ಮಾದಿಗ ಸಮುದಾಯ ಅವನತಿಯತ್ತ ಸಾಗುತ್ತಿದೆ. ಸಮುದಾಯದವರೇ ತಮ್ಮ ಮೂಲ ಜಾತಿಯನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಪೌರಾಣಿಕ, ಐತಿಹಾಸಿಕ ಹಾಗೂ ಶಾಸ್ತ್ರೀಯ ಹಿನ್ನೆಲೆಯಿರುವ ಮಾದಿಗ ಸಮುದಾಯ ಶ್ರೇಷ್ಠ ಸಮುದಾಯ ಎಂಬುದನ್ನು ಸಮುದಾಯದ ಯುವಕರು ಮನಗಂಡು ಕೀಳರಿಮೆ ಬಿಟ್ಟು ಮೂಲ ಜಾತಿಯನ್ನು ಗೌರವಿಸಿ ಎಂದು ಮಾತಂಗ ಫೌಂಡೇಶನ್ ಅಧ್ಯಕ್ಷ ಲೋಕೇಶ್ ಬೇಸರ ವ್ಯಕ್ತಪಡಿಸಿದರು.
ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಸಮುದಾಯದವರು ತಮ್ಮ ಜಾತಿಯ ಹಿನ್ನಲೆಯನ್ನು ಅರಿತು ಜಾತಿಯನ್ನು ಕಟ್ಟಿ ಬೆಳೆಸುವ ಕೆಲಸ ಮಾಡಬೇಕು. ಮಾಹಿತಿ ಕೊರತೆಯಿಂದ ಕೀಳಿರಿಮೆ ಮನೆಮಾಡಿದೆ. ತಮ್ಮ ಜಾತಿಯನ್ನು ಹೇಳಿಕೊಳ್ಳಲು ಸಮುದಾಯದವರೇ ಹಿಂದೇಟು ಹಾಕುತ್ತಿದ್ದಾರೆ. ಒಳ ಮೀಸಲಾತಿ ಘೋಷಣೆಯಾಗಿದ್ದು, ಅನುಷ್ಠಾನ ಬಾಕಿ ಇದೆ. ಕೇಂದ್ರ ಸರ್ಕಾರ ಒಳ ಮೀಸಲಾತಿ ವಿಚಾರವಾಗಿ ನಾವು ಜಾರಿ ಮಾಡಲು ಸಾಧ್ಯವಿಲ್ಲ ಎಂದ ಸಂದರ್ಭದಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದ ಆನೇಕಲ್ ನಾರಾಯಣ ಸ್ವಾಮಿ ಅವರ ದೃಢ ನಿರ್ಧಾರರಿಂದ ಮಂದಕೃಷ್ಣ ಮಾದಿಗ ಅವರ ಮೂಲಕ ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಸಮುದಾಯದ ಪರವಾಗಿ ಮೇಲ್ಮನವಿ ಸಲ್ಲಿಸಿ ಒಳ ಮೀಸಲಾತಿ ವಿಚಾರವಾಗಿ ಐತಿಹಾಸಿಕ ತೀರ್ಪು ಬರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನು ರಾಜ್ಯ ಸರ್ಕಾರ ಒಳಮೀಸಲಾತಿ ಘೋಷಣೆ ಮಾಡಿದ ನಂತರ ಬಹು ಮುಖ್ಯವಾದ ಪ್ರವರ್ಗ 1ಕ್ಕೆ ಸೇರ್ಪಡೆ ಮಾಡುವಲ್ಲಿ ಕೆ. ಹೆಚ್.ಮುನಿಯಪ್ಪ ಅವರ ಕಾರ್ಯ ಶ್ಲಾಘನೀಯ” ಎಂದರು.

