ಸುಪ್ರೀಂಕೋರ್ಟ್ ತೀರ್ಪು ನೀಡಿ ರಾಜ್ಯಗಳಿಗೆ ಅಧಿಕಾರ ನೀಡಿದ ಮರುದಿನವೇ ಆಂಧ್ರ ತೆಲಂಗಾಣ ರಾಜ್ಯಗಳು ಪ್ರಥಮವಾಗಿ ಒಳಮೀಸಲಾತಿ ಜಾರಿಗೊಳಿಸಿದವು. ಆದರೆ, ಕರ್ನಾಟಕದಲ್ಲಿ ಆದಿ ಕರ್ನಾಟಕ , ಆದಿ ಆಂಧ್ರ, ಆದಿ ದ್ರಾವಿಡ ಸಮಸ್ಯೆಗಳಿಂದ ವಿಳಂಬವಾಯಿತು. ಮೂಲತಃ ಇವು ಜಾತಿಗಳಲ್ಲ. ಜಾತಿ ಹೇಳುವ ಮುಜುಗರ ತಪ್ಪಿಸಲು ಮಾದಿಗ ಮತ್ತು ಛಲವಾದಿ ಜಾತಿಗಳಿಗೆ 1925ರಲ್ಲಿ ಬ್ರಿಟಿಷರು ಕೊಟ್ಟ ಹೆಸರುಗಳು” ಎಂದು ದಾವಣಗೆರೆಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಸ್ಪಷ್ಟನೆ ನೀಡಿದರು.
ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾ ಮಹಾನಗರ ಪಾಲಿಕೆಯ ರಾಧಮ್ಮ ಚನ್ನಗಿರಿ ರಂಗಪ್ಪ ರಂಗಮಂದಿರದ ಆವರಣದಲ್ಲಿ ಆಯೋಜಿಸಲಾಗಿದ್ದ ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು “ಆಂಧ್ರ ಮತ್ತು ತೆಲಂಗಾಣದಲ್ಲಿ ಲಕ್ಷಾಂತರ ಜನರ ಹೋರಾಟವನ್ನು ಮಂದಕೃಷ್ಣ ಮಾದಿಗ ಸಮರ್ಥವಾಗಿ ಮುನ್ನಡೆಸಿದರು. ಒಳ ಮೀಸಲಾತಿ ಹೋರಾಟ ಜಾರಿಯಲ್ಲಿರುವಾಗ ಸಂವಿಧಾನಿಕವಾಗಿ ರಾಜ್ಯಗಳಿಗೆ ಅಧಿಕಾರವಿಲ್ಲ, ತಿದ್ದುಪಡಿಯೊಂದಿಗೆ ಸಂಸತ್ತು ಅಥವಾ ರಾಷ್ಟ್ರಪತಿ ಮಾತ್ರ ಒಳ ಮೀಸಲಾತಿ ವರ್ಗೀಕರಣ ಮಾಡಬಹುದು ಎಂದು ಸಂತೋಷ್ ಹೆಗಡೆ ಪೀಠ ಅಭಿಪ್ರಾಯಪಟ್ಟಿತು. ಈ ತೀರ್ಪು ಬಂದ ನಂತರವೂ ಒಂಬತ್ತನೇ ಆರ್ಟಿಕಲ್ ಅಡಿಯಲ್ಲಿ ಅರುಂಧತಿಯಾರ್ ಸಮುದಾಯಕ್ಕೆ ತಮಿಳುನಾಡಿನಲ್ಲಿ ಕರುಣಾನಿಧಿ 3% ಒಳ ಮೀಸಲಾತಿಯನ್ನು ಜಾರಿಗೊಳಿಸಿದ್ದರು” ಎಂದು ಮಾಹಿತಿ ನೀಡಿದರು.

“ಐದು ನ್ಯಾಯಾಧೀಶರ ನ್ಯಾ. ಅರುಣ್ ಮಿಶ್ರ ಪೀಠ ರಾಜ್ಯಗಳಿಗೆ ಒಳಮೀಸಲಾತಿ ಜಾರಿಗೆ ಅಧಿಕಾರ ಇದೆ ಎಂದು ತಿಳಿಸಿತು. ಆದರೂ ಏಳು ಜನರ ಪೀಠಕ್ಕೆ ವರ್ಗಾಯಿಸಿತು” ಎಂದು ತಿಳಿಸಿದರು.
“ಹಾವನೂರು ವರದಿ, ಸದಾಶಿವ ಆಯೋಗ, ಮಾಧುಸ್ವಾಮಿ ಉಪ ಸಮಿತಿ, ನಾಗ ಮೋಹನ್ ದಾಸ್ ಸಮಿತಿ ಸಮೀಕ್ಷೆಗಳು ಕರ್ನಾಟಕದಲ್ಲಿ ಮಾದಿಗರ ಸಂಖ್ಯೆ ಹೆಚ್ಚಿದೆ ಎಂದು ಹೇಳಿದ ನಂತರವೇ ನಮಗೆ ಶೇಕಡ ಆರು ಮೀಸಲಾತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಎರಡು ಮುಖ್ಯ ಸಮೀಕ್ಷೆಗಳು ರಾಜ್ಯ ಮತ್ತು ಕೇಂದ್ರದಿಂದ ನಡೆಯುತ್ತಿದ್ದು, ಕೇಂದ್ರದಲ್ಲಿಯೂ ಕೂಡ ಒಳ ಮೀಸಲಾತಿ ಬೇಕಾದರೆ ನಾವು ಸ್ಪಷ್ಟವಾಗಿ ಮಾದಿಗ ಎಂದು ಬರೆಸಬೇಕು. ಕೇಂದ್ರದಲ್ಲಿ ಒಳಮೀಸಲಾತಿಗೆ ಮುಂದಿನ ಹೋರಾಟ ಮಾಡಬೇಕಾಗಿದೆ” ಎಂದು ತಿಳಿಸಿದರು.
“ಸಮುದಾಯದ ವಿದ್ಯಾವಂತರು ಒಳಮೀಸಲಾತಿ ವರದಿ ಓದಬೇಕು. 35-37 ಲಕ್ಷ ಜನ ಇದ್ದರೂ ಔದ್ಯೋಗಿಕವಾಗಿ ನಾವು ಹಿಂದುಳಿದಿದ್ದೇವೆ. ವಿಶ್ವವಿದ್ಯಾನಿಲಯಗಳಲ್ಲಿ ಎರಡು ಸಾವಿರ ಅಧ್ಯಾಪಕರು ಇರುವ ಜಾಗದಲ್ಲಿ ನಾವು 12 ಜನ ಕೂಡ ಇಲ್ಲ. ಈಗಲಾದರೂ ಜಾಗೃತರಾಗಿ, ಶಿಕ್ಷಣ ಉದ್ಯೋಗ ಪಡೆಯಲು ಆದ್ಯತೆ ನೀಡಬೇಕು. ಮತ್ತು ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಹಬ್ಬ, ಜಾತ್ರೆಗೆ, ಮದ್ಯಪಾನಕ್ಕೆ ಲಕ್ಷ ಲಕ್ಷ ಖರ್ಚು ಮಾಡುವ ನಮ್ಮ ಸಮುದಾಯ ಅದನ್ನೇ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಬೇಕಾಗಿದೆ. ಎಲ್ಲರೂ ಒಟ್ಟಾಗಿ ಮಾತುಕತೆ ಮೂಲಕ ಸಮಾಜವನ್ನು ಸಂಘಟಿತಗೊಳಿಸಿ. ಮುಂದೆ ಸಮಸ್ಯೆಗಳು ಬಂದಾಗ ಸಂಘಟನೆ ಇದ್ದರೆ ಸುಲಭವಾಗಿ ಎದುರಿಸಬಹುದು” ಎಂದು ಅಭಿಪ್ರಾಯಪಟ್ಟರು.

ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ ಮಾತನಾಡಿ “ಸುಪ್ರೀಂ ಕೋರ್ಟ್ ಮೀಸಲಾತಿ ನಂತರ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದಾಗ ಒಳಮೀಸಲಾತಿ ಮಾಡಿಯೇ ತೀರುತ್ತೇನೆ ಎಂದು ಭರವಸೆ ನೀಡಿದ್ದರು. ಇದುವರೆಗೂ ನಾವು ಸಂಘಟನೆ ಮಾಡಿ ಒಟ್ಟಿಗೆ ಹೋರಾಟ ಮಾಡಿದ್ದೇವೆ. ಇವುಗಳಲ್ಲಿ ಹೋರಾಟ ನಮ್ಮದಿತ್ತು. ಆದರೆ ಫಲ ಬೇರೆಯವರಿಗೆ ದಕ್ಕುತ್ತಿತ್ತು. ಇನ್ನು ಬೀದಿ ಹೋರಾಟ ಸಾಕು, ನಮ್ಮ ಪಾಲನ್ನು ಪಡೆದು ಶಿಕ್ಷಣ, ದುಡಿಮೆಯೊಂದಿಗೆ ಪ್ರಗತಿ ಸಾಧಿಸಬೇಕಾಗಿದೆ. ನಾಯಕರು ಸಮಾಜದ ಅಮಾಯಕರನ್ನು ತುಳಿಯುವ ಬದಲು ಹಳ್ಳಿಗಳಲ್ಲಿರುವ ಬಡವರ ಮೇಲೆ ತರುವ ಪ್ರಯತ್ನ ಸಮಾಜದ ನಾಯಕರು ಮಾಡಬೇಕು” ಎಂದು ಮಾರ್ಮಿಕವಾಗಿ ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರು ವಿ ವಿ ಪರೀಕ್ಷಾಂಗ ಕುಲಪತಿ ಡಾ. ಎಸ್ ವಿಶ್ವನಾಥ್, “ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನ ನಂತರ ಸಿದ್ದರಾಮಯ್ಯ ಐತಿಹಾಸಿಕ ತೀರ್ಮಾನ ಕೈಗೊಂಡು ಶೇ. 6 ಮೀಸಲಾತಿ ನೀಡಿದರು. ಇದಕ್ಕಾಗಿ
ಅನೇಕ ಸಂಘಟನೆಗಳು ಹೋರಾಟ ನಡೆಸಿವೆ. ಒಳಮೀಸಲಾತಿ ವರ್ಗೀಕರಣದ ವಿಜಯೋತ್ಸವ ಒಂದು ಸಂಭ್ರಮ. ಒಳಮೀಸಲಾತಿ ಜಾರಿ ನಂತರವೂ ಕೆಲವು ಗೊಂದಲಗಳಿವೆ. ಎಡಿ ಎಕೆ ಎಎ ಬಗ್ಗೆ ಸ್ಪಷ್ಟನೆ ಬೇಕಾಗಿದೆ.
ಕಾಂತರಾಜ್, ಸದಾಶಿವ ಆಯೋಗಗಳು ವರದಿಗಳಲ್ಲಿ ಮಾದಿಗರು ಅತಿ ಹಿಂದುಳಿದ ಜಾತಿ ಎಂದು ಸ್ಪಷ್ಟಪಡಿಸಿದ್ದಾರೆ. ಒಳಮೀಸಲಾತಿ ಜಾರಿಗೆ ಬಂದ ದಿನ ನಿಜವಾಗಿ ದಾಸ್ಯ ಕಳಚಿದ ಸ್ವಾತಂತ್ರ್ಯ ದಿನ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗ್ರಾಮ ಪಂಚಾಯಿತಿಯಿಂದ ಅಸೆಂಬ್ಲಿ ವರೆಗೆ, ಉದ್ಯೋಗ, ಬಡ್ತಿಯಲ್ಲಿ ಒಳಮೀಸಲಾತಿ: ಸಚಿವ ಮುನಿಯಪ್ಪ
ಒಳಮೀಸಲಾತಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆಎಚ್ ಮುನಿಯಪ್ಪ, ಮಾಜಿ ಸಚಿವ ಆಂಜನೇಯ, ಶಾಸಕ ಶಾಂತನಗೌಡ, ಮಾಜಿ ಸಂಸದ ಚಂದ್ರಪ್ಪ, ಸಮಾಜದ ಮುಖಂಡರಾದ ಬಿ ಎಚ್ ವೀರಭದ್ರಪ್ಪ,
ದಸಂಸ ಮುಖಂಡ ಕುಂದುವಾಡ ಮಂಜುನಾಥ್, ದುಗ್ಗಪ್ಪ, ನಿವೃತ್ತ ಡಿವೈಎಸ್ಪಿ ರವಿ ನಾರಾಯಣ್, ಹರಿಹರ ಮಲ್ಲೇಶ್, ಹನುಮಂತಪ್ಪ, ಕಾಂಗ್ರೆಸ್ ಮುಖಂಡ ನಗರಸಭೆ ಸದಸ್ಯ ಎಸ್ ಮಲ್ಲಿಕಾರ್ಜುನ್, ಗೋಣೆಪ್ಪ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ, ಶಾಂತಿನಗರ ಮಂಜುನಾಥ್, ಕಬ್ಬೂರು ಮಂಜುನಾಥ್, ಲಿಂಗರಾಜು ಗಾಂಧಿನಗರ, ವೆಂಕಟೇಶ್ ಕುಂದೂರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಮಾದಿಗ ಸಮುದಾಯದ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.