ಸಂವಿಧಾನದ ಆಶಯದಂತೆ ವನ ಸಂರಕ್ಷಣೆ ಮಾಡುವ ಹೊಣೆ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
ಧಾರವಾಡದಲ್ಲಿ 2025ನೇ ಸಾಲಿನ ಅರಣ್ಯ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, “ಸಂವಿಧಾನದ 51 (ಎ) ಪರಿಚ್ಛೇದದಲ್ಲಿ, ಭಾರತದ ಪ್ರಜೆಯಾಗಿ ನಾನು ಅರಣ್ಯ, ಸರೋವರ, ನದಿ, ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುತ್ತೇನೆ ಮತ್ತು ಉತ್ತಮಪಡಿಸುತ್ತೇನೆ. ಭಾರತದ ಸಂವಿಧಾನದ ಭಾಗವಾದ ನಾನು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಿರುತ್ತೇನೆ ಎಂದಿದೆ. ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ಪರಿಸರ ರಕ್ಷಿಸಬೇಕು” ಎಂದರು.
“ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪ್ರಸಕ್ತ ಸನ್ನಿವೇಶದಲ್ಲಿ ವನ, ವನ್ಯ ಸಂಪತ್ತಿನ ಸಂರಕ್ಷಣೆಯ ಜವಾಬ್ದಾರಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಅರಿತಿದ್ದ ನಮ್ಮ ಪೂರ್ವಿಕರು ನೈಸರ್ಗಿಕ ಸಂಪನ್ಮೂಲವನ್ನು ಹಿತಮಿತವಾಗಿ ಬಳಸುತ್ತಿದ್ದರು. ಆದರೆ ಇಂದು ಮಾನವನ ಸುಖಲೋಲುಪತೆಗಾಗಿ ಪ್ರಕೃತಿ, ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಅರಣ್ಯ ಸಂರಕ್ಷಣೆಯ ಪವಿತ್ರ ಹೊಣೆ ಹೊತ್ತಿರುವ ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು” ಎಂದರು.
“ಸೌಲಭ್ಯ ರಹಿತ ಕಾನನ ಪ್ರದೇಶದಲ್ಲಿ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿಗೆ ಕ್ರೀಡಾ ಕೂಟಗಳು ಮನರಂಜನೆಯ ಜೊತೆಗೆ ಒತ್ತಡ ನಿವಾರಿಸಲು ಸಹಕಾರಿಯಾಗುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸದೃಢ ಯುವಶಕ್ತಿಯ ಅಗತ್ಯವಿದ್ದು, ಕ್ರೀಡಾ ಚಟುವಟಿಕೆ ಯುವಜನರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸುತ್ತದೆ. ಕ್ರೀಡೆ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ನಾಗರಿಕತೆ ಆರಂಭವಾದ ದಿನದಿಂದಲೂ ಮಾನವ ತನ್ನ ದೈಹಿಕ ಸಾಮರ್ಥ್ಯ ಪ್ರದರ್ಶನಕ್ಕೆ ಮತ್ತು ಮನರಂಜನೆಗಾಗಿ ಕ್ರೀಡೆಗಳನ್ನು ಅಭಿವೃದ್ಧಿಪಡಿಸುತ್ತಾ ಬಂದಿದ್ದಾನೆ. ರಾಮಾಯಣ, ಮಹಾಭಾರತದಲ್ಲೂ ಸ್ಪರ್ಧೆಗಳ ಪ್ರಸ್ತಾಪವಿದೆ” ಎಂದರು.
ಇದನ್ನೂ ಓದಿ: ಧಾರವಾಡ | ಗಣೇಶ ವಿಸರ್ಜನೆ ವೇಳೆ ಡಿಜೆ ವಿಚಾರಕ್ಕೆ ಗುಂಪು ಜಗಳ
“1982ರಲ್ಲಿ ಆಯೋಜನಾ ಸಮಿತಿಯ ಅಧ್ಯಕ್ಷರಾಗಿದ್ದ ರಾಜೀವ್ ಗಾಂಧೀ ಅವರು ಭಾರತ ಏಷ್ಯನ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿದರು. ದೇಶದಲ್ಲಿ ಹಲವು ಕ್ರೀಡಾಂಗಣಗಳ ನಿರ್ಮಾಣವಾಯಿತು. ಕ್ರೀಡೆಗೆ ಜನಪ್ರಿಯತೆ ಲಭಿಸಿತು.
ಸರ್ಕಾರ ಕ್ರೀಡಾಪಟುಗಳಿಗೆ ಮತ್ತು ಕ್ರೀಡಾ ತರಬೇತುದಾರರಿಗೆ ಪ್ರೋತ್ಸಾಹ ನೀಡಲು ಖೇಲ್ ರತ್ನ, ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡುತ್ತಿದೆ. ಇಂದು ಇಲ್ಲಿ ಪಾಲ್ಗೊಳ್ಳುವ ಇಲಾಖೆಯ ಸಿಬ್ಬಂದಿ, ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತಾಗಲಿ” ಎಂದು ಹಾರೈಸಿದರು.
“ಸೋಲೇ ಗೆಲುವಿನ ಮೆಟ್ಟಿಲು, ಬಹುಮಾನ ಬರಲಿಲ್ಲ ಎಂದು ಯಾರೂ ಕುಗ್ಗುವ ಅಗತ್ಯವಿಲ್ಲ. ಸತತ ಅಭ್ಯಾಸದಿಂದ ಸಾಧನೆ ಸಾಧ್ಯ ಎಂದ ಅವರು, ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳು ಅರಣ್ಯ, ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಮತ್ತು ಸಂವರ್ಧನೆಗೆ ಕಟಿಬದ್ಧರಾಗಬೇಕು” ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಸಕ ಕೋನರೆಡ್ಡಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಮತ್ತಿತರರು ಪಾಲ್ಗೊಂಡಿದ್ದರು.