ಇನ್ನು ಮಾದಿಗ ಸಮುದಾಯದ ಯುವ ಪೀಳಿಗೆ ಸೃಜನಾತ್ಮಕವಾದ ಕೌಶಲ್ಯವನ್ನು ಬೆಳೆಸಿಕೊಂಡು ತಮ್ಮ ಮೌಲ್ಯಯುತ ಜೀವನವನ್ನು ರೂಪಿಸಿಕೊಳ್ಳುವತ್ತ ಮುನ್ನುಗ್ಗಬೇಕು. ಮುಂದಿನ ದಿನಗಳಲ್ಲಿ ವೈಜ್ಞಾನಿಕವಾಗಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಂತವುಗಳಿಂದ ಉದ್ಯೋಗ ಅವಕಾಶಗಳು ಕಡಿಮೆಯಾಗಲಿದ್ದು, ಅವಕಾಶಗಳಿಗೆ ತಕ್ಕಂತೆ ತಮ್ಮನ್ನು ತಾವು ರೂಪಿಸಿಕೊಳ್ಳಲು ಬೇಕಾಗುವ ಶಿಕ್ಷಣವನ್ನು ಪಡೆಯಬೇಕು. ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇನ್ನು ಸೂಕ್ಷ್ಮ ಮತಿಗಳಾಗಿ ತಮಗೆ ಬರುವ ಅವಕಾಶಗಳನ್ನು ಸಾಧ್ಯವಾದಷ್ಟು ಬಳಸಿಕೊಳ್ಳಬೇಕು. ವಿವೇಕಾನಂದರ ಮಾತಿನಂತೆ ನಮ್ಮ ಆಲೋಚನೆಗಳು ಶುದ್ಧವಾಗಿರಬೇಕು, ನಮ್ಮ ಭಾವನೆಗಳು ಶುದ್ಧವಾಗಿರಬೇಕು, ಮಾತುಗಳು ಶುದ್ಧವಾಗಿರಬೇಕು, ಶಾರೀರಿಕ ಶುದ್ದಿಯಾಗಿರಬೇಕು ಈ ರೀತಿಯಲ್ಲಿ ನಮ್ಮನ್ನು ನಾವು ರೂಪಿಸಿಕೊಂಡು ಮುನ್ನುಗ್ಗಬೇಕು” ಎಂದರು.
ಸಂಘದ ಉಪಾಧ್ಯಕ್ಷ ಕೆ ಪಿ ಸುರೇಶ್ ಮಾತನಾಡಿ, “ಹಾಸನ ಜಿಲ್ಲೆಯ ಮಾದಿಗ ಸಮುದಾಯ ಇತಿಹಾಸವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುವ ಕೆಲಸ ಕೆಲವರಿಂದ ಪ್ರಾರಂಭವಾಗಿ ಅನೇಕರನ್ನು ಒಳಗೊಂಡು ಮುಂದುವರೆದಿದೆ. ಸಂಘದ ಧ್ಯೇಯೋದ್ದೇಶಗಳಲ್ಲಿ ಒಂದಾದ ಶಿಕ್ಷಣ ಪೂರ್ಣಗೊಳಿಸಿದ ಯುವ ಸಮುದಾಯಕ್ಕೆ ಔದ್ಯೋಗಿಕ ಕ್ರಾಂತಿ ಮಾಡುವ ಸಲುವಾಗಿ ತರಬೇತಿಗಳನ್ನು ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಕಡೆಗೆ ಹೋಗಲು ಅವಶ್ಯಕ ತರಬೇತಿಗಳನ್ನು ನೀಡಲಾಗುತ್ತಿದೆ, ಇಷ್ಟೇ ಅಲ್ಲದೆ ಸಮುದಾಯದಲ್ಲಿ ರಾಜಕೀಯವಾಗಿ ಮುಂದಾಳುಗಳಾಗಿರುವ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇತರರು ಒಂದು ದಿನದ ಕಾರ್ಯಗಾರಗಳನ್ನು ಸಹ ಮಾಡಲಾಗಿದೆ. ಸಂಘಕ್ಕೆ ಮಾಜಿ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಕೆ.ಹೆಚ್. ಮುನಿಯಪ್ಪ ಅವರ ಸೂಚನೆಯಂತೆ ಜಿಲ್ಲಾಧಿಕಾರಿಗಳು ಬಾಬು ಜಗಜೀವನ ರಾಮ್ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿದ್ದಾರೆ. ಇನ್ನು ಸಂಘ ವೈಯಕ್ತಿಕವಾಗಿ ಸಿಎ ನಿವೇಶನವನ್ನು ಸಹ ಕೊಂಡುಕೊಂಡಿದ್ದೇವೆ. ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸಿ ಸಮುದಾಯದ ಮುಂದಿನ ಪೀಳಿಗೆ ಮುಂದುವರಿಯಲು ಬಾಬು ಜಗಜೀವನ ಕ್ಷೇಮಾಭಿವೃದ್ಧಿ ಸಂಘ ಸದಾ ಸಮುದಾಯದ ಜೊತೆಗಿರುತ್ತದೆ ಸಂಘದ ಜೊತೆ ಜೊತೆಗೆ ಸಮುದಾಯವು ಇರಬೇಕು” ಎಂದರು.



ಇದನ್ನೂ ಓದಿ: ಹಾಸನ | ಸಹಕಾರ ಸಂಘಗಳ ಸ್ಥಾಪನೆಯಿಂದ ಆರ್ಥಿಕ ಬಲವರ್ಧನೆ ಸಾಧ್ಯ: ಶಾಸಕ ಸ್ವರೂಪ್ ಪ್ರಕಾಶ್
ಸಂಘದ ಅಧ್ಯಕ್ಷರಾದ ಬಸವರಾಜು ಅವರು ಮಾತನಾಡಿ, “ಬಾಬು ಜಗಜೀವನ ರಾಮ್ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಸಹಕಾರದಿಂದ ಸಂಘ ಮಾದಿಗ ಸಮುದಾಯದ ಅಭ್ಯುದಯಕ್ಕೆ ಶ್ರಮಿಸುತ್ತಿದ್ದು, ಸಮುದಾಯದ ಯುವ ಪೀಳಿಗೆಗೆ ಉತ್ತಮ ಜೀವನ ರೂಪಿಸಿಕೊಳ್ಳಲು ಅವಶ್ಯಕತೆ ಇರುವ ಮೌಲ್ಯಯುತ ಶಿಕ್ಷಣ ಹಾಗೂ ತರಬೇತಿಯನ್ನು ಕೊಡುವ ಕೆಲಸವನ್ನು ಮಾಡುತ್ತಿದ್ದು, ಸಮುದಾಯಕ್ಕೆ ಜಿಲ್ಲಾ ಮಟ್ಟದಲ್ಲಿ ಆಸ್ತಿ ಮಾಡುವಲ್ಲಿಯೂ ಸಹ ಸಂಘ ಯಶಸ್ವಿಯಾಗಿದೆ. ಸಂಘದ ಯಶಸ್ವಿಗೆ ಸಹಕರಿಸಿದ ಸರ್ವ ಸದಸ್ಯರಿಗೆ ಹಾಗೂ ಸಮುದಾಯದ ಬಂಧುಗಳಿಗೆ ಹೃದಯ ಪೂರ್ವಕ ಅಭಿನಂದನೆಗಳು. ಇನ್ನು ಸಂಘದ ಕಾರ್ಯವೈಖರಿಗಳನ್ನು ಮೆಚ್ಚಿ ಸಂಸದರಾದ ಶ್ರೇಯಸ್ ಪಟೇಲ್ ಅವರು ಸಂಘಕ್ಕೆ ಆರ್ಥಿಕವಾಗಿ ಸಹಕಾರ ನೀಡುವ ಹಾಗೂ ಸಮುದಾಯದ ಜೊತೆ ನಿಲ್ಲುವ ಭರವಸೆಯನ್ನು ನೀಡಿ ಸಮುದಾಯಕ್ಕೆ ಬೆಂಬಲವಾಗಿ ನಿಂತಿದ್ದು ಸಮುದಾಯದ ಪರವಾಗಿ ಅಭಿನಂದನೆ” ಎಂದರು.
ಇದೆ ವೇಳೆ ಒಳ ಮೀಸಲಾತಿ ಹೋರಾಟಕ್ಕಾಗಿ ಜೀವ ದಾನ ಮಾಡಿದ ಸಮಯದಾಯದ ಬಂಧುಗಳಿಗೆ ಹಾಗೂ ಗಣೇಶ ಉತ್ಸವದ ವೇಳೆ ಉಂಟಾದ ಅವಘಡದಿಂದ ಮರಣಹೊಂದಿದವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮೌನಾಚರಣೆ ಮಾಡಲಾಯಿತು.



ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಲ್ ಎಸ್ ಬಸವರಾಜು, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಉಪಾಧ್ಯಕ್ಷ ಶಿವಣ್ಣ, ಸುರೇಶ್ ಕೆ ಪಿ, ಉಪಾಧ್ಯಕ್ಷ ಡಾ.ಚಂದ್ರವತಿ ಯೋಗೇಶ್, ಮಾತಂಗ ಫಂಡೇಷನ್ ಸಂಘದ ಖಜಾಂಚಿ ರಂಗರಾಜು, ಮಾತಂಗ ಜಾಗೃತಿ ಸಮಿತಿ ಅಧ್ಯಕ್ಷ ವೀರಾಂಜಿನಪ್ಪ, ತುಮಕೂರು ವಿಶ್ವ ವಿದ್ಯಾಲಯದ ಪ್ರೊ.ಲಕ್ಷ್ಮೀ ರಂಗಯ್ಯ, ವೆಂಕಟೇಶ್ ಚಿಕ್ಕಬಳ್ಳಾಪುರ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶಿವಲಿಂಗಯ್ಯ, ಸಂಘದ ಸದಸ್ಯರಾದ ಗೌತಮ್, ಅಶ್ವಿನಿ ರಘು, ಧರ್ಮ, ಉಪಾಧ್ಯಕ್ಷರಾದ ಚಂದ್ರಾವತಿ ಯೋಗೇಶ್ ಸೇರಿದಂತೆ ಸಮುದಾಯದ ಮುಖಂಡರು, ವಿದ್ಯಾರ್ಥಿಗಳು, ನಿವೃತ್ತ ನೌಕರರು, ಪೋಷಕರು ಹಾಗೂ ಸಮುದಾಯದ ಬಂಧುಗಳು ಉಪಸ್ತಿತರಿದ್ದರು.