಲ್ಲಿ ಕಾರ್ಖಾನೆ ಪತ್ತೆಯಾಗಿದ್ದು, ಅಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ಹೈದರಾಬಾದ್‌ನ ಈಗಲ್ (ಎಲೈಟ್ ಆ್ಯಕ್ಷನ್ ಗ್ರೂಪ್ ಫಾರ್ ಡ್ರಗ್ ಲಾ ಎನ್ ಫೋರ್ಸ್ ಮೆಂಟ್) ತಂಡವು ವಶಕ್ಕೆ ಪಡೆದುಕೊಂಡಿದೆ.
ಹೈದರಾಬಾದ್‌ನ ಬೊವೇನಪಲ್ಲಿಯಲ್ಲಿರುವ ಖಾಸಗಿ ಮೇಧಾ ಶಾಲೆಯಲ್ಲಿ ಅಲ್ಪ್ರಝೋಲಂ ತಯಾರಿಕಾ ಘಟಕವು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಈಗಲ್ ತಂಡ ಹೇಳಿದೆ. ಈ ಅಕ್ರಮ ಕಾರ್ಖಾನೆಯನ್ನು ಮೆಹಬೂಬನಗರ್ ನಿವಾಸಿ, ಮೇಧಾ ಶಾಲೆಯ ಮಾಲೀಕ ಮಲೇಲ ಜಯಪ್ರಕಾಶ್ ಗೌಡ್ ಎಂಬ ವ್ಯಕ್ತಿ ನಡೆಸುತ್ತಿದ್ದನೆಂದುಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯ ತರಗತಿ ಕೋಣೆಯೊಂದನ್ನು ಕಾರ್ಖಾನೆಯ್ನಾಗಿ ಮಾಡಿಕೊಂಡು ಜಯಪ್ರಕಾಶ್ ಮತ್ತು ಆತನ ಸ್ನೇಹಿತ ಮಾದಕ ದ್ರವ್ಯಗಳನ್ನು ಬೂತ್ ಪುರ್ ಮತ್ತು ಮಹಬೂಬ್ ನಗರ ಜಿಲ್ಲೆಯ ಮದ್ಯದಂಗಡಿಗಳಿಗೆ ಪೂರೈಸುತ್ತಿದ್ದರು ಎಂದು ಆರೋಪಿಸಲಾಗಿದೆ.
ದಾಳಿಯ ವೇಳೆ 3.5 ಕೆ.ಜಿ ತೂಕದ ಅಲ್ಪ್ರಝೋಲಂ ಮತ್ತು ಅರ್ಧಂಬರ್ಧ ತಯಾರಿಸಲಾಗಿದ್ದ 4.3 ಕೆ.ಜಿ ತೂಕದ ಮಾದಕ ಮಾತ್ರೆ, ತಯಾರಿಕಾ ಉಪಕರಣಗಳು ಹಾಗೂ 21 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.