ಮಲತಾಯಿಯೊಬ್ಬಳು 7 ವರ್ಷದ ಪುಟ್ಟ ಮಗುವಿಗೆ ಕೊಂದಿರುವ ಘಟನೆ ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆದರ್ಶ ಕಾಲೋನಿಯ ನಿವಾಸಿ ಸಿದ್ದಾಂತ ತೂಗಾಂವೆ ಎಂಬುವವರ ಪುತ್ರಿ ಸಾನ್ವಿ (7) ಕೊಲೆಯಾದ ಬಾಲಕಿ. ಘಟನೆ ಸಂಬಂಧ ಗಾಂಧಿ ಗಂಜ ಠಾಣೆಯಲ್ಲಿ ಮೃತ ಬಾಲಕಿಯ ಅಜ್ಜಿ ವಿಜಯಶ್ರೀ ತೂಗಾಂವೆ ಅವರು ದೂರು ದಾಖಲಿಸಿದ್ದಾರೆ. ಮಲತಾಯಿ ರಾಧಾ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಕಳೆದ ಆಗಸ್ಟ್ 27ರಂದು ಸಾನ್ವಿ ಮೃತಪಟ್ಟಿದ್ದು, ಮನೆಯ 3ನೇ ಮೇಲ್ಮಹಡಿಯಲ್ಲಿ ಆಟವಾಡುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದರು. ಮೃತ ಬಾಲಕಿ ತಂದೆ ಸಿದ್ಧಾಂತ ಗಾಂಧಿ ಗಂಜ್ ಠಾಣೆಗೆ ದೂರು ನೀಡಿ ಅಸ್ವಾಭಾವಿಕ ಸಾವು ಎಂದು ತಿಳಿಸಿದರು.
ಮೃತ ಬಾಲಕಿ ಸಾನ್ವಿ ತಾಯಿ ಕಾಯಿಲೆಗೆ ತುತ್ತಾಗಿ ಕಳೆದ 6 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಬಳಿಕ 2023ರಲ್ಲಿ ಮಹಾರಾಷ್ಟ್ರ ಮೂಲದ ರಾಧಾ ಜೊತೆ ಸಿದ್ಧಾಂತ ಎರಡನೇ ವಿವಾಹವಾದರು. ಅವರಿಗೆ ಎರಡು ಅವಳಿ ಮಕ್ಕಳಿವೆ.
ಸಿಸಿ ಕ್ಯಾಮೆರಾದಲ್ಲಿ ಘಟನೆ ದೃಶ್ಯ ಸೆರೆ :
ಘಟನೆ ನಡೆದು ಹಲವು ದಿನಗಳ ಬಳಿಕ ಸೆ.12ರಂದು ಪಕ್ಕದ ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸಾನ್ವಿ ಬಿದ್ದಿರುವುದು ಸೆರೆಯಾಗಿದೆ. ಬಾಲಕಿಗೆ ಮಲತಾಯಿ ರಾಧಾ ಕೆಳಗೆ ತಳ್ಳುವುದು ಸಿಸಿ ಕ್ಯಾಮೆರಾ ವಿಡಿಯೊದಲ್ಲಿ ಸೆರೆಯಾಗಿದೆ. ಮೇಲ್ಬಾವಣಿ ಮೇಲೆ ಕುರ್ಚಿ ಇಟ್ಟು ಅದರ ಮೇಲೆ ಬಕೆಟ್ ಉಲ್ಟಾ ಇಟ್ಟು ಸಾನ್ವಿಗೆ ಕೂಡಿಸಿದ್ದಾಳೆ. ತನ್ನ ಮುಖ ಯಾರಿಗೂ ಕಾಣಿಸದಂತೆ ಕೆಳಗೆ ಕುಳಿತು ಬಾಲಕಿಗೆ ಕೆಳಗೆ ತಳ್ಳಿ ಮನೆಯಲ್ಲಿ ಓಡಿ ಹೋಗಿದ್ದಾಳೆʼ ಎಂದು ಬಾಲಕಿ ಅಜ್ಜಿ ವಿಜಯಶ್ರೀ ದೂರಿನಲ್ಲಿ ಆರೋಪಿಸಿದ್ದಾರೆ.
ʼಸೊಸೆ ರಾಧಾ ಬಾಲಕಿ ಸಾನ್ವಿಗೆ ವಿನಾಕಾರಣ ಬೈಯ್ಯುವುದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಸ ಗುಡಿಸುವುದು, ಪಾತ್ರೆ, ಬಟ್ಟೆ ತೊಳೆಯಲು ಹೇಳಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಳು. ಇದನ್ನು ಗಮನಿಸಿ, ʼಮಕ್ಕಳೊಂದಿಗೆ ವ್ಯವಹಾರ ಮಾಡಬಾರದು. ಆಕೆಯು ನಿನ್ನಿಬ್ಬರ ಮಕ್ಕಳಂತೆ ಇದ್ದಾಳೆ. ನಿನ್ನ ಮಕ್ಕಳಂತೆ ಪ್ರೀತಿ, ವಾತ್ಸಲ್ಯದಿಂದ ನಡೆದುಕೊಳ್ಳಬೇಕು ಎಂದು ತಿಳುವಳಿಕೆ ಹೇಳಿದರೂ, ರಾಧಾ ಪುಟ್ಟ ಬಾಲಕಿ ಸಾನ್ವಿ ಮೇಲೆ ದ್ವೇಷ ಸಾಧಿಸುತ್ತಿದ್ದಳುʼ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಮಧ್ಯಪ್ರದೇಶದಿಂದ ಗಾಂಜಾ ಖರೀದಿ : 43 ಕೆಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದ ಮಹಿಳೆ ಪೊಲೀಸರ ವಶಕ್ಕೆ
ʼಈ ಬಗ್ಗೆ ರಾಧಾಗೆ ಪ್ರಶ್ನಿಸಿದರೆ, ತಾನು ಆ ಸಮಯದಲ್ಲಿ ಮನೆಯ ಕೊಣೆಯಲ್ಲಿ ಮಲಗಿದ್ದೆ, ನನಗೆ ಏನೂ ಗೊತ್ತಿಲ್ಲʼ ಎಂದು ಸುಳ್ಳು ಹೇಳುತ್ತಿದ್ದಾಳೆ. ಮುಂದಿನ ದಿನಗಳಲ್ಲಿ ತನ್ನ ಇಬ್ಬರ ಮಕ್ಕಳಿಗೆ ಸಾನ್ವಿ ಮುಳುವಾಗಬಹುದು ಎಂಬ ಉದ್ದೇಶದಿಂದ ಮನೆಯ ಚಾವಣಿ ಮೇಲೆ ಕರೆದೊಯ್ದು ಕೆಳಗೆ ತಳ್ಳಿ ಕೊಲೆ ಮಾಡಿದ್ದು, ಸೊಸೆ ರಾಧಾ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆʼ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.