ಪ್ರಜಾಪ್ರಭುತ್ವದ ಬಲ ಮತದಾನದ ಜಾಗೃತಿಯಲ್ಲಿ ಅಡಗಿದೆ. ಪ್ರತಿಯೊಬ್ಬರೂ ಮತದಾನದ ಮಹತ್ವವನ್ನು ಅರಿತು, ತಮ್ಮ ಮತವನ್ನು ಪ್ರಾಮಾಣಿಕವಾಗಿ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.
ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದ ಅಂಗವಾಗಿ ಸೋಮವಾರ ಬೆಳಿಗ್ಗೆ ಏರ್ಪಡಿಸಿದ್ದ ವಿದ್ಯಾರ್ಥಿಗಳಿಂದ ಮೆರವಣಿಗೆ ಹಾಗೂ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಸೈಕಲ್ ಚಾಲನೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತವು ವಿಶ್ವದ ಅತ್ಯಂತ ಯುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಯುವ ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕು. ಆಳುವ ಹೊಣೆಗಾರಿಕೆಯನ್ನು ಹೊರುವ ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ವಿದ್ಯಾರ್ಥಿಗಳು ಬೆಳೆಯಬೇಕು ಎಂದು ಹೇಳಿದರು.
“ನನ್ನ ಮತ-ನನ್ನ ಹಕ್ಕು” ಎಂಬ ಧ್ಯೇಯ ವಾಕ್ಯದಡಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತಕ್ಕೂ ಮಹತ್ವವಿದೆ ಎಂದು ತಿಳಿಸಿದ ಅವರು, ಮತ ಚಲಾಯಿಸುವ ಮೊದಲು ಯೋಚಿಸಿ ಜವಾಬ್ದಾರಿಯುತವಾಗಿ ಚಲಾಯಿಸಬೇಕು. ನಿಮ್ಮ ಮತವೇ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ ಎಂದು ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ಮಹಾನಗರದ ಪಾಲಿಕೆ ಆವರಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಘುಚಂದ್ರ ಸೇರಿದಂತೆ ವಿದ್ಯಾರ್ಥಿಗಳು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು.