ಚುನಾವಣಾ ಆಯೋಗವು ಅಳವಡಿಸಿಕೊಂಡಿರುವ ಕಾರ್ಯವಿಧಾನದಲ್ಲಿ ಯಾವುದೇ ಅಕ್ರಮವು ಕಂಡು ಬಂದರೆ ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು(ಎಸ್‌ಐಆರ್) ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಎಚ್ಚರಿಕೆ ನೀಡಿದೆ.
ಬಿಹಾರದಲ್ಲಿ ಎಸ್‌ಐಆರ್‌ಗಾಗಿ ಚುನಾವಣಾ ಆಯೋಗವು ಅಳವಡಿಸಿಕೊಂಡಿರುವ ಕಾರ್ಯವಿಧಾನದಲ್ಲಿ ಯಾವುದೇ ಹಂತದಲ್ಲಿ ಅಕ್ರಮ ಕಂಡುಬಂದರೆ ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜಾಯಮಲ್ಯ ಬಾಗ್ಚಿ ಅವರ ಪೀಠವು ಖಡಕ್ಕಾಗಿ ಹೇಳಿತು.
ಎಸ್‌ಐಆರ್‌ನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದ್ದ ಪೀಠವು, ಸಾಂವಿಧಾನಿಕ ಪ್ರಾಧಿಕಾರವಾಗಿ ಚುನಾವಣಾ ಆಯೋಗವು ಎಸ್‌ಐಆರ್ ನಡೆಸುವಾಗ ಕಾನೂನಿಗೆ ಬದ್ಧವಾಗಿದೆ ಮತ್ತು ಎಲ್ಲ ಕಡ್ಡಾಯ ನಿಯಮಗಳನ್ನು ಪಾಲಿಸಿದೆ ಎಂದು ಭಾವಿಸಿ ನ್ಯಾಯಾಲಯವು ಮುಂದುವರಿಯುತ್ತಿದೆ ಎಂದು ತಿಳಿಸಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮತಾಂತರ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆ ಮತ್ತು ವಾಸ್ತವ
ಎಸ್‌ಐಆರ್ ಸಿಂಧುತ್ವ ಕುರಿತು ಅಂತಿಮ ವಾದಗಳನ್ನು ಮಂಡಿಸಲು ಅ.7ರ ದಿನಾಂಕವನ್ನು ನಿಗದಿಗೊಳಿಸಿದ ಪೀಠವು, ಎಸ್‌ಐಆರ್ ಕುರಿತು ಯಾವುದೇ ಬಿಡಿ ಅಭಿಪ್ರಾಯವನ್ನು ನೀಡಲು ನಿರಾಕರಿಸಿತು.
‘ಬಿಹಾರ ಎಸ್‌ಐಆರ್ ಕುರಿತು ನಮ್ಮ ತೀರ್ಪು ದೇಶಾದ್ಯಂತ ಎಸ್‌ಐಆರ್‌ಗೆ ಅನ್ವಯಿಸುತ್ತದೆ ’ಎಂದು ಹೇಳಿದ ಪೀಠವು, ಚುನಾವಣಾ ಆಯೋಗವು ದೇಶಾದ್ಯಂತ ಎಸ್‌ಐಆರ್ ನಡೆಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಆದಾಗ್ಯೂ,ಬಿಹಾರ ಎಸ್‌ಐಆರ್‌ನ್ನು ವಿರೋಧಿಸಿರುವ ಅರ್ಜಿದಾರರು ಅ.7ರಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ದೇಶಾದ್ಯಂತ ಎಸ್‌ಐಆರ್ ಕುರಿತು ವಾದ ಮಂಡಿಸಲು ಪೀಠವು ಅನುಮತಿ ನೀಡಿತು.